ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಪಂದ್ಯವು ಅಪರೂಪದ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.
ಐಪಿಎಲ್ನಲ್ಲಿ ಪರಸ್ಪರ ಎದುರಾಳಿಯಾಗಿ ಆಡುವಾಗ ಮೈದಾನದಲ್ಲೇ ಜಗಳಕ್ಕೆ ಕುಖ್ಯಾತಿಯನ್ನು ಪಡೆದಿದ್ದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪರಸ್ಪರ ಅಪ್ಪಿಕೊಳ್ಳುವ ಮೂಲಕ ನೆರೆದಿದ್ದ ಪ್ರೇಕ್ಷಕರು ಮತ್ತು ಕ್ರಿಕೆಟ್ ಲೋಕವನ್ನು ಅಚ್ಚರಿಗೊಳಿಸಿದರು.
Our favourite strategic timeout ever 🫂#IPLonJioCinema #RCBvKKR #TATAIPL #JioCinemaSports pic.twitter.com/A50VPhD6RI
— JioCinema (@JioCinema) March 29, 2024
ಆರ್ಸಿಬಿ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ವೇಳೆ ಪಾನೀಯ ವಿರಾಮದ ಸಮಯದಲ್ಲಿ ಮೈದಾನಕ್ಕೆ ಬಂದ ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್, ವಿರಾಟ್ ಕೊಹ್ಲಿ ಬಳಿ ಹೋಗಿ ಪ್ರೀತಿಯಿಂದ ಅಪ್ಪುಗೆಯ ವಿನಿಮಯ ಹಂಚಿಕೊಂಡರು.
ಈ ಮೂಲಕ ಆರ್ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ನಡುವಿನ ವೈಯಕ್ತಿಕ ಜಿದ್ದು ಎಲ್ಲವೂ ಸರಿಯಾಗಿದಂತೆ ಕಂಡುಬಂತು. ಗಂಭೀರ್ ಮತ್ತು ಕೊಹ್ಲಿ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದರೊಂದಿಗೆ ಇಬ್ಬರ ನಡುವಿನ ದ್ವೇಷದ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.
VIRAT KOHLI HUGGING GAUTAM GAMBHIR. 💥 pic.twitter.com/jOj5vNO6n9
— Mufaddal Vohra (@mufaddal_vohra) March 29, 2024
ಅಪ್ಪುಗೆ ಸಂದರ್ಭದಲ್ಲಿ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆಯಾಗಿರುವುದಕ್ಕೆ ಅಭಿನಂದನೆ ತಿಳಿಸಿದರು ಮತ್ತು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಕ್ಕೆ ಶ್ಲಾಘಿಸಿದರು ಎನ್ನಲಾಗುತ್ತಿದೆ. ಇವರು ಪರಸ್ಪರ ಅಪ್ಪಿಕೊಂಡ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಕೇಕೆ ಹೊಡೆದರು. ಸದ್ಯ ಇವರಿಬ್ಬರ ಅಪ್ಪುಗೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲಾಗಿದೆ.
Who would've thought the fight would end before it started. Bhaichara on top. #RCBvsKKR pic.twitter.com/WCpRjP1LNI
— Tigerexch (@tigerexch) March 29, 2024
ಆರ್ಸಿಬಿ ಹಾಗೂ ಕೆಕೆಆರ್ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ತೆಗೆಯಲಾಗಿದ್ದ ವಿರಾಟ್ ಕೊಹ್ಲಿ ಹಾಗೂ ಗಂಭೀರ್ ಅವರ ಒಂದು ಫೋಟೋ ಕೂಡ ವೈರಲಾಗಿತ್ತು. ಹೀಗಾಗಿ, ಪಂದ್ಯದಲ್ಲೂ ಕೂಡ ಮತ್ತೆ ಹಳೆಯ ಶೈಲಿಯಂತೆ ಜಗಳವಾಗಬಹುದು ಎಂದು ಅಭಿಮಾನಿಗಳು ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ, ಆ ಫೋಟೋವನ್ನು ಕೆಕೆಆರ್ ಕೂಡ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ Cricket images that hit Hard ಎಂದು ಹಂಚಿಕೊಳ್ಳುವ ಮೂಲಕ ಇನ್ನಷ್ಟು ಕುತೂಹಲ ಕೆರಳಿಸಿತ್ತು.
Cricket images that hit hard 🥶 pic.twitter.com/QYf5LanzYQ
— KolkataKnightRiders (@KKRiders) March 29, 2024
ಐಪಿಎಲ್ 2023ರಲ್ಲಿ ಕೊಹ್ಲಿ ಮತ್ತು ಗಂಭೀರ್ ಕೊನೆಯ ಬಾರಿಗೆ ಮುಖಾಮುಖಿಯಾದಾಗ, ಕ್ರಿಕೆಟ್ ಲೋಕವು ಎಂದೂ ಮರೆಯದ ವಾಗ್ವಾದಕ್ಕೆ ಕಾರಣರಾಗಿದ್ದರು.
ಕಳೆದ ವರ್ಷ ಗೌತಮ್ ಗಂಭೀರ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದರು ಮತ್ತು ಆರ್ಸಿಬಿ ವಿರುದ್ಧದ ಪಂದ್ಯದ ನಂತರ, ವಿರಾಟ್ ಕೊಹ್ಲಿಯೊಂದಿಗೆ ಮೈದಾನದಲ್ಲಿ ತೀವ್ರ ವಾಗ್ವಾದ ನಡೆಸಿದ್ದರು. ಆ ಘಟನೆಯ ಬಳಿಕ ಇಬ್ಬರಿಗೂ ಪಂದ್ಯದ ಶೇ.100ರಷ್ಟು ದಂಡ ವಿಧಿಸಲಾಗಿತ್ತು. ಇದು ಇಬ್ಬರ ನಡುವೆ ಮೈದಾನದಲ್ಲಿ ನಡೆದ ಮೊದಲ ವಾಗ್ವಾದವೇನೂ ಆಗಿರಲಿಲ್ಲ. ಈ ಹಿಂದೆ ಕೂಡ ಮೈದಾನದಲ್ಲೇ ಪರಸ್ಪರ ಜಗಳಾಡಿಕೊಂಡು ಸುದ್ದಿಯಾಗಿದ್ದರು.
ಆದರೆ, ಶುಕ್ರವಾರ ನಡೆದ ಆರ್ಸಿಬಿ ಮತ್ತು ಕೆಕೆಆರ್ ಪಂದ್ಯದಲ್ಲಿ ನಡೆದದ್ದು ಇದಕ್ಕೆ ತದ್ವಿರುದ್ಧವಾಗಿ ನಡೆದಾಗ ನೆರೆದಿದ್ದ ಹಾಗೂ ಐಪಿಎಲ್ ಪಂದ್ಯ ನೋಡುತ್ತಿದ್ದವರೂ ಕೂಡ ಒಮ್ಮೆಗೆ ಅವಾಕ್ಕಾಗಿದ್ದಾರೆ. ಏನೇ ಇರಲಿ, ಇಬ್ಬರೂ ಪರಸ್ಪರ ಅಪ್ಪಿಕೊಳ್ಳುವ ಮೂಲಕ ಎಲ್ಲದಕ್ಕೂ ತಿಲಾಂಜಲಿ ಇಟ್ಟಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ತಂದಿದೆ.
ನಿನ್ನೆ ನಡೆದಿದ್ದ ಪಂದ್ಯದಲ್ಲಿ, ನೆರೆದಿದ್ದ ತವರಿನ ಅಭಿಮಾನಿಗಳ ಎದುರು ಕೊನೆಯವರೆಗೂ ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ 83 ರನ್ ಬಾರಿಸಿದರು. ಆದರೆ, ಈ ಪಂದ್ಯದಲ್ಲಿ ಆರ್ಸಿಬಿ ಬೌಲಿಂಗ್ ಕೈಕೊಟ್ಟ ಪರಿಣಾಮ, ಕೆಕೆಆರ್ ಎದುರು ಏಳು ವಿಕೆಟ್ಗಳಿಂದ ಸೋಲೊಪ್ಪಿತು.
