ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಹೊಸ ದಾಖಲೆಯನ್ನು ಲಕ್ನೋ ಸೂಪರ್ ಜೈಂಟ್ಸ್ ಪರ ತನ್ನ ಚೊಚ್ಚಲ ಪಂದ್ಯವನ್ನು ಆಡಿದ ಮಯಾಂಕ್ ಯಾದವ್ ಬರೆದಿದ್ದಾರೆ. ತನ್ನ ಪದಾರ್ಪಣೆ ಪಂದ್ಯದಲ್ಲಿ ಶೈನ್ ಆದ 21ರ ಹರೆಯದ ಮಯಾಂಕ್ ಯಾದವ್ ಐಪಿಎಲ್ 2024ರ ಅತಿ ವೇಗದ ಬಾಲ್ ಎಸೆದು ದಾಖಲೆ ಸೃಷ್ಟಿಸಿದ್ದಾರೆ.
ಆರಂಭದಲ್ಲಿ ಗಂಟೆಗೆ 149 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಿದ ಮಯಾಂಕ್ ಬಳಿಕ ಗಂಟೆಗೆ 155.8 ಕಿ.ಮೀ. ವೇಗದಲ್ಲಿ ಚೆಂಡೆಸಿದ್ದಾರೆ. ಈ ಮೂಲಕ ಐಪಿಎಲ್ನಲ್ಲಿ ಪೇಸ್ ಬೌಲಿಂಗ್ ದಾಖಲೆ ಮಾಡಿದರು. ಕಣ್ಣು ಮಿಟುಕುವಷ್ಟರಲ್ಲಿ ಈ ಚೆಂಡು ಕೀಪರ್ ಕೈ ಸೇರಿದ್ದು, ಈ ಯುವ ಬೌಲರ್ನ ಪ್ರದರ್ಶನಕ್ಕೆ ಕ್ರಿಕೆಟ್ ಪ್ರಿಯರು ಫಿದಾ ಆಗಿದ್ದಾರೆ.
ಇದನ್ನು ಓದಿದ್ದೀರಾ? ಕೈಕೊಟ್ಟ ಬೌಲಿಂಗ್ | ತವರಲ್ಲಿ ಆರ್ಸಿಬಿಗೆ ಕೆಕೆಆರ್ ವಿರುದ್ಧ 7 ವಿಕೆಟ್ಗಳ ಸೋಲು
ಈ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ 21 ರನ್ಗಳಲ್ಲಿ ಗೆದ್ದಿದ್ದು, ಮಯಾಂಕ್ 4 ಓವರ್ಗಳಲ್ಲಿ 27 ರನ್ ನೀಡಿ 3 ವಿಕೆಟ್ ಕಬಳಿಸಿದರು. ಪಂಜಾಬ್ನ ಅನುಭವಿ ಬ್ಯಾಟರ್ಗಳೇ ಮಯಾಂಕ್ ಬೆಂಕಿಯ ಚೆಂಡಿನ ಮುಂದೆ ಬ್ಯಾಟಿಂಗ್ ಮಾಡಲು ತಿಣುಕಾಡಿದರು.
ದೆಹಲಿಯಲ್ಲಿ ಜೂನ್ 17, 2002ರಂದು ಜನಿಸಿದ ಮಯಾಂಕ್ ದೆಹಲಿ ಪರ ರಣಜಿ ಟೂರ್ನಿಗಳನ್ನು ಆಡುತ್ತಾರೆ. ಅವರಿಗೆ ರೈಲ್ವೆ ಹಾಗೂ ದೆಹಲಿ ತಂಡದಿಂದ ಏಕಕಾಲಕ್ಕೆ ಕರೆ ಬಂದಿದ್ದು ಅವರು ದೆಹಲಿ ತಂಡದೊಂದಿಗೆ ಆಡುವ ಆಯ್ಕೆ ಮಾಡಿಕೊಂಡಿದ್ದಾರೆ. ಮಯಾಂಕ್ 17 ಲಿಸ್ಟ್-ಎ ಮತ್ತು 10 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಈಗ ಲಕ್ನೋ ಸೂಪರ್ ಜೈಂಟ್ಸ್ ಪರ ತನ್ನ ಚೊಚ್ಚಲ ಪಂದ್ಯ ಆಡಿದ್ದಾರೆ.
ಇನ್ನು ಐಪಿಎಲ್ ಇತಿಹಾಸದಲ್ಲೇ ಅತೀ ವೇಗವಾಗಿ ಬೌಲಿಂಗ್ ಮಾಡಿದ ದಾಖಲೆಯನ್ನು ಆಸ್ಟ್ರೇಲಿಯಾದ ಶಾನ್ ಟೈಟ್ 2011ರಲ್ಲಿ ಸೃಷ್ಟಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಟೈಟ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಶಾನ್ ಟೈಟ್ ಗಂಟೆಗೆ 157.71 ಕಿ.ಮೀ. ವೇಗದಲ್ಲಿ ಚೆಂಡೆಸೆದು ದಾಖಲೆ ಬರೆದಿದ್ದಾರೆ. ಈ ದಾಖಲೆಯನ್ನು ಯುವ ವೇಗಿ ಮಯಾಂಕ್ ಮುರಿಯಲ್ಲಿದ್ದಾರಾ ಕಾದು ನೋಡಬೇಕಿದೆ.