ಮಧ್ಯಮ ಕ್ರಮಾಂಕದ ಆಟಗಾರ ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರ ಅಮೋಘ ಶತಕ ಹಾಗೂ ಬೌಲರ್ ಟಿಮ್ ಸೌಥಿ ಅವರ ಭರ್ಜರಿ ಅರ್ಧ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 91.3 ಓವರ್‌ಗಳಲ್ಲಿ 402 ಗಳನ್ನು ದಾಖಲಿಸಿ, 356 ರನ್‌ಗಳ ಮುನ್ನಡೆ ಪಡೆದಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೂರನೇ ದಿನವಾದ ಇಂದು 180/3 ವಿಕೆಟ್ ನಷ್ಟದೊಂದಿಗೆ ಆಟ ಆರಂಭಿಸಿದ ಕಿವೀಸ್ ಪಡೆಗೆ ರಚಿನ್ ರವೀಂದ್ರ ಹಾಗೂ ಟಿಮ್ ಸೌಥಿ ಆಸರೆಯಾದರು. ಉಳಿದ ಬ್ಯಾಟರ್‌ಗಳು ಭಾರತದ ಬೌಲಿಂಗ್ ದಾಳಿಗೆ ಸಿಲುಕಿ ಪೆವಿಲಿಯನ್‌ಗೆ ತೆರಳುತ್ತಿದ್ದರೆ ರಚಿನ್ ರವೀಂದ್ರ ಹಾಗೂ ಟಿಮ್ ಸೌಥಿ ಉತ್ತಮ ಜೊತೆಯಾಟದೊಂದಿಗೆ ತಂಡವನ್ನು 400 ಗಡಿ ದಾಟಲು ಕಾರಣರಾದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣ ಡಿಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡ ಕ್ರಿಕೆಟಿಗ ಮೊಹಮ್ಮದ್ ಸಿರಾಜ್
137 ರನ್‌ಗಳ 8ನೇ ವಿಕೆಟ್ ಜೊತೆಯಾಟದೊಂದಿಗೆ ಇಬ್ಬರು ಆಟಗಾರರು ಭರ್ಜರಿ ಆಟವಾಡಿದರು. ರಚಿನ್ ರವೀಂದ್ರ 157 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 137 ರನ್ ಬಾರಿಸಿದರು. ರಚಿನ್‌ಗೆ ಉತ್ತಮ ಜೊತೆ ನೀಡಿದ ಟಿಮ್ ಸೌಥಿ 73 ಚೆಂಡುಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ 65 ರನ್ ಸಿಡಿಸಿದರು.
ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ ಹಾಗೂ ಕುಲ್‌ದೀಪ್ ಯಾದವ್ ತಲಾ 3 ವಿಕೆಟ್, ಸಿರಾಜ್ 2 ಹಾಗೂ ಅಶ್ವಿನ್, ಬುಮ್ರಾ ತಲಾ ಒಂದೊಂದು ವಿಕೆಟ್ ಕಬಳಿಸಿ ನ್ಯೂಜಿಲೆಂಡ್ ಆಲೌಟ್ ಆಗಲು ಪ್ರಮುಖ ಪಾತ್ರ ವಹಿಸಿದರು.
2ನೇ ಇನಿಂಗ್ಸ್ ಆರಂಭಿಸಿರುವ ಭಾರತ ಟೀ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 6 ಓವರ್‌ಗಳಲ್ಲಿ 22 ರನ್ ಗಳಿಸಿತ್ತು.
