ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವು 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಆರ್ಸಿಬಿ ವಿರುದ್ಧದ ಈ ಗೆಲುವಿನೊಂದಿಗೆ ಕೆಕೆಆರ್ ತಂಡವು ಪ್ರಸಕ್ತ ಐಪಿಎಲ್ 2024ರಲ್ಲಿ ತವರಿನ ಹೊರಗೆ ಮೊದಲ ತಂಡ ಎನಿಸಿತು ಮತ್ತು ಈ ಪಂದ್ಯಾವಳಿಯಲ್ಲಿ ತನ್ನ ಎರಡನೇ ಗೆಲುವು ಕಂಡಿತು. ಇತ್ತ ಆರ್ಸಿಬಿ ಆಡಿದ ಮೂರು ಪಂದ್ಯಗಳಲ್ಲಿ ಎರಡು ಸೋಲು ಮತ್ತು ಒಂದು ಗೆಲುವು ಮಾತ್ರ ಪಡೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ವಿರಾಟ್ ಕೊಹ್ಲಿ ಅವರ ಭರ್ಜರಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು.
ಆರ್ಸಿಬಿ ನೀಡಿದ್ದ 183 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸುನಿಲ್ ನರೈನ್ ಮತ್ತು ವೆಂಕಟೇಶ್ ಅಯ್ಯರ್ ಅವರ ಸ್ಫೋಟಕ ಬ್ಯಾಟಿಂಗ್ನ ನೆರವಿನಿಂದ 16.5 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.
Consecutive wins for the Knight Riders 💪🔥#RCBvKKR #IPLonJioCinema #TATAIPL #JioCinemaSports pic.twitter.com/zD3aKbjQk8
— JioCinema (@JioCinema) March 29, 2024
ತೀರಾ ಕೆಟ್ಟ ಬೌಲಿಂಗ್ ಪ್ರದರ್ಶನ ನೀಡಿದ ಆರ್ಸಿಬಿ ತಂಡ ಆರಂಭದಿಂದಲೇ ರನ್ಗಳನ್ನು ಬಿಟ್ಟುಕೊಟ್ಟಿತು. ಕೆಕೆಆರ್ ತಂಡದ ಬ್ಯಾಟರ್ಗಳು ಆರ್ಸಿಬಿ ಬೌಲರ್ಗಳ ಮೇಲೆ ಸವಾರಿಗೈದರು.
ಕೆಕೆಆರ್ ಆರಂಭಿಕ ಬ್ಯಾಟರ್ಗಳಾದ ಸುನಿಲ್ ನರೈನ್ ಮತ್ತು ಫಿಲ್ ಸಾಲ್ಟ್ ಉತ್ತಮ ಆರಂಭ ನೀಡಿದರು ಮತ್ತು ಈ ಜೋಡಿ ಮೊದಲ ವಿಕೆಟ್ಗೆ 6.3 ಓವರ್ಗಳಲ್ಲಿ 86 ರನ್ಗಳ ಜೊತೆಯಾಟ ನಿರ್ಮಿಸಿತು. ಸುನಿಲ್ ನರೈನ್ 22 ಎಸೆತಗಳಲ್ಲಿ 2 ಬೌಂಡರಿ ಹಾಗೂ 5 ಸಿಕ್ಸರ್ಗಳ ಮೂಲಕ 47 ರನ್ ಬಾರಿಸಿದರೆ, ಫಿಲ್ ಸಾಲ್ಟ್ 20 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 30 ರನ್ ಗಳಿಸಿದರು.
ನಂತರ ಬಂದ ವೆಂಕಟೇಶ್ ಅಯ್ಯರ್ ಆರ್ಸಿಬಿ ಬೌಲರ್ಗಳನ್ನು ದಂಡಿಸಿದರು. ಇವರು 30 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ಗಳ ನೆರವಿನಿಂದ 50 ರನ್ ಬಾರಿಸಿದರು. ಶ್ರೇಯಸ್ ಅಯ್ಯರ್ 24 ಎಸೆತಗಳನ್ನು ಎದುರಿಸಿ 2 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ ಅಜೇಯ 39 ರನ್ ಗಳಿಸಿದರೆ, ರಿಂಕು ಸಿಂಗ್ ಅಜೇಯ 5 ರನ್ ಗಳಿಸಿ ಕೆಕೆಆರ್ ಗೆಲುವಿಗೆ ನೆರವಾದರು. ಸುನಿಲ್ ನರೈನ್ ಪಂದ್ಯಶ್ರೇಷ್ಢ ಪ್ರಶಸ್ತಿಗೆ ಭಾಜನರಾದರು.
What a moment to celebrate your 5️⃣0️⃣0️⃣th T20 match 👏👏
Sunil Narine receives the Player of the Match award for his breathtaking 47(22) 🏆
Scorecard ▶️ https://t.co/CJLmcs7aNa#TATAIPL | #RCBvKKR pic.twitter.com/2GgjpcmEWE
— IndianPremierLeague (@IPL) March 29, 2024
ಬೌಲಿಂಗ್ನಲ್ಲಿ ಆರ್ಸಿಬಿ ತಂಡದ ಪರ ವಿಜಯ್ಕುಮಾರ್ ವೈಶಾಕ್ 4 ಓವರ್ಗಳಲ್ಲಿ 23 ರನ್ ನೀಡಿ 1 ವಿಕೆಟ್ ಪಡೆದರೆ, ಯಶ್ ದಯಾಳ್ 4 ಓವರ್ಗಳಲ್ಲಿ 46 ರನ್ ನೀಡಿ 1 ವಿಕೆಟ್ ಪಡೆದರು. ಮಯಾಂಕ್ ಡಾಗರ್ 2.5 ಓವರ್ಗಳಲ್ಲಿ 23 ರನ್ ನೀಡಿ 1 ವಿಕೆಟ್ ತಮ್ಮದಾಗಿಸಿಕೊಂಡರು.
