ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡನೇ ದಿನದಂದು ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾ 46 ರನ್‌ಗಳಿಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನಾಯಕ ರೋಹಿತ್ ಶರ್ಮಾ ಪಡೆ ಕಿವೀಸ್ ವೇಗಿಗಳ ದಾಳಿಗೆ ಸಿಲುಕಿ 31.2 ಓವರ್‌ಗಳಲ್ಲಿ ಆಲೌಟ್ ಆಯಿತು. ರಿಷಬ್ ಪಂತ್ (20) ಹಾಗೂ ಯಶಸ್ವಿ ಜೈಸ್ವಾಲ್(13) ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್‌ಮನ್‌ಗಳ್ಯಾರು ಎರಡಂಕಿಯ ಗಡಿ ದಾಟಲಿಲ್ಲ.
ವಿರಾಟ್ ಕೊಹ್ಲಿ ಸೇರಿ ಭಾರತದ ಐವರು ಬ್ಯಾಟರ್‌ಗಳು ಶೂನ್ಯಕ್ಕೆ ಆಲೌಟ್ ಆದರು. ಮ್ಯಾಟ್ ಹೆನ್ರಿ 15/5 ಹಾಗೂ ವಿಲಿಯಂ ಒ ರೂರ್ಕ್ 22/4 ವಿಕೆಟ್ ಪಡೆದು ಭಾರತದ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳಿಸಲು ಕಾರಣರಾದರು.
ಬುಧವಾರದಿಂದ ಆರಂಭವಾಗಬೇಕಿದ್ದ ಈ ಪಂದ್ಯದ ಮೊದಲ ದಿನದಾಟವು ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ದಿನ ಆಟ ಶುರುವಾದರೂ 46 ರನ್‌ಗಳಿಗೆ ಆಲೌಟ್ ಆಯಿತು. ಹಾಗೆಯೇ ಸ್ವದೇಶದಲ್ಲಿ ಅತೀ ಕಡಿಮೆ ಮೊತ್ತಕ್ಕೆ ಆಲೌಟ್ ಆದ ದಾಖಲೆಯನ್ನು ಟೀಂ ಇಂಡಿಯಾ ತನ್ನದಾಗಿಸಿಕೊಂಡಿತು. 46 ರನ್‌ಗಳನ್ನು ಗಳಿಸುವ ಮೂಲಕ ಇಂಡಿಯಾ, ವಿಶ್ವ ಕ್ರಿಕೆಟ್‌ನಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿತು.
ಅದರಲ್ಲೂ ಇದೇ ಮೊದಲ ಬಾರಿಗೆ ಭಾರತ ತಂಡ ತವರಿನಲ್ಲಿ 50 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ. ಇದಕ್ಕೂ ಮುನ್ನ 1987 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಮ್ ಇಂಡಿಯಾ ಕೇವಲ 75 ರನ್‌ಗಳಿಗೆ ಆಲೌಟ್ ಆಗಿತ್ತು. ಇದೀಗ 37 ವರ್ಷಗಳ ಬಳಿಕ ಟೀಮ್ ಇಂಡಿಯಾ ತವರಿನಲ್ಲಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಟೀಂ ಇಂಡಿಯಾ ಕಳಪೆ ರನ್ ಗಳಿಸಿದ ಪಂದ್ಯಗಳು
* 36 ರನ್ – ಆಸ್ಟ್ರೇಲಿಯಾ ವಿರುದ್ಧ – ಡಿಲೇಡ್ ಮೈದಾನ (2020)
* 42 ರನ್ – ಇಂಗ್ಲೆಂಡ್ ವಿರುದ್ಧ – ಲಾರ್ಡ್ಸ್ ಮೈದಾನ (1974
* 46 ರನ್ – ನ್ಯೂಜಿಲೆಂಡ್ ವಿರುದ್ಧ – ಚಿನ್ನಸ್ವಾಮಿ ಕ್ರೀಡಾಂಗಣ (2024)
* 58 ರನ್ – ಆಸ್ಟ್ರೇಲಿಯಾ ವಿರುದ್ಧ – ಮ್ಯಾಂಚೆಸ್ಟರ್(1952)
* 66 ರನ್ – ದಕ್ಷಿಣ ಆಫ್ರಿಕಾ ವಿರುದ್ಧ – ಡರ್ಬನ್ ಮೈದಾನ (1996)
ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ತಾಯ್ನಾಡಿನಲ್ಲಿ ದಾಖಲಿಸಿದ ಅತ್ಯಂತ ಕಡಿಮೆ ಮೊತ್ತ
ನ್ಯೂಜಿಲೆಂಡ್ ಎದುರು 2024ರಲ್ಲಿ ಬೆಂಗಳೂರಿನಲ್ಲಿ ನಡೆದ ಟೆಸ್ಟ್‌ನಲ್ಲಿ 46ಕ್ಕೆ ಆಲ್‌ಔಟ್
ವೆಸ್ಟ್ ಇಂಡೀಸ್ ವಿರುದ್ಧ 1987ರಲ್ಲಿ ದಿಲ್ಲಿಯಲ್ಲಿ ನಡೆದ ಪಂದ್ಯದಲ್ಲಿ 75ಕ್ಕೆ ಆಲ್‌ಔಟ್
ದಕ್ಷಿಣ ಆಫ್ರಿಕಾ ಎದುರು 2008ರಲ್ಲಿ ಅಹ್ಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ 76ಕ್ಕೆ ಅಲ್‌ಔಟ್
ನ್ಯೂಜಿಲೆಂಡ್ ವಿರುದ್ಧ 1999ರಲ್ಲಿ ಮೊಹಾಲಿಯಲ್ಲಿ ನಡೆದ ಟೆಸ್ಟ್‌ನಲ್ಲಿ 83ಕ್ಕೆ ಆಲ್‌ಔಟ್
ಇಂಗ್ಲೆಂಡ್ ಎದುರು 1977ರಲ್ಲಿ ಚೆನ್ನೈನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 83ಕ್ಕೆ ಆಲ್‌ಔಟ್
ಈ ಸುದ್ದಿ ಓದಿದ್ದೀರಾ? ತೆಲಂಗಾಣ ಡಿಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡ ಕ್ರಿಕೆಟಿಗ ಮೊಹಮ್ಮದ್ ಸಿರಾಜ್
