ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದ್ದು ಕಿವೀಸ್ ಐತಿಹಾಸಿಕ ಜಯ ಗಳಿಸಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ 255 ರನ್‌ಗಳಿಗೆ ಆಲೌಟಾದ ನ್ಯೂಜಿಲೆಂಡ್ ತಂಡವು ಭಾರತ ತಂಡಕ್ಕೆ 359 ರನ್ ಗುರಿ ನೀಡಿತ್ತು. ಆದರೆ ಭಾರತ ತಂಡವು ಗುರಿಯನ್ನು ತಲುಪುವಲ್ಲಿ ವಿಫಲವಾಗಿದ್ದು 113 ರನ್‌ಗಳ ಸೋಲು ಕಂಡಿದೆ.
ಇದನ್ನು ಓದಿದ್ದೀರಾ? ಟೆಸ್ಟ್ ಸರಣಿ | ಬಾಂಗ್ಲಾದೇಶವನ್ನು ಮಣಿಸಿ ಕ್ಲೀನ್ ಸ್ವೀಪ್ ಸಾಧಿಸಿದ ಭಾರತ
1955-56ರಲ್ಲಿ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಆಡಲಾರಂಭಿಸಿದ ನ್ಯೂಜಿಲೆಂಡ್ ಈವರೆಗೂ ಗೆದ್ದಿರಲಿಲ್ಲ. ಇದೇ ಮೊದಲ ಬಾರಿಗೆ ಸರಣಿಯಲ್ಲಿ ಜಯ ಸಾಧಿಸಿದೆ. ಈವರೆಗೆ ಕಿವೀಸ್ ಕೇವಲ 3 ಬಾರಿ ಭಾರತದಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಕಂಡಿದೆ. ಭಾರತವು 12 ವರ್ಷಗಳ ಬಳಿಕ ತವರಲ್ಲಿ ಸರಣಿ ಸೋಲು ಕಂಡಿದೆ.
ಭಾರತವು 2012-13ರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಸೋಲು ಕಂಡಿತ್ತು. ಅದಾದ ಬಳಿಕ ತವರಿನಲ್ಲಿ ಸತತ 18 ಸರಣಿಗಳನ್ನು ಗೆದ್ದು ಅಜೇಯ ಎನಿಸಿಕೊಂಡಿತ್ತು.
ನ್ಯೂಜಿಲೆಂಡ್‌ನ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ (6/104) ಭಾರತವನ್ನು ಹೀನಾಯವಾಗಿ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ಯಾಂಟನರ್ ಮೊದಲ ಇನ್ನಿಂಗ್ಸ್‌ನಲ್ಲಿ 53 ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಬಳಿಸಿದ್ದರು.
