- ದೋಹಾದಲ್ಲಿ ಶುಕ್ರವಾರ ರಾತ್ರಿ ನಡೆದ ಡೈಮಂಡ್ ಲೀಗ್ ಸ್ಪರ್ಧೆ
- ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ
ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ, ಜಾವೆಲಿನ್ ಅಥ್ಲಿಟ್ ಭಾರತದ ನೀರಜ್ ಚೋಪ್ರಾ, ಡೈಮಂಡ್ ಲೀಗ್‌ನಲ್ಲಿ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆಲ್ಲುವ ಮೂಲಕ ಮೈಲುಗಲ್ಲು ಸ್ಥಾಪಿಸಿದ್ದಾರೆ.
ದೋಹಾದಲ್ಲಿ ಶುಕ್ರವಾರ ರಾತ್ರಿ ನಡೆದ ಡೈಮಂಡ್ ಲೀಗ್ ಸ್ಪರ್ಧೆಯಲ್ಲಿ ಹಾಲಿ ಚಾಂಪಿಯನ್ ಚೋಪ್ರಾ, ಮೊದಲ ಪ್ರಯತ್ನದಲ್ಲೇ 88.67 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಚೋಪ್ರಾಗಿಂತ ಕೇವಲ ನಾಲ್ಕು ಸೆಂಟಿಮೀಟರ್‌ನಷ್ಟು ಹಿಂದೆ ಉಳಿದ ಜೆಕ್ ರಿಪಬ್ಲಿಕ್‌ನ ಜಾಕುಬ್ ವಾಡ್ಲೆಚ್ (88.63 ಮೀ.) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಟೋಕಿಯೊ ಒಲಿಂಪಿಕ್ಸ್ ಮತ್ತು ಕಳೆದ ವರ್ಷದ ದೋಹಾ ಡೈಮಂಡ್ ಲೀಗ್‌ನಲ್ಲೂ ವಡ್ಲೆಜ್ ಬೆಳ್ಳಿ ಗೆದ್ದಿದ್ದರು.
ವಿಶ್ವ ಚಾಂಪಿಯನ್, ಗ್ರೆನಡಾದ ಆ್ಯಂಡರ್‌ಸನ್ ಪೀಟರ್ಸ್, 85.88 ಮೀಟರ್ ದೂರ ದಾಖಲಿಸಿ ತೃತೀಯ ಸ್ಥಾನಿಯಾದರು. ಕಳೆದ ವರ್ಷದ ದೋಹಾ ಡೈಮಂಡ್ ಲೀಗ್‌ನಲ್ಲಿ 93.07 ಮೀಟರ್ ದೂರ ದಾಖಲಿಸಿದ್ದ ಆ್ಯಂಡರ್‌ಸನ್ ಪೀಟರ್ಸ್, ಚಿನ್ನದ ಪದಕ ಗೆದ್ದಿದ್ದರು.
ಈ ಸುದ್ದಿ ಓದಿದ್ದೀರಾ? : ಐಪಿಎಲ್ 2023 | ಪಂಜಾಬ್ vs ಮುಂಬೈ; ಇಶಾನ್-ಸೂರ್ಯಕುಮಾರ್ ಹೋರಾಟಕ್ಕೆ ಒಲಿದ ಗೆಲುವು
ಪುರುಷರ ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಏಷ್ಯಾದ ಮೊದಲ ಅಥ್ಲಿಟ್ ಎಂಬ ದಾಖಲೆಯು ನೀರಜ್ ಚೋಪ್ರಾ ಹೆಸರಲ್ಲಿದೆ.
ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.