ದುಡ್ಡಿರುವ ಕ್ರೀಡಾಸಂಸ್ಥೆಗಳು, ಅಧಿಕಾರವಿರುವ ಸರ್ಕಾರ ಕೆಲವೇ ಕೆಲವೇ ಅಧಿಕಾರಿಗಳ ಮೇಲೆ ತಪ್ಪನ್ನು ಹೊರಿಸಲು ಮುಂದಾಗಿದೆ. ಸರ್ಕಾರವನ್ನು ಜನರೇ ಚುನಾಯಿಸುವುದು ಎಂಬುದನ್ನು ಜನಪ್ರತಿನಿಧಿಗಳು ಮರೆಯಬಾರದು.
2025ರ ಜೂನ್ 4ರಂದು ಬೆಂಗಳೂರು ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತವು ಕರ್ನಾಟಕ ಮಾತ್ರವಲ್ಲ, ದೇಶದ ಇತಿಹಾಸದಲ್ಲೂ ಕಪ್ಪು ಚುಕ್ಕೆಯಾಗಿ ಉಳಿದಿದೆ. ಐಪಿಎಲ್‌ನಲ್ಲಿ ಜಯಗಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೌರವಾರ್ಥವಾಗಿ ಸರ್ಕಾರ ಮತ್ತುಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ), ಆರ್‌ಸಿಬಿ ಮತ್ತು ಡಿಎನ್ಎ ಎಂಟರ್‌ಟೈನ್‌ಮೆಂಟ್ ಸಹಯೋಗದಲ್ಲಿ ವಿಜಯೋತ್ಸವವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಬೆಂಗಳೂರಿನ ಕ್ರೀಡಾಭಿಮಾನಿಗಳ ಉತ್ಸಾಹಕ್ಕೆ ಸಾಕ್ಷಿಯಾಗಬೇಕಿತ್ತು. ಆದರೆ ಸರಿಯಾದ ನಿರ್ವಹಣೆ ಇಲ್ಲದೆ ಒಂದು ಭೀಕರ ದುರಂತಕ್ಕೆ ತಿರುಗಿ 11 ಅಮಾಯಕರು ಮೃತಪಟ್ಟು, ಸುಮಾರು 33ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಘಟನೆಯು ಸಾರ್ವಜನಿಕ ಭದ್ರತೆ, ಸರ್ಕಾರದ ಕಾರ್ಯವೈಖರಿ, ಜನಸಂದಣಿ ನಿರ್ವಹಣೆ ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ಗಂಭೀರವಾದ ಪ್ರಶ್ನೆಗಳನ್ನು ಎತ್ತಿತು. ದುರಂತಕ್ಕೆ ಸರ್ಕಾರ ಹಾಗೂ ಕ್ರೀಡಾ ಸಂಸ್ಥೆಗಳು ಪಾಲುದಾರಾದರು. ಹೊಣೆಗಾರಿಕೆ ಬಂದಾಗ ಎಲ್ಲರೂ ಕೂಡ ಒಬ್ಬರ ಮೇಲೆ ಒಬ್ಬರು ಬೆರಳು ತೋರಿಸುತ್ತಿದ್ದಾರೆ.
ಕ್ರೀಡಾಂಗಣದ ಸಾಮರ್ಥ್ಯ ಕೇವಲ 35,000 ಜನರಿಗೆ ಮಾತ್ರ ಇದ್ದರೂ, ಆರ್‌ಸಿಬಿ ಸಂಸ್ಥೆ ಸಾಮಾಜಿಕ ಮಾಧ್ಯಮಗಳಲ್ಲಿ ಉಚಿತ ಪ್ರವೇಶವನ್ನು ಘೋಷಿಸಿ ಅನಾಹುತ ಉಂಟಾಗಲು ಪ್ರಮುಖ ಕಾರಣವಾಯಿತು. 3 ಲಕ್ಷಕ್ಕೂ ಅಧಿಕ ಜನರು ಸ್ಥಳದಲ್ಲಿ ಜಮಾಯಿಸಿದರು. ಈ ಸಂಖ್ಯೆಯ ಅಂದಾಜನ್ನು ರಾಜ್ಯ ಪೊಲೀಸ್ ಇಲಾಖೆ, ಗುಪ್ತಚರ ಶಾಖೆ ಅಥವಾ ಸ್ಥಳೀಯ ಆಡಳಿತ ಯಾರು ಪರಿಗಣಿಸಲಿಲ್ಲ. ವಿಜಯೋತ್ಸವದ ಕಾರ್ಯಕ್ರಮದಲ್ಲಿ ಸರ್ಕಾರದ ಪ್ರತಿನಿಧಿಗಳೆ ನೇತೃತ್ವ ವಹಿಸಿದ್ದರು. ಅವರೂ ಗಮನ ಹರಿಸಲಿಲ್ಲ. ಪ್ರಮುಖ ದ್ವಾರಗಳನ್ನು ಮುಚ್ಚಿ ಕೆಲವೇ ಗೇಟುಗಳನ್ನು ತೆರೆದ ಕಾರಣ ಜನಸಂದಣಿಯು ನಿರ್ವಹಣೆ ಮಿತಿಮೀರಿ ಕ್ರೀಡಾಂಗಣದೊಳಗೆ ತೆರಳಲು ಹೋದ ಜನರು ಪರಸ್ಪರದ ಮೇಲೆ ಬಿದ್ದು ಕಾಲ್ತುಳಿತದ ಘಟನೆ ಸಂಭವಿಸಿತು. ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ತಕ್ಷಣ ಕ್ರಮ ಕೈಗೊಳ್ಳುವಲ್ಲಿ ವಿಫಲವಾದರು. ಜನಸಂದಣಿಯ ನಿಯಂತ್ರಣ, ಪ್ರವೇಶದ ವ್ಯವಸ್ಥೆ, ತುರ್ತು ನಿರ್ವಹಣೆಯ ಯೋಜನೆ, ಎಲ್ಲವನ್ನೂ ನೋಡಿದರೆ ಎಲ್ಲರೂ ಮಾಡಿದ ಅನಾಹುತ ಎಂಬುದು ಸ್ಪಷ್ಟವಾಗಿ ತಿಳಿದುಬರುತ್ತದೆ.
ಸರ್ಕಾರವೇ ತಪ್ಪಿನಲ್ಲಿ ಭಾಗಿಯಾದ ಕಾರಣ ಹಾಗೂ ತಪ್ಪನ್ನು ಮತ್ತೊಬ್ಬರ ಮೇಲೆ ತುರ್ತಾಗಿ ಹಾಕುವುದಕ್ಕಾಗಿ ದುರಂತದ ಒಂದು ದಿನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟ ಸಭೆಯಲ್ಲಿ ಭದ್ರತಾ ಲೋಪಕ್ಕೆ ಐವರು ಪೊಲೀಸ್ ಅಧಿಕಾರಿಗಳು ಕಾರಣವೆಂದು ಅವರನ್ನು ಅಮಾನತುಗೊಳಿಸಲು ತೀರ್ಮಾನಿಸಲಾಯಿತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್, ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್. ತೆಕ್ಕನವರ್, ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಸಿ. ಬಾಲಕೃಷ್ಣ ಮತ್ತು ಕಬ್ಬನ್ ಪಾರ್ಕ್ ಠಾಣೆಯ ಇನ್ಸ್‌ಪೆಕ್ಟರ್ ಎ.ಕೆ. ಗಿರೀಶ್ ಹೊಣೆಗಾರರನ್ನಾಗಿ ಮಾಡಲಾಯಿತು. ಸರ್ಕಾರವೇ ಕೋರ್ಟ್‌ನಲ್ಲಿ ಒಪ್ಪಿಕೊಂಡಂತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 800 ಪೊಲೀಸರನ್ನು ನಿಯೋಜಿಸಲಾಗಿತ್ತಾದರೂ, ವಿಜಯೋತ್ಸವ ಕಾರ್ಯಕ್ರಮಕ್ಕೆ ಕೇವಲ 1300 ಪೊಲೀಸರನ್ನು ನಿಯೋಜಿಸಲಾಗಿತ್ತು. ಇಷ್ಟೊಂದು ದೊಡ್ಡ ಜನಸಂದಣಿಯನ್ನು ನಿರ್ವಹಿಸಲು ಈ ಸಂಖ್ಯೆ ಸಾಕಾಗಿರಲಿಲ್ಲಎಂಬುದು ಸರ್ಕಾರಕ್ಕೆ ಅರಿಯದ ವಿಷಯವೇನಲ್ಲ.
ಘಟನೆಯ ಬಗ್ಗೆ ವರದಿ ನೀಡಲು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ ಕುನ್ಹಾ ನೇತೃತ್ವದ ಸಮಿತಿಗೆ ವಹಿಸಲಾಗಿದೆ. ಹಾಗೆಯೇ ಪ್ರಕರಣದ ಕಾನೂನು ಅಥವಾ ವಾಸ್ತವತೆ ಏನು ಎಂಬುದರ ಬಗೆಗಿನ ಎಲ್ಲ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಕೋರ್ಟ್‌ಗೆ ಮಾಹಿತಿ ಅಥವಾ ಸಲಹೆಯನ್ನು ನೀಡಲು ಹಿರಿಯ ವಕೀಲರಾದ ಸುಶೀಲಾ ಅವರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ಆರ್‌ಸಿಬಿ ಮತ್ತು ಡಿಎನ್ಎ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳನ್ನು ತಪ್ಪಿತಸ್ಥರನ್ನಾಗಿ ಮಾಡಲಾಗಿದ್ದು, ಎಫ್‌ಐಆರ್ ಕೂಡ ದಾಖಲಿಸಲಾಗಿದೆ. ಈಗಾಗಲೇ ಮೂರು ಸಂಸ್ಥೆಗಳು ಕೂಡ ಬಂಧನ ಹಾಗೂ ಕಠಿಣ ಕಾನೂನು ಕ್ರಮದಿಂದ ತಕ್ಷಣಕ್ಕೆ ಪಾರಾಗಲು ಹೈಕೋರ್ಟ್‌ನಿಂದ ಮಧ್ಯಂತರ ರಕ್ಷಣೆಯನ್ನು ಪಡೆದುಕೊಂಡಿವೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ಇರಾಕ್ – ಈಗ ಇರಾನ್: ಅಮೆರಿಕ ಕ್ರೌರ್ಯಕ್ಕೆ ಕೊನೆ ಎಂದು?
ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಗಾದೆ ಮಾತಿನಂತೆ ದುರಂತ ನಡೆದ ನಂತರ ಸರ್ಕಾರ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೂತನ ಎಸ್ಒಪಿಗಳನ್ನು ರೂಪಿಸುವ ಕಾರ್ಯಕ್ಕೆ ಮುಂದಾಗಿದೆ. 50,000ಕ್ಕಿಂತ ಹೆಚ್ಚು ಜನರು ಇರುವ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಮೊದಲು ಪರಿಸ್ಥಿತಿಯ ಸಮಗ್ರ ಮೌಲ್ಯಮಾಪನ, ಅಗತ್ಯ ಭದ್ರತಾ ವ್ಯವಸ್ಥೆ, ತುರ್ತು ಸೇವೆಗಳ ಸಿದ್ಧತೆ, ನಿರ್ಗಮನಾ ಮಾರ್ಗಗಳು ಮತ್ತು ಜನಸಂದಣಿಯ ನಿರ್ವಹಣೆಯ ಜವಾಬ್ದಾರಿ ಹಂಚಿಕೆಯಂತಹ ಹಲವು ಅಂಶಗಳ ನಿಖರ ಯೋಜನೆ ಹಾಗೂ ಅನುಷ್ಠಾನ ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಶಿಕ್ಷೆ ಹಾಗೂ ದಂಡವನ್ನು ಕೂಡ ಮಾರ್ಗಸೂಚಿಯಲ್ಲಿ ಪ್ರಕಟಿಸಿದೆ.
ಪೊಲೀಸರನ್ನೆ ಹೊಣೆ ಮಾಡಿದ ಸರ್ಕಾರ
ಈ ನಡುವೆ, ಸರ್ಕಾರ ಅಧಿಕಾರಿಗಳ ಅಮಾನತು ಕುರಿತು ನಿಯಮಾನುಸಾರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿತ್ತು. ಭಾರತೀಯ ಆಡಳಿತ ಸೇವೆಯ (ಐಎಎಸ್/ಐಪಿಎಸ್) ಅಧಿಕಾರಿಗಳ ಅಮಾನತಿಗೆ ಅಂತಿಮ ಅನುಮೋದನೆಯ ಹಕ್ಕು ಕೇಂದ್ರ ಸರ್ಕಾರದ ಬಳಿಯಿದೆ. ರಾಜ್ಯದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಒಂದು ಸಮಗ್ರ ವರದಿಯನ್ನು ತಯಾರಿಸಿ ಕೇಂದ್ರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ ಸಮಾರಂಭದ ಜನಸಂದಣಿಯನ್ನು ಸರಿಯಾಗಿ ಅಂದಾಜಿಸದೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದಿರುವುದು, ಅಧಿಕಾರಿಗಳ ನಡುವಿನ ಸಂವಹನದ ಕೊರತೆ ಹಾಗೂ ಅಪಾಯದ ಮುನ್ಸೂಚನೆಗಳನ್ನು ಕಡೆಗಣಿಸಿದ ನಿರ್ಲಕ್ಷ್ಯ ಸೇರಿದಂತೆ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ಇಂತಹ ಅಂಶಗಳನ್ನಾಧರಿಸಿ ಅಧಿಕಾರಿಗಳ ಅಮಾನತಿಗೆ ಶಿಫಾರಸು ಮಾಡಲಾಗಿದೆ.
ರಾಜ್ಯ ಸರ್ಕಾರ ನೀಡಿರುವ ವರದಿಯಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ. ಕಾಲ್ತುಳಿತ ನಡೆದ ದಿನದ ಹಿನ್ನಲೆಯಲ್ಲಿ ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಜನರು ಕ್ರೀಡಾಂಗಣದ ಕಡೆ ಓಡಿದಾಗ, ಪೊಲೀಸ್ ಅಧಿಕಾರಿಗಳು ಶಿಸ್ತಿನಿಂದ ಜನಸಂದಣಿಯನ್ನು ನಿಯಂತ್ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಿಲ್ಲ. ಸ್ಥಳದಲ್ಲಿದ್ದ ಎಸಿಪಿ, ಡಿಸಿಪಿ, ಇನ್‌ಸ್ಪೆಕ್ಟರ್ ಮತ್ತು ಆಯುಕ್ತರ ಮಟ್ಟದ ಅಧಿಕಾರಿಗಳ ನಡುವೆ ಸರಿಯಾದ ಸಂವಹನವೇ ಇಲ್ಲದ ಕಾರಣ, ತಕ್ಷಣದ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ. ಅಧಿಕಾರಿಗಳ ನಡುವೆ ಸಂಯೋಜನೆಯ ಕೊರತೆ, ಭದ್ರತೆಯ ಪರಿಗಣನೆಗೆ ವೈಫಲ್ಯ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆಯ ಕೊರತೆಯಿಂದ ಅನಾಹುತ ಸಂಭವಿಸಿದೆ ಎಂದು ಸಂಪೂರ್ಣ ಹೊಣೆಯನ್ನು ಪೊಲೀಸರ ಮೇಲೆ ಹಾಕಲಾಗಿದೆ.
ಅಂದ ಹಾಗೆ ಕಾಲ್ತುಳಿತವನ್ನು ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಸರ್ಕಾರದ ಹಲವು ಲೋಪಗಳ ಬಗ್ಗೆ ಪ್ರಶ್ನೆ ಮಾಡಿತ್ತು. ಯಾವ ರೀತಿಯ ವೈದ್ಯಕೀಯ ಸೌಲಭ್ಯ ಮಾಡಲಾಗಿತ್ತು? ಇಂತಹ ಘಟನೆ ಆದಾಗ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿತ್ತು? ಏನಾದರೂ ಎಸ್‌ಓಪಿ ಮಾಡಿಕೊಳ್ಳಲಾಗಿತ್ತಾ? ಹಿಂದಿನ ದಿನ ಸಂಭ್ರಮದ ವೇಳೆ ಬೆಳಗಿನ ಜಾವ 4 ಗಂಟೆವರೆಗೆ ಕೆಲಸ ಮಾಡಿದ್ದ ಪೊಲೀಸರು ಮತ್ತೆ ಬೆಳಗ್ಗೆ 11 ಗಂಟೆಯಿಂದ ಬಂದೋಬಸ್ತ್ ನೀಡಲು ಆಗುತ್ತಿತ್ತಾ? ಇಂತಹ ಕಾರ್ಯಕ್ರಮಗಳನ್ನು ಮಾಡುವಾಗ ನಿಯಮಗಳು ಇರಬೇಕು ತಾನೆ ಎಂದು ಪ್ರಶ್ನೆಗಳನ್ನು ಕೇಳಿತ್ತು. ಆಗ ಸರ್ಕಾರ ಸಮಾಧಾನದಿಂದ ಉತ್ತರಿಸಿ ಜಾರಿಕೊಂಡಿತ್ತು. ಈಗ ದುಡ್ಡಿರುವ ಕ್ರೀಡಾಸಂಸ್ಥೆಗಳು, ಅಧಿಕಾರವಿರುವ ಸರ್ಕಾರ ಕೆಲವೇ ಕೆಲವೇ ಅಧಿಕಾರಿಗಳ ಮೇಲೆ ತಪ್ಪನ್ನು ಹೊರಿಸಲು ಮುಂದಾಗಿದೆ. ಸರ್ಕಾರವನ್ನು ಜನರೇ ಚುನಾಯಿಸುವುದು ಎಂಬುದನ್ನು ಜನಪ್ರತಿನಿಧಿಗಳು ಮರೆಯಬಾರದು.