ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದ್ದರೂ, ತಂಡದ ಪಾಳಯಯು ಕಳೆದ ಬಾರಿಯ ಆದ ನೋವನ್ನು ಮರೆತಿಲ್ಲ. ಕಳೆದ ವರ್ಷದ (2025) ವಿಜಯೋತ್ಸವದ ವೇಳೆ ಸಂಭವಿಸಿದ ದುರಂತದ ಕಹಿನೆನಪು ಇಡೀ ಕ್ರೀಡಾಲೋಕವನ್ನು ಈಗಲೂ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಆರ್ಸಿಬಿ ಆಡಳಿತ ಮಂಡಳಿಯು ಈ ಬಾರಿಯ ಎಲ್ಲಾ ವಿಜಯೋತ್ಸವ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಅಲ್ಲದೆ, ಸತತವಾಗಿ ಒಲಿದ ಈ ಐತಿಹಾಸಿಕ ಟ್ರೋಫಿಯನ್ನು 2025ರ ಕಾಲ್ತುಳಿತದಲ್ಲಿ ಅಸುನೀಗಿದ 11 ಅಭಿಮಾನಿಗಳಿಗೆ ಸಮರ್ಪಿಸಿದೆ.
2025ರಲ್ಲಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಬೆನ್ನಲ್ಲೇ, ಆರ್ಸಿಬಿ ಆಡಳಿತ ಮಂಡಳಿ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿ ವಿಜಯೋತ್ಸವ ಸಮಾರಂಭವನ್ನು ಹಮ್ಮಿಕೊಂಡಿದ್ದವು. ತಂಡದ ಚೊಚ್ಚಲ ಗೆಲುವಿನ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಅಭಿಮಾನಿಗಳು ಕ್ರೀಡಾಂಗಣದತ್ತ ಹರಿದುಬಂದಿದ್ದರು. ಈ ವೇಳೆ ಉಂಟಾದ ವಿಪರೀತ ನೂಕುನುಗ್ಗಲು ಮತ್ತು ಜನದಟ್ಟಣೆಯಿಂದಾಗಿ ಭೀಕರ ಕಾಲ್ತುಳಿತ ಸಂಭವಿಸಿತ್ತು. ಗೆಲುವಿನ ಕೇಕೆ ಹಾಕುತ್ತಾ, ಕುಣಿದು ಕುಪ್ಪಳಿಸುತ್ತಿದ್ದ 11 ಅಮಾಯಕ ಜೀವಗಳು ಆ ದುರ್ಘಟನೆಯಲ್ಲಿ ಉಸಿರು ಚೆಲ್ಲಿ, ಹಲವರು ಗಾಯಗೊಂಡಿದ್ದರು.
ಆ ಹೃದಯ ವಿದ್ರಾವಕ ಘಟನೆಯ ಆಘಾತದಿಂದ ಇನ್ನೂ ಹೊರಬರದ ಆರ್ಸಿಬಿ ಆಡಳಿತ ಮಂಡಳಿಯು, ಈ ಬಾರಿ ಬೃಹತ್ ರೋಡ್ ಶೋ ಸೇರಿದಂತೆ ಎಲ್ಲಾ ಸಂಭ್ರಮಾಚರಣೆಗಳನ್ನು ಕೈಬಿಟ್ಟಿದೆ. “ಅಭಿಮಾನಿಗಳೇ ನಮ್ಮ ಉಸಿರು. ಕಳೆದ ವರ್ಷ ನಮಗಾಗಿ ಪ್ರಾಣ ಬಿಟ್ಟ ಅಭಿಮಾನಿಗಳಿಗಿಂತ ಈ ಟ್ರೋಫಿ ಖಂಡಿತಾ ದೊಡ್ಡದಲ್ಲ. ನಮ್ಮ ಈ ಎರಡನೇ ಕಪ್ ಅನ್ನು 2025ರ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತದಲ್ಲಿ ಮೃತಪಟ್ಟ 11 ದೇವದೂತರಿಗೆ ಅತ್ಯಂತ ಭಾರವಾದ ಹೃದಯದಿಂದ ಸಮರ್ಪಿಸುತ್ತಿದ್ದೇವೆ” ಎಂದು ಫ್ರಾಂಚೈಸಿ ಕಂಬನಿ ಮಿಡಿದಿದೆ.
ಇದನ್ನು ಓದಿದ್ದೀರಾ? BREAKING NEWS | ಈ ಬಾರಿಯೂ ‘ಕಪ್ ನಮ್ದೇ’ ಎಂದ ಆರ್ಸಿಬಿ: ಗುಜರಾತ್ ಮಣಿಸಿ ಸತತ 2ನೇ ಬಾರಿ IPL ಕಿರೀಟ
ಅಂದಿನ ದುರಂತದಲ್ಲಿ ಶೋಕತಪ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದ ಆರ್ಸಿಬಿ, ಮೃತ 11 ಅಭಿಮಾನಿಗಳ ಕುಟುಂಬಗಳಿಗೆ ಸೂಕ್ತ ಆರ್ಥಿಕ ಪರಿಹಾರ ನೀಡಿ, ಗಾಯಾಳುಗಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಿತ್ತು. ಸ್ವತಃ ಸಿಎಂ, ಡಿಸಿಎಂ ಆಸ್ಪತ್ರೆಗಳಿಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು. ಆ ಕಹಿ ಘಟನೆಯ ನೆನಪಿನಲ್ಲಿ, ಈ ಬಾರಿಯೂ ಯಾವುದೇ ಸಂಭ್ರಮಾಚರಣೆ ಬೇಡ ಎಂದು ಫ್ರಾಂಚೈಸಿ ನಿರ್ಧರಿಸಿದೆ.
ಕ್ರೀಡೆಯನ್ನು ಪ್ರೀತಿಸಬೇಕು, ಆದರೆ ಆ ಸಂಭ್ರಮವು ಜೀವಕ್ಕೆ ಕುತ್ತು ತರುವಂತಿರಬಾರದು ಎಂಬ ಪಾಠವನ್ನು ಅಂದಿನ ದುರಂತ ಕಲಿಸಿದೆ. ಸತತ ಕಪ್ ಗೆದ್ದ ಖುಷಿಗಿಂತ, 2025ರ ಚೊಚ್ಚಲ ಸಂಭ್ರಮದಲ್ಲಿ 11 ಅಮಾಯಕ ಜೀವಗಳನ್ನು ಕಳೆದುಕೊಂಡ ಅಗಾಧ ನೋವು ಆರ್ಸಿಬಿ ಇತಿಹಾಸದಲ್ಲಿ ಅಳಿಸಲಾಗದ ಕಹಿನೆನಪಾಗಿ ಉಳಿದಿದೆ.





