ಟಿ20 ಕ್ರಿಕೆಟ್ ಸರಣಿ | ಹೊಸ ಆಟಗಾರರಿಗೊಂದು ಉತ್ತಮ ಅವಕಾಶ

Date:

Advertisements
ಇದು ಭಾರತ ಕ್ರಿಕೆಟ್ ತಂಡಕ್ಕೆ ಸಂಕ್ರಮಣ ಕಾಲ. ಹಳಬರು ಹಿನ್ನೆಲೆಗೆ ಸರಿದು, ಹೊಸಬರಿಗೆ ಅವಕಾಶ ಮಾಡಿಕೊಡುವ ಕಾಲ. ಅದಕ್ಕೆ ಸೌತ್ ಆಫ್ರಿಕಾ ಎದುರಿನ ಟಿ20 ಸರಣಿ ಉತ್ತಮ ವೇದಿಕೆ ಒದಗಿಸಿಕೊಟ್ಟರೂ ಆಶ್ಚರ್ಯವಿಲ್ಲ. ಯಾರೆಲ್ಲ ಬಳಸಿಕೊಂಡು ಬೆಳೆಯುತ್ತಾರೋ, ಗೊತ್ತಿಲ್ಲ.

ನ್ಯೂಜಿಲೆಂಡ್ ತಂಡದಿಂದ ಸರಣಿ ಸೋತು ಗಾಯ ನೆಕ್ಕುತ್ತ ಕೂತಿರುವ ಭಾರತೀಯ ಕ್ರಿಕೆಟ್ ತಂಡ, ಅಭಿಮಾನಿಗಳ ಅವಕೃಪೆಗೊಳಗಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಲೇವಡಿಗೆ, ಟೀಕೆಗೆ ಗುರಿಯಾಗಿದೆ. ಹಾಗೆ ನೋಡಿದರೆ, ನ್ಯೂಜಿಲೆಂಡ್ ತಂಡದಲ್ಲಿ ಅಂತಹ ಸ್ಟಾರ್ ಆಟಗಾರರು ಯಾರೂ ಇರಲಿಲ್ಲ. ಬೌಲಿಂಗ್ ಕೂಡ ವಿಶೇಷವಾಗಿರಲಿಲ್ಲ. ಅದರಲ್ಲೂ ಸ್ಪಿನ್ ಮಾಂತ್ರಿಕರನ್ನು- ಪ್ರಸನ್ನರಿಂದ ಹಿಡಿದು ವಾಷಿಂಗ್ಟನ್ ಸುಂದರ್‍‌ವರೆಗೆ- ಮೈದಾನಕ್ಕಿಳಿಸುವಲ್ಲಿ ಖ್ಯಾತಿ ಗಳಿಸಿದ ಭಾರತೀಯ ಕ್ರಿಕೆಟ್ ತಂಡ, ನಮ್ಮಿಂದಲೇ ಕಲಿತ ನ್ಯೂಜಿಲೆಂಡ್ ಸ್ಪಿನ್ ದಾಳಿಗೆ ದಡ ದಡಾಂತ ಉರುಳಿಬಿದ್ದಿದ್ದು, ಹಾಸ್ಪಾಸ್ಪದವಾಗಿತ್ತು. ನೋಡುಗರಲ್ಲಿ ಸಿಟ್ಟು ತರಿಸಿ, ಪಿತ್ತ ಕೆರಳಿಸಿತ್ತು.   

ಅದರಲ್ಲೂ ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಎಂಬ ಸ್ಟಾರ್ ಬ್ಯಾಟ್ಸ್‌ಮನ್‌ಗಳ ಆಟವಂತೂ, ಮೈದಾನಕ್ಕಿಳಿದು ಕುಂಡೆ ಮೇಲೆ ಎರಡು ಕೊಟ್ಟು ಮನೆಗೆ ಕಳಿಸಬೇಕೆನಿಸುತ್ತಿತ್ತು. ಹಿರಿಯ ಬ್ಯಾಟ್ಸ್‌ಮನ್‌ಗಳ ಸೋಲು, ಹೊಸಬರಿಗೆ ಅಪೂರ್ವ ಅವಕಾಶ ಕಲ್ಪಿಸಿಕೊಟ್ಟಿತ್ತು. ಅವರು ಅದನ್ನು ಸದುಪಯೋಗಪಡಿಸಿಕೊಂಡು ಮಿಂಚಬಹುದಿತ್ತು. ತಂಡದಲ್ಲಿ ತಣ್ಣಗೆ ತಳವೂರಬಹುದಿತ್ತು. ಆದರೆ ಅವರೂ ಕೂಡ ಹಿರಿಯರ ಹಾದಿಯನ್ನೇ ತುಳಿದರು. ಇನ್ನು ನಮ್ಮ ತಂಡದ ಸ್ಪಿನ್ ಬೌಲರ್‍‌ಗಳಾದ ಅಶ್ವಿನ್ ಮತ್ತು ಜಡೇಜಾ- ಮಾಂತ್ರಿಕತೆ ಕಳೆದುಕೊಂಡ ಮಂಕುದಿಣ್ಣೆಗಳಾಗಿದ್ದರು. ಇದ್ದುದರಲ್ಲಿ ವಾಷಿಂಗ್ಟನ್ ಸುಂದರ್ ಪರ್ಫಾರ್ಮೆನ್ಸ್ ಪರವಾಗಿಲ್ಲ ಎನಿಸಿ, ಸಮಾಧಾನ ತರಿಸಿತ್ತು.

ಇದನ್ನು ಓದಿದ್ದೀರಾ?: ಮುಗಿಯಿತಾ ‘ವಿರಾಟ್’ ಪರ್ವ? 10 ವರ್ಷದಲ್ಲೇ ಕೊಹ್ಲಿ ಕಳಪೆ ರ್‍ಯಾಂಕಿಂಗ್; ಟಾಪ್‌-20ಯಿಂದ ಔಟ್!

Advertisements

ತಂಡದ ಆಟಗಾರರ ಕತೆ ಇದಾದರೆ, ತಂಡವನ್ನು ಹುರಿದುಂಬಿಸುವ, ಸಜ್ಜುಗೊಳಿಸುವ ಮುಖ್ಯ ಕೋಚ್ ಗೌತಮ್ ಗಂಭೀರ್, ಮುಖ ನೋಡಿದರೆ ಮಾತ್ರ ಗಂಭೀರ. ಆದರೆ ಅವರು ತರಬೇತುಗೊಳಿಸಿದ ಆಟಗಾರರ ಆಟ ಹಾಸ್ಯಾಸ್ಪದ. ಸೋಷಿಯಲ್ ಮೀಡಿಯಾದಲ್ಲಂತೂ ಗಂಭೀರ್ ಅವರನ್ನು ಹರಿದು ಚಿಂದಿ ಮಾಡಿಟ್ಟಿದ್ದರು. ಈ ಹಿಂದೆ ಇದ್ದ ರಾಹುಲ್ ದ್ರಾವಿಡ್ ಅವರ ನಡೆ, ನುಡಿ ಮತ್ತು ವಿನಯಗಳನ್ನು ಪ್ರಸ್ತಾಪಿಸಿ, ಗಂಭೀರ್ ಮೇಲೆ ಬಹಳ ಗಂಭೀರವಾಗಿಯೇ ಟೀಕೆಗಳ ಸುರಿಮಳೆ ಸುರಿಸಲಾಗಿತ್ತು.

ಇಂತಹ ಸಂದರ್ಭದಲ್ಲಿ- ಭಾರತ ಕ್ರಿಕೆಟ್ ತಂಡ ಪರಿವರ್ತನೆಯ ಹಾದಿಯಲ್ಲಿರುವಾಗ- ಇಂದಿನಿಂದ ಸೌತ್ ಆಫ್ರಿಕಾ ತಂಡದೊಂದಿಗೆ ಟಿ20 ಸರಣಿ ಆರಂಭವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಡರ್ಬನ್‌ನಲ್ಲಿ ನಡೆಯಲಿದೆ.

ಸಮಾಧಾನದ ಸಂಗತಿ ಎಂದರೆ, ಟಿ20 ತಂಡಕ್ಕೆ ರೋಹಿತ್ ಶರ್ಮಾ ನಾಯಕನಲ್ಲ. ಹಾರ್ದಿಕ್ ಪಾಂಡ್ಯನೂ ಅಲ್ಲ. ಬದಲಿಗೆ ಸೂರ್ಯಕುಮಾರ್ ಯಾದವ್ ಸಾರಥ್ಯ ತಂಡಕ್ಕಿದೆ. ತಂಡದಲ್ಲಿ ಹಲವು ಯುವ ಪ್ರತಿಭಾನ್ವಿತರಿದ್ದಾರೆ. ಅದರಲ್ಲೂ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ, ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ತುದಿಗಾಲ ಮೇಲೆ ನಿಂತಿದ್ದಾರೆ.

ನಾಯಕ ಸೂರ್ಯಕುಮಾರ್ ಯಾದವ್ ಮೈದಾನಕ್ಕಿಳಿದರೆ ಕ್ರಿಕೆಟ್ ಪ್ರೇಮಿಗಳ ಪಾಲಿಗದು ಹಬ್ಬ. ಬ್ಯಾಟಿಡಿದು ಬಾರಿಸಲು ಶುರು ಮಾಡಿದರೆ, 360 ಡಿಗ್ರಿಗೂ ಬ್ಯಾಟ್ ತಿರುಗಿಸಬಲ್ಲ ಚತುರ. ಬಿರುಸಿನ ಹೊಡೆತಗಳ ಬಲಗೈ ಬ್ಯಾಟರ್ ಯಾದವ್, ಯಶಸ್ವಿ ಟಿ20 ಕ್ಯಾಪ್ಟನ್ ಎಂಬ ಹೆಸರು ಪಡೆದಿದ್ದಾರೆ. 2023ರಿಂದ ಟಿ20 ಕ್ಯಾಪ್ಟನ್ ಆಗಿರುವ ಯಾದವ್, ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ 4-1 ಅಂತರದ ಸರಣಿ ಗೆದ್ದು, ಗಟ್ಟಿಗ ಎನಿಸಿಕೊಂಡಿದ್ದಾರೆ.

ಇಲ್ಲಿಯವರೆಗೆ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ 13 ಟಿ20 ಪಂದ್ಯಗಳನ್ನಾಡಿ, 11 ಪಂದ್ಯಗಳನ್ನು ಗೆಲ್ಲಲಾಗಿದೆ. ಸೋತ ಎರಡು ಪಂದ್ಯಗಳು ಕೂಡ, ಒಂದು ಲಾಸ್ಟ್ ಬಾಲ್ ವಿಕ್ಟರಿಯಾದರೆ, ಮತ್ತೊಂದು ಡಿಎಲ್ಎಸ್ ನಿಯಮದಿಂದ ಸೋತಿದ್ದಾಗಿದೆ. ಹಾಗೆಯೇ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಬಲಿಷ್ಠ ತಂಡಗಳೊಂದಿಗೆ ಗೆದ್ದು, ತಾನೊಬ್ಬ ಸಮರ್ಥ ನಾಯಕ ಎನಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಾಯಕನಾಗಿ ಆಸ್ಟ್ರೇಲಿಯಾ ತಂಡದ ವಿರುದ್ಧ ಆಡಿದ ಪಂದ್ಯದಲ್ಲಿ 42 ಬಾಲಿಗೆ 80 ರನ್ ಬಾರಿಸಿ, ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಗೆದ್ದಿದ್ದರು. ಇನ್ನು ಬಾಂಗ್ಲಾ ವಿರುದ್ಧ ಪಂದ್ಯವೊಂದರಲ್ಲಿ 35 ಬಾಲ್‌ಗಳಲ್ಲಿ 75 ರನ್ ಬಾರಿಸಿ, ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.

ಇದನ್ನು ಓದಿದ್ದೀರಾ?: ಹಣದ ಅಮಲು ಹಾಗೂ ಭಾರತೀಯ ಕ್ರಿಕೆಟ್ ತಂಡದ ಗರ್ವಭಂಗ

ಈಗ ಸೌತ್ ಆಫ್ರಿಕಾದೊಂದಿಗೆ ಇಂದಿನಿಂದ ಶುರುವಾಗಿರುವ ಟಿ20 ಸರಣಿ, ಒಂದು ರೀತಿಯಲ್ಲಿ ಎರಡೂ ತಂಡಗಳಿಗೂ ಸವಾಲಿನ ಪಂದ್ಯವಾಗಲಿದೆ. ಕಳೆದ ಜೂನ್‌ನಲ್ಲಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಈ ಎರಡು ತಂಡಗಳು ಎದುರಾಗಿದ್ದು, ಸೌತ್ ಆಫ್ರಿಕಾ ತಂಡ ಅಲ್ಪ ಅಂತರದಿಂದ ಸೋತಿತ್ತು. ಆ ಸೋಲಿನಲ್ಲಿ ಸೂರ್ಯಕುಮಾರ್ ಯಾದವ್ ಪಾತ್ರ ಹಿರಿದಾಗಿತ್ತು. ಅವರು ಬೌಂಡರಿ ಲೈನ್‌ನಲ್ಲಿ ಹಿಡಿದ ಕ್ಯಾಚ್- ಅವಿಸ್ಮರಣೀಯ ಕ್ಯಾಚ್ ಆಗಿ, ಪಂದ್ಯದ ಗತಿಯನ್ನೇ ಬದಲಿಸಿತ್ತು. ಸೌತ್ ಆಫ್ರಿಕಾ ತಂಡ ಫೈನಲ್‌ವರೆಗೆ ಬಂದು, ತಮ್ಮ ಮೇಲಿದ್ದ ‘ಸೋತಾಫ್ರಿಕಾ’ ಅಪವಾದವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್ದರು. ಆ ಸಿಟ್ಟು ಮತ್ತು ಸೇಡು ಈ ಸರಣಿಯಲ್ಲಿ ಚುಕ್ತ ಆಗಹುದಾ, ನೋಡಬೇಕು.

ಟಿ20 ಕ್ರಿಕೆಟ್1

ಹಾಗೆಯೇ, ಇದೀಗತಾನೆ ನ್ಯೂಜಿಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿ ಸೋತು ಕಳೆಗುಂದಿರುವ ಭಾರತೀಯ ಕ್ರಿಕೆಟ್ ತಂಡಕ್ಕೆ, ಈ ಟಿ20 ಸರಣಿ ಒಂದು ರೀತಿಯಲ್ಲಿ ಸವಾಲಿನ ಪಂದ್ಯವಾಗಲಿದೆ. ಗೆದ್ದರೆ, ಆತ್ಮಸ್ಥೈರ್ಯ ತುಂಬಿಕೊಂಡು ಪುಟಿದೇಳಲಿದೆ. ಸೂರ್ಯಕುಮಾರ್ ಯಾದವ್ ಜೊತೆಗೆ ಬ್ಯಾಟಿಂಗ್ ಬಲ ತುಂಬಲು ಎಡಗೈ ಬ್ಯಾಟರ್‍‌ಗಳಾದ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಜೊತೆಯಾಗಲಿದ್ದಾರೆ. ಬ್ಯಾಟಿಗೆ ಸಾಣೆ ಹಿಡಿದು ಸಂಜು ಸ್ಯಾಮ್ಸನ್ ಕೂಡ ಕಾಯುತ್ತಿದ್ದಾರೆ.

ಹಾಗೆ ನೋಡಿದರೆ ಇದು ಭಾರತ ಕ್ರಿಕೆಟ್ ತಂಡಕ್ಕೆ ಸಂಕ್ರಮಣ ಕಾಲ. ಹಳಬರು ಹಿನ್ನೆಲೆಗೆ ಸರಿದು, ಹೊಸಬರಿಗೆ ಅವಕಾಶ ಮಾಡಿಕೊಡುವ ಕಾಲ. ಅದಕ್ಕೆ ಸೌತ್ ಆಫ್ರಿಕಾ ಎದುರಿನ ಟಿ20 ಸರಣಿ ಉತ್ತಮ ವೇದಿಕೆ ಒದಗಿಸಿಕೊಟ್ಟರೂ ಆಶ್ಚರ್ಯವಿಲ್ಲ. ಯಾರೆಲ್ಲ ಬಳಸಿಕೊಂಡು ಬೆಳೆಯುತ್ತಾರೋ, ಗೊತ್ತಿಲ್ಲ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಮಹಿಳಾ ವಿಶ್ವಕಪ್‌, ಆಸೀಸ್‌ ಪ್ರವಾಸಕ್ಕೆ ಟೀಂ ಇಂಡಿಯಾ ತಂಡ ಪ್ರಕಟ

ಮುಂದಿನ ತಿಂಗಳು ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಮಹಿಳೆಯರ ಏಕದಿನ ವಿಶ್ವಕಪ್‌ಗೆ...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X