ಆಸ್ಟ್ರೇಲಿಯಾ ವಿರುದ್ಧ ಕಿಂಗ್ಸ್ಟನ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ತಂಡವು ಕೇವಲ 27 ರನ್ಗಳಿಗೆ ಆಲೌಟ್ ಆಗುವ ಮೂಲಕ ತೀವ್ರ ಕಳಪೆ ಪ್ರದರ್ಶನ ನೀಡಿದೆ.
ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಎರಡನೇ ದಾಖಲೆಯಾಗಿದೆ. 1955 ರಲ್ಲಿ ಆಕ್ಲೆಂಡ್ನಲ್ಲಿ ನ್ಯೂಜಿಲೆಂಡ್ ತಂಡವು ಇಂಗ್ಲೆಂಡ್ ವಿರುದ್ಧ 26 ರನ್ಗಳಿಗೆ ಆಲೌಟ್ ಆಗಿತ್ತು.
27 ರನ್ಗಳು ಈಗ ವೆಸ್ಟ್ ಇಂಡೀಸ್ ತಂಡದ ಅತ್ಯಂತ ಕಡಿಮೆ ಮೊತ್ತವಾಗಿದೆ. ಏಕೆಂದರೆ ಇದೇ ಕಿಂಗ್ ಸ್ಟನ್ ಮೈದಾನದಲ್ಲಿ 2004ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 47 ರನ್ಗಳಿಗೆ ಆಲೌಟ್ ಆಗಿತ್ತು.
ಮೂರನೇ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಆಲೌಟ್ ಆಗಿ ವೆಸ್ಟ್ ಇಂಡೀಸ್ ತಂಡವು 170 ರನ್ಗಳನ್ನು ಗಳಿಸಿರುವುದು ಕೂಡ ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಕಡಿಮೆ ಮೊತ್ತವಾಗಿದೆ. ಈ ಹಿಂದೆ ಇಂಗ್ಲೆಂಡ್ ವಿರುದ್ಧ ಓವಲ್ ಮೈದಾನದಲ್ಲಿ 1957ರಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 175 ರನ್ಗಳಿಗೆ ಎಲ್ಲ ವಿಕೆಟ್ಗಳನ್ನು ಕಳೆದುಕೊಂಡಿದ್ದರು.
ಕಿಂಗ್ ಸ್ಟನ್ ಮೈದಾನದಲ್ಲಿ ನಡೆದ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಗೆಲ್ಲಲು ಕೇವಲ 204 ರನ್ಗಳ ಗುರಿಯನ್ನು ಆಸ್ಟ್ರೇಲಿಯಾ ತಂಡವು ನೀಡಿತ್ತು. ಆದರೆ, ಈ ಗುರಿಯನ್ನು ಸಾಧಿಸಲು ವಿಫಲವಾದ ವೆಸ್ಟ್ ಇಂಡೀಸ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್ ಅವರ ಹ್ಯಾಟ್ರಿಕ್ ವಿಕೆಟ್ಗಳ ಗೊಂಚಲಿಗೆ 27 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಆ ಮೂಲಕ ಆಸ್ಟ್ರೇಲಿಯಾ ತಂಡವು 176 ರನ್ಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು. ಜೊತೆಗೆ ಮೂರು ಟೆಸ್ಟ್ ಪಂದ್ಯದಲ್ಲಿಯೂ ಗೆದ್ದು, ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿತು.
ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಕೇವಲ 9 ರನ್ ನೀಡಿ, ಆರು ವಿಕೆಟ್ ಪಡೆಯುವಲ್ಲಿ ಸಫಲರಾದರು. ಪಂದ್ಯದಲ್ಲಿ ನಾಲ್ಕನೇ ವಿಕೆಟ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 400ನೇ ವಿಕೆಟ್ ಪಡೆದವರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡರು.
ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟಾರ್ಕ್ ತಮ್ಮ 400 ನೇ ವಿಕೆಟ್ ಪಡೆಯಲು 19062 ಎಸೆತಗಳನ್ನು ಎಸೆದರು. ದಕ್ಷಿಣ ಆಫ್ರಿಕಾ ತಂಡದ ಡೇಲ್ ಸ್ಟೇನ್ ಈ ಮೈಲಿಗಲ್ಲು ಸ್ಥಾಪಿಸಲು 16634 ಎಸೆತಗಳು ಬೇಕಾಗಿದ್ದವು. ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಸ್ಟೇನ್ ನಂತರದ ಸ್ಥಾನವನ್ನು ಮಿಚೆಲ್ ಸ್ಟಾರ್ಕ್ ಪಡೆದುಕೊಂಡರು. ಈ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಕೇವಲ 15 ಎಸೆತಗಳಲ್ಲಿ 5 ವಿಕೆಟ್ ಪಡೆದಿರುವುದು ಕೂಡ ದಾಖಲೆಯ ಸಾಲಿನಲ್ಲಿ ಸ್ಥಾನ ಪಡೆದಿದೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ 9 ರನ್ಗಳಿಗೆ 6 ವಿಕೆಟ್ ಪಡೆದರೆ, ಸ್ಕಾಟ್ ಬೋಲ್ಯಾಂಡ್ 2 ರನ್ ನೀಡಿ, ಹ್ಯಾಟ್ರಿಕ್ ವಿಕೆಟ್ ಪಡೆಯುವಲ್ಲಿ ಸಫಲರಾದರು.
ಏಳು ಮಂದಿ ಶೂನ್ಯಕ್ಕೆ ಔಟ್
ಇನ್ನೂ ಒಂದು ವಿಚಿತ್ರ ಏನೆಂದರೆ, ಈ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಏಳು ಮಂದಿ ಶೂನ್ಯಕ್ಕೆ ಔಟ್ ಆಗಿರುವುದು.
ವೆಸ್ಟ್ ಇಂಡೀಸ್ ತಂಡದ ಏಳು ಮಂದಿ ಬ್ಯಾಟರ್ಗಳು ಯಾವುದೇ ರನ್ ಗಳಿಸದೆ ಶೂನ್ಯಕ್ಕೆ ಔಟಾಗಿರುವುದು ಕೂಡ ಅತ್ಯಂತ ಕಳಪೆ ದಾಖಲೆಯಾಗಿದೆ.