ರಾಜ್ಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇದಿನೇ ಹೆಚ್ಚಳವಾಗುತ್ತಿದ್ದು, ಕಳೆದ 31 ತಿಂಗಳಲ್ಲಿ 10,510 ಪೋಕ್ಸೊ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ. ಆದರೆ, ಈ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ.
ರಾಜ್ಯದಲ್ಲಿ ಕಳೆದ 31 ತಿಂಗಳಲ್ಲಿ ಅಂದರೆ 2023 ರಿಂದ 2025ರ ಜುಲೈ ತಿಂಗಳವರೆಗೆ ಪೋಕ್ಸೋ ಕಾಯ್ದೆಯ ಅಡಿ 10,510 ಪ್ರಕರಣ ದಾಖಲಾಗಿವೆ. ಪೋಕ್ಸೋ ಪ್ರಕರಣಗಳಲ್ಲಿ (2023-2024ರಲ್ಲಿ ದಾಖಲಾದ ಪ್ರಕರಣಗಳಲ್ಲಿ) 162 ಮಂದಿಗೆ ಮಾತ್ರ ಶಿಕ್ಷೆಯಾಗಿದೆ. 9,835 ಪ್ರಕರಣಗಳು ಇತ್ಯರ್ಥಗೊಂಡಿವೆ. 6,685 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. 143 ಪ್ರಕರಣಗಳು ಸುಳ್ಳು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
ಬೆಂಗಳೂರು ನಗರದಲ್ಲೇ 1,584 ಪ್ರಕರಣ ವರದಿಯಾಗಿವೆ. ನಂತರದ ಸ್ಥಾನದಲ್ಲಿ ಮೈಸೂರು (580), ಶಿವಮೊಗ್ಗ (569), ಚಿಕ್ಕಬಳ್ಳಾಪುರ (472), ತುಮಕೂರು (466), ಬೆಳಗಾವಿ (437) ಜಿಲ್ಲೆಗಳಿವೆ. ಇನ್ನು ಧಾರವಾಡ, ಗದಗ ಜಿಲ್ಲೆಗಳಲ್ಲಿ ಕಡಿಮೆ ಪ್ರಕರಣಗಳು ದಾಖಲಾಗಿವೆ. ಅಂದರೆ ರಾಜ್ಯದಲ್ಲಿ ಪ್ರತಿ ದಿನಕ್ಕೆ ಸರಾಸರಿ 11 ಪೋಕ್ಸೋ ಪ್ರಕರಣ ದಾಖಲಾಗುತ್ತಿವೆ.
ಮೂರು ತಿಂಗಳಲ್ಲಿ 1,104 ಪೋಕ್ಸೋ
ಪ್ರಸಕ್ತ 2025ನೇ ಸಾಲಿನ ಏಪ್ರಿಲ್ ( 376), ಮೇ (380) ಹಾಗೂ ಜೂನ್ (348) ಸೇರಿ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 1,104 ಪೋಕ್ಸೋ ಪ್ರಕರಣಗಳು ದಾಖಲಾಗಿರುವ ಬಗ್ಗೆ ಗೃಹ ಇಲಾಖೆ ನೀಡಿರುವ ಮಾಹಿತಿ ಆತಂಕ ಮೂಡಿಸಿದೆ.
ʼಅತ್ಯಾಚಾರ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳ ಹೇಳಿಕೆ ಅತಿ ಮುಖ್ಯ. ಕೆಲವು ಪ್ರಕರಣಗಳಲ್ಲಿ ಕುಟುಂಬ ಅಥವಾ ಬೇರೆಯವರ ಒತ್ತಡದಿಂದ ಅಥವಾ ಸಾಮಾಜಿಕ ಕಳಂಕದ ಭೀತಿಯಿಂದ ತಮ್ಮ ಹೇಳಿಕೆಗಳನ್ನು ಬದಲಿಸಿಬಿಡುತ್ತಾರೆ. ಸ್ವಯಂ ಪ್ರೇರಣೆಯಿಂದ ಹೇಳಿಕೆ ದಾಖಲಿಸುವಂತೆ ಮನವಿ ಮಾಡುತ್ತೇವೆ. ಅನೇಕ ಮಕ್ಕಳು ಸ್ವಯಂಪ್ರೇರಿತ ಹೇಳಿಕೆ ನೀಡಲು ನಿರಾಕರಿಸುತ್ತಾರೆ ಎಂದು ವಕೀಲರಾದ ಭೀಮನಗೌಡ ಪರಗೊಂಡ ಹೇಳುತ್ತಾರೆ.

ʼಅತ್ಯಾಚಾರ ಆದ 24 ಗಂಟೆಗಳ ಒಳಗಾಗಿ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಆಗಬೇಕು. ಘಟನೆ ಸ್ಥಳದಲ್ಲಿ ವಿಧಿವಿಜ್ಞಾನ ತಂಡ ಸಾಕ್ಷ್ಯಾಧಾರ ಸಂಗ್ರಹಿಸಬೇಕು. ಕೆಲವು ಪ್ರಕರಣಗಳಲ್ಲಿ ಆರೋಪಿಯನ್ನು ಮದುವೆಯಾಗುವಂತೆ ಅನ್ಯಾಯಕ್ಕೊಳಗಾದ ಅಪ್ರಾಪ್ತೆಗೆ ಒತ್ತಾಯಿಸಲಾಗುತ್ತದೆ. ಇದರಿಂದ ನ್ಯಾಯ ಮರೀಚಿಕೆಯಾಗುತ್ತದೆ. ಹೀಗಾಗಿ, ಉಪ-ಕಂದಾಯ ವಿಭಾಗಕ್ಕೆ ಒಂದು ಮಕ್ಕಳ ಕಲ್ಯಾಣ ಸಮಿತಿ ರಚಿಸಬೇಕು. ಬಹುತೇಕ ಪ್ರಕರಣಗಳಲ್ಲಿ ತನಿಖಾ ತಂಡಗಳು ಸೂಕ್ತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದರೆ ಆರೋಪಿಗಳಿಗೆ ಶಿಕ್ಷೆ ಆಗಬಹುದುʼ ಎಂದು ಹೇಳಿದರು.
ಕೆಲ ಪ್ರಕರಣಗಳಲ್ಲಿ ತಾನು ಪ್ರೀತಿಸುತ್ತಿದ್ದ ಯುವಕನಿಂದ ಬಾಲಕಿ ಮೇಲೆ ಅತ್ಯಾಚಾರ ನಡೆಯುತ್ತದೆ. ಇನ್ನೂ ಕೆಲ ಪ್ರಕರಣಗಳಲ್ಲಿ ಅತ್ಯಾಚಾರ ಮಾಡಿದವನು ಪ್ರಬಲ ಆಗಿರುತ್ತಾನೆ. ಬಡ ಕುಟುಂಬಸ್ಥರು ಅವರ ವಿರುದ್ಧ ದೂರು ದಾಖಲಿಸಿ, ನ್ಯಾಯಾಲಯಕ್ಕೆ ಅಲೆದಾಡುವುದು ಬೇಡವೆಂದು ಪಾಲಕರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪೋಕ್ಸೋ ಕಾಯ್ದೆಯಡಿ ದಾಖಲಾದ ಹೆಚ್ಚಿನ ಪ್ರಕರಣಗಳಲ್ಲಿ ಪರಿಚಯಸ್ಥರು, ಅಪರಿಚಿತರು ಮತ್ತು ನೆರೆಹೊರೆಯವರೇ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡುಬರುತ್ತದೆ.
ಕಲ್ಯಾಣ ಕರ್ನಾಟಕ : ಕಲಬುರಗಿಯಲ್ಲೇ ಹೆಚ್ಚು ಪ್ರಕರಣ ಬೆಳಕಿಗೆ
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 1,367 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿ ಜಿಲ್ಲೆಯಲ್ಲೇ 285 ಪ್ರಕರಣ ವರದಿಯಾಗಿವೆ. ಈ ಪೈಕಿ ಕಲಬುರಗಿ ನಗರದಲ್ಲಿ 95 ಪ್ರಕರಣ ದಾಖಲಾದರೆ, ಕಲಬುರಗಿ ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಯಲ್ಲಿ 190 ಪ್ರಕರಣ ದಾಖಲಾಗಿವೆ.
ನಂತರದ ಸ್ಥಾನದಲ್ಲಿ ವಿಜಯನಗರ (248), ರಾಯಚೂರು (214), ಕೊಪ್ಪಳ (162), ಯಾದಗಿರಿ (159), ಬೀದರ್ (150) ಹಾಗೂ ಬಳ್ಳಾರಿ (149) ಜಿಲ್ಲೆಗಳಿವೆ. ಚಿಕ್ಕ ಜಿಲ್ಲೆಯಾಗಿರುವ ಯಾದಗಿರಿನಲ್ಲೂ 31 ತಿಂಗಳಲ್ಲಿ 162 ಪೋಕ್ಸೋ ಪ್ರಕರಣ ವರದಿಯಾಗಿರುವುದು ಗೃಹ ಇಲಾಖೆ ನೀಡಿದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ.
ಎರಡು ವರ್ಷದಲ್ಲಿ 1,461 ಅತ್ಯಾಚಾರ ಪ್ರಕರಣ, ಶಿಕ್ಷೆ ಶೂನ್ಯ
ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ಏರಿಕೆಯಾಗುತ್ತಲೇ ಇವೆ. ಅದರೊಂದಿಗೆ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಿಗೂ ಕಡಿವಾಣ ಬಿದ್ದಿಲ್ಲ.
ರಾಜ್ಯದಲ್ಲಿ 2023ರ ಜನವರಿಯಿಂದ 2025ರ ಫೆಬ್ರವರಿ 20ರವರೆಗೆ ಒಟ್ಟು 1,461 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಒಟ್ಟು 1,662 ಆರೋಪಿಗಳನ್ನು ಬಂಧಿಸಲಾಗಿದೆ. ದಾಖಲಾದ 1,461 ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಮಾತ್ರ ಶೂನ್ಯ ಆಗಿದೆ. 40 ಪ್ರಕರಣಗಳು ಖುಲಾಸೆಗೊಂಡಿವೆ. 909 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 80 ಪ್ರಕರಣಗಳು ಸುಳ್ಳು ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಗೃಹ ಇಲಾಖೆ ಮಾಹಿತಿ ನೀಡಿದೆ.
ʼಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಮತ್ತು ನೊಂದವರು ಸಂಧಾನಗಳ ಮೂಲಕ ರಾಜಿ ಮಾಡಿಕೊಳ್ಳುವುದು. ನ್ಯಾಯಾಲಯದ ವಿಚಾರಣೆ ವೇಳೆಯಲ್ಲಿ ಪ್ರತಿಕೂಲ ಸಾಕ್ಷಿ ನುಡಿಯುವುದು. ಅತ್ಯಾಚಾರ ಪ್ರಕರಣಗಳಲ್ಲಿ ನ್ಯಾಯಾಲಯ ವಿಚಾರಗಳಿಗೆ ಹಾಜರಾಗಲು ನಿರಾಸಕ್ತಿ ವಹಿಸುವ ಕಾರಣ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ. ಆದರೆ, ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರ್ಭಯ ಕೇಂದ್ರ (Integrated support centre for women and children) ದಲ್ಲಿ ಶೋಷಣೆಗೊಳಗಾದ ಮಹಿಳೆಗೆ ಒಂದೇ ಸೂರಿನಡಿಯಲ್ಲಿ ವೈದ್ಯಕೀಯ ಚಿಕಿತ್ಸೆ, ಆಪ್ತ ಸಮಾಲೋಚನೆ ಕಾನೂನು ನೆರವು ಒದಗಿಸಲಾಗುತ್ತಿದೆʼ ಎಂದು ಸರ್ಕಾರ ತಿಳಿಸಿದೆ.
ಕಠಿಣ ಶಿಕ್ಷೆಯಿಂದ ಅತ್ಯಾಚಾರ ತಡೆಯಬಹುದು
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ʼಈದಿನ ಡಾಟ್ ಕಾಮ್ʼ ಜೊತೆಗೆ ಮಾತನಾಡಿ, ʼಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗದೇ ಇರುವುದರಿಂದ ಅಪ್ರಾಪ್ತ ಬಾಲಕಿಯರ ಮೇಲೆ, ಮಹಿಳೆಯರ ಮೇಲೆ ಅತ್ಯಾಚಾರ ಹೆಚ್ಚುತ್ತಿವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಡಿವಾಣ ಹಾಕಲು ಕ್ರಮ ಕೈಗೊಳ್ಳಬೇಕು. ಲೈಂಗಿಕ ದೌರ್ಜನ್ಯ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ನಡೆಯಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕುʼ ಎಂದು ಹೇಳಿದರು.

ಹದಿನೆಂಟು ವರ್ಷದೊಳಗಿನ ಮಕ್ಕಳ ರಕ್ಷಣೆಯ ಉದ್ದೇಶದಿಂದ ಜಾರಿಗೆ ತಂದಿರುವ ʼಪೋಕ್ಸೋʼ (ಲೈಂಗಿಕ ಅಪರಾಧಿಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಮಕ್ಕಳ ಮೇಲೆ ಅತ್ಯಾಚಾರ, ಶೋಷಣೆ ತಡೆಯುವುದು, ದೌರ್ಜನ್ಯ ಎಸಗಿದವರಿಗೆ ಶಿಕ್ಷೆ ವಿಧಿಸಲಾಗುತ್ತಿದೆ. ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ ಪೋಕ್ಸೋ ಕಾಯ್ದೆಯಡಿ ದಂಡ ಹಾಗೂ ಜೀವಾವಧಿ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ. ಈ ಕಾಯ್ದೆಯ ಅರಿವಿದ್ದರೂ ಅತ್ಯಾಚಾರದಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ ಎನ್ನುವುದು ತೀವ್ರ ಕಳವಳಕಾರಿ ಸಂಗತಿ.
ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಮಾನವೀಯ ಕಾಳಜಿಯಿರುವ ಕಾಯ್ದೆಯದು. ಈ ಕಾಯ್ದೆಯಡಿ ನೂರಾರು ಅಪ್ರಾಪ್ತ ಮಕ್ಕಳ ಬಾಕರು ಜೈಲಿಗೆ ಹೋಗಿದ್ದಾರೆ. ಎಷ್ಟೇ ಪ್ರಭಾವಿಗಳಾಗಿದ್ದರೂ ಸೂಕ್ತ ಸಾಕ್ಷ್ಯಾಧಾರ ಇದ್ದರೆ ಅವರು ಜೈಲೂಟ ಮಾಡಲೇಬೇಕು. ವಿಪರ್ಯಾಸ ಏನೆಂದರೆ, ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯಾಗದಿರುವ ಪ್ರಮಾಣ ತೀರಾ ಕಡಿಮೆ ಎಂಬುದು ಗಮನಾರ್ಹ ಅಂಶ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಕೆಂಪುಕೋಟೆಯಲ್ಲಿ ನಿಂತು ಮೋದಿ ಆರ್‌ಎಸ್‌ಎಸ್‌ಅನ್ನು ಹೊಗಳುವ ದರ್ದು ಏನು?
ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕರಿಗೆ ಪೋಕ್ಸೋ ಕಾಯ್ದೆಯಡಿ ಶಿಕ್ಷೆ ಆಗಬಹುದು. ಆದರೆ ಮಕ್ಕಳ ಮೇಲಾಗುವ ಮಾನಸಿಕ ಆಘಾತ, ಹೆತ್ತವರು ನಿರಂತರ ಅನುಭವಿಸುವ ಸಂಕಟಕ್ಕೆ ಮದ್ದು ಯಾವುದಿದೆ. ತನ್ನ ದೈಹಿಕ ರಚನೆ, ಅಂಗಾಂಗಗಳ ಬಗ್ಗೆ, ಲೈಂಗಿಕತೆಯ ಬಗ್ಗೆ ಅರಿವೇ ಇಲ್ಲ, ಮಕ್ಕಳ ಮೇಲೆ ಬಲಾತ್ಕಾರದ ಲೈಂಗಿಕ ಕ್ರಿಯೆಯಿಂದ ಆಗುವ ದೈಹಿಕ, ಮಾನಸಿಕ ಗಾಯವನ್ನು ಅಪರಾಧಿಯ ಶಿಕ್ಷೆ ಗುಣಪಡಿಸುವುದೇ ಎಂಬುದು ಪ್ರಜ್ಞಾವಂತರ ಪ್ರಶ್ನೆ!

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.