ಬೆಂಗಳೂರು : ಐಪಿಎಲ್‌ನ 16ನೇ ಆವೃತ್ತಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯವನ್ನಾಡುತ್ತಿರುವ ಆರ್‌ಸಿಬಿ ಪರವಾಗಿ, ವಿರಾಟ್ ಕೊಹ್ಲಿ ಶತಕ ಬಾರಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ತನ್ನದಾಗಿಸಿಕೊಂಡಿದ್ದಾರೆ. ಸನ್‌ರೈಸರ್ಸ್ ವಿರುದ್ಧ ನಡೆದಿದ್ದ ಕಳೆದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ, ಐಪಿಎಲ್‌ನಲ್ಲಿ ಆರು ಶತಕ ಸಿಡಿಸಿದ್ದ ಕ್ರಿಸ್ ಗೇಲ್ ಅವರನ್ನು ದಾಖಲೆಯನ್ನು ಸರಿಗಟ್ಟಿದ್ದರು.
ಗುಜರಾತ್ ಟೈಟಾನ್ಸ್ ವಿರುದ್ಧ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕೂಡ ಕೊಹ್ಲಿ ಶತಕ ಬಾರಿಸಿ, ಐಪಿಎಲ್‌ನಲ್ಲಿ ಏಳು ಶತಕ ದಾಖಲಿಸಿ, ಹೊಸ ದಾಖಲೆ ಬರೆದಿದ್ದಾರೆ.
60 ಎಸೆತಗಳಲ್ಲಿ ಶತಕ ದಾಖಲಿಸಿದ ಕೊಹ್ಲಿ, ಐಪಿಎಲ್‌ನಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿದ ಮೊದಲ ಆರ್‌ಸಿಬಿ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 102 ನಿಮಿಷ ಕ್ರೀಸ್‌ನಲ್ಲಿ ನಿಂತು, ಒಟ್ಟು 61 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ, 101 ರನ್ ಗಳಿಸಿ ಅಜೇಯರಾಗುಳಿದರು.
ಐಪಿಎಲ್‌ನಲ್ಲಿ ಈವರೆಗೆ ಕ್ರಿಸ್ ಗೇಲ್ 6 ಶತಕ, ಜೋಸ್ ಬಟ್ಲರ್ 5 ಶತಕ, ಕೆ ಎಲ್ ರಾಹುಲ್ 4 ಶತಕ ಬಾರಿಸಿರುವ ದಾಖಲೆ ಹೊಂದಿದ್ದಾರೆ.
ಮಳೆಯಿಂದಾಗಿ ಒಂದು ಗಂಟೆ ತಡವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾದ ಇಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಟಾಸ್ ಗೆದ್ದು, ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದ್ದು, ಗುಜರಾತ್ ಗೆಲುವಿಗೆ ಆರ್‌ಸಿಬಿ 198 ರನ್‌ಗಳ ಗುರಿ ನೀಡಿದೆ.
ಈ ಪಂದ್ಯವನ್ನು ಆರ್‌ಸಿಬಿ ಗೆದ್ದರೆ, ಈ ಬಾರಿಯ ಐಪಿಎಲ್‌ನಲ್ಲಿ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಲಿದೆ. ಒಂದು ವೇಳೆ, ಆರ್‌ಸಿಬಿ ಗೆಲುವು ಪಡೆದು ಪ್ಲೇ ಆಫ್ ಪ್ರವೇಶಿಸಿದರೆ, ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಿಂದ ಹೊರಬೀಳಲಿದೆ.