ಭಾರತ ಮತ್ತು ಶ್ರೀಲಂಕಾ ನಡುವಿನ ಏಷ್ಯಾ ಕಪ್ ಸೂಪರ್ 4 ಸುತ್ತಿನ ನಾಲ್ಕನೇ ಪಂದ್ಯ ಇಂದು (ಸೆ.12) ಕೊಲೊಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪಾಕಿಸ್ತಾನ ವಿರುದ್ಧ 228 ರನ್ಗಳ ಭರ್ಜರಿ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಅದೇ ಉತ್ಸಾಹದಲ್ಲಿ ಶ್ರೀಲಂಕಾ ವಿರುದ್ಧ ಕಣಕ್ಕಿಳಿಯಲಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಏಷ್ಯಾ ಕಪ್ 2023ರ ಸೂಪರ್ ಫೋರ್ ಸುತ್ತಿನ ಭಾರತ-ಪಾಕಿಸ್ತಾನ ನಡುವಿನ ಮೂರನೇ ಪಂದ್ಯವೂ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಮೀಸಲು ದಿನವಾದ ನಿನ್ನೆ ನಡೆದಿತ್ತು.
ಮೂದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ನಿಗದಿತ 50 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 356 ರನ್ಗಳ ಬೃಹತ್ ಮೊತ್ತ ಪೇರಿಸಿತ್ತು. ದೊಡ್ಡ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ 32 ಓವರ್ಗಳಲ್ಲಿ 128 ರನ್ ಗಳಿಸಲಷ್ಟೇ ಶಕ್ತವಾಯಿತು.
ಇಂದಿನ ಪಂದ್ಯದಲ್ಲಿ ಶಾರ್ಧೂಲ್ ಠಾಕೂರ್ ಬದಲು ಅಕ್ಸರ್ ಪಟೇಲ್ಗೆ ಅವಕಾಶ ನೀಡಲಾಗಿದೆ
ತಂಡದಲ್ಲಿ ಅನುಭವಿ ಮೊಹಮ್ಮದ್ ಶಮಿ ವೇಗದ ಬೌಲಿಂಗ್ ವಿಭಾಗದ ಸಾರಥ್ಯ ವಹಿಸಿಕೊಳ್ಳಲಿದ್ದಾರೆ. ಉಳಿದಂತೆ ಭಾರತ ತಂಡದ ಆಡುವ 11ರ ಬಳಗದಲ್ಲಿ ಹೆಚ್ಚಿನ ಬದಲಾವಣೆಯ ನಿರೀಕ್ಷೆ ಇಲ್ಲವಾಗಿದೆ.
ಈ ಸುದ್ದಿ ಓದಿದ್ದೀರಾ? ಏಷ್ಯಾ ಕಪ್ | ಕುಲ್ದೀಪ್ ಮಾರಕ ದಾಳಿ; ಪಾಕ್ ವಿರುದ್ಧ ಭಾರತಕ್ಕೆ 228 ರನ್ಗಳ ಭರ್ಜರಿ ಜಯ
ಪ್ರಬಲ ಶ್ರೀಲಂಕಾ ತಂಡ
ಆಲ್ರೌಂಡರ್ ದಸುನ್ ಶನಕ ಸಾರಥ್ಯದ ಶ್ರೀಲಂಕಾ ತಂಡದಲ್ಲಿ ಗಾಯದ ಸಮಸ್ಯೆಗಳ ಕಾರಣ ಕೆಲ ಪ್ರಮುಖ ಆಟಗಾರರು ಅಲಭ್ಯವಾಗಿದ್ದಾರೆ. ಶ್ರೀಲಂಕಾ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ರೋಚಕ ಜಯ ಗಳಿಸಿತ್ತು. ತಂಡದ ಪ್ರಮುಖ ಸ್ಪಿನ್ನರ್ ಮಹೀಶ ತೀಕ್ಷಣ ಅವರ ಪ್ರದರ್ಶನ ಇಲ್ಲಿ ನಿರ್ಣಾಯಕವಾಗುತ್ತದೆ. ಅವರಿಗೆ ದುನಿತ್ ವೆಲ್ಲಾಳಗೆ ಜೊತೆ ನೀಡಲಿದ್ದಾರೆ. ಬಲಿಷ್ಠ ಬ್ಯಾಟಿಂಗ್ ವಿಭಾಗದ ಎದುರು ಸವಾಲಾಗುವ ವಿಶ್ವಾಸದಲ್ಲಿ ಶ್ರೀಲಂಕಾದ ಸ್ಪಿನ್ನರ್ಗಳಿದ್ದಾರೆ.
ಭಾರತ ಮತ್ತು ಶ್ರೀಲಂಕಾ ತಂಡಗಳು ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಇಲ್ಲಿಯವರೆಗೂ ಒಟ್ಟು 165 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಟೀಂ ಇಂಡಿಯಾ 96 ಪಂದ್ಯಗಳಲ್ಲಿ ಜಯಗಳಿಸಿದೆ. ಶ್ರೀಲಂಕಾ 57ರಲ್ಲಿ ಗೆಲುವು ಪಡೆದಿದೆ. 11 ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ಒಂದು ಪಂದ್ಯ ಟೈ ಆಗಿದೆ.
ಕಳೆದ ನಾಲ್ಕೈದು ದಿನಗಳಿಂದ ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂ ಸುತ್ತಮುತ್ತ ಮಳೆಯಾಗುತ್ತಿದೆ. ಇಂದು ಕೂಡ ಶೇಕಡ 95 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇದ್ದು, ಗಾಳಿಯು ಗಂಟೆಗೆ 18 ಕಿಲೋ ಮೀಟರ್ ವೇಗದಲ್ಲಿದೆ.
ಪಂದ್ಯವಾಡುವ 11ರ ಬಳಗ
ಭಾರತ:
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪೀತ್ ಬೂಮ್ರಾ, ಮೊಹಮ್ಮದ್ ಸಿರಾಜ್
ಶ್ರೀಲಂಕಾ:
ಪಾತುಮ್ ನಿಸಾಂಕ, ದಿಮುತ್ ಕರುಣಾರತ್ನೆ, ಕುಶಾಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಣ
ಪಂದ್ಯದ ಸಮಯ: ಮಧ್ಯಾಹ್ನ 3:00 ಗಂಟೆಗೆ
ನೇರ ಪ್ರಸಾರ
ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ + ಹಾಟ್ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್ಸೈಟ್