ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ದಿನ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಹೆಸರನ್ನು ಬಹುತೇಕರಿಗೆ ಮೇಲಿನಿಂದ ನೋಡುವುದಕ್ಕಿಂತ ಕೆಳಗಿನಿಂದ ನೋಡುವುದೇ ರೂಢಿಯಾಗಿದೆ. ಫಲಿತಾಂಶ ಪ್ರಕಟವಾದ ವೇಳೆ ಬಹುತೇಕ ಬಾರಿ ಕೊನೆಯ ಸ್ಥಾನದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳೇ ಇರುತ್ತವೆ.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಮೇ 2ರಂದು ಪ್ರಕಟವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ವಿಜಯನಗರ ಜಿಲ್ಲೆ ಹೊರತುಪಡಿಸಿದರೆ ಉಳಿದ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿವೆ. ಅದರಲ್ಲೂ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು, ದೊಡ್ಡ ಜಿಲ್ಲೆಗಳ ಪಟ್ಟಿಯಲ್ಲಿರುವ ಕಲಬುರಗಿ ಈ ಬಾರಿ ಕೊನೆಯ ಸ್ಥಾನದಲ್ಲಿ ಇರುವುದು ಈ ಭಾಗದ ಜನರಿಗೆ ಬೇಸರ ಅಷ್ಟೇ ಅಲ್ಲದೇ ಆತಂಕ ಹೆಚ್ಚಿಸಿದೆ. ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೋಟಿ ಕೋಟಿ ಹಣ ಖರ್ಚಾದರೂ ಶೈಕ್ಷಣಿಕ ಕ್ಷೇತ್ರದ ʼಕಲ್ಯಾಣʼ ಆಗದೇ ಇರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಯಾದಗಿರಿ, ಕಲಬುರಗಿ ಕೊನೆ :
ಪ್ರತಿ ಸಲ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ದಿನ ನಮ್ಮ ಜಿಲ್ಲೆಗೆ ಯಾವ ಸ್ಥಾನ? ಫಲಿತಾಂಶ ಎಷ್ಟು? ಎಂಬ ಹಲವು ಕುತೂಹಲ ಇದ್ದೇ ಇರುತ್ತವೆ. ಆದರೆ ಕಳೆದ ಮೂರು ವರ್ಷಗಳ ಅಂಕಿ-ಅಂಶಗಳು ಗಮನಿಸಿದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಕೊನೆ ಸ್ಥಾನ ಖಾತ್ರಿ ಎಂಬಂತಾಗಿದೆ.
2024ರಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉಡುಪಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿತ್ತು. ಯಾದಗಿರಿ ಕೊನೆಯ ಸ್ಥಾನದಲ್ಲಿತ್ತು. ಅದಕ್ಕಿಂತ ಹಿಂದಿನ ವರ್ಷ ಕೂಡ ಯಾದಗಿರಿ ಕೊನೆಯ ಸ್ಥಾನವೇ ಪಡೆದಿತ್ತು. ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದರೆ, ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರಗಿ ಕೊನೆಯ ಸ್ಥಾನದಲ್ಲಿದೆ. ಕೊನೆಯ ಜಿಲ್ಲೆ ಎನ್ನುವ ಅಪಖ್ಯಾತಿ ಮುಂದುವರಿಸಿದೆ. ಯಾದಗಿರಿ ಜಿಲ್ಲೆ ಈ ಬಾರಿ 33ನೇ ಸ್ಥಾನಕ್ಕೆ (51.6) ಜಿಗಿತ ಕಂಡಿದೆ.
ಸ್ಥಾನಪಲ್ಲಟವಾದರೂ ಫಲಿತಾಂಶದಲ್ಲಿ ಚೇತರಿಕೆಯಿಲ್ಲ :
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳ ಸ್ಥಾನ 30ರ ಆಸುಪಾಸು ಇರುವುದು ಸಾಮಾನ್ಯವಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಫಲಿತಾಂಶ ಕುಸಿತವಾದರೂ ಇಲಾಖೆ ಗಂಭೀರವಾಗಿ ತೆಗೆದುಕೊಳ್ಳದ ಕಾರಣಕ್ಕೆ ಕಳಪೆ ಸಾಧನೆ ಮುಂದುವರೆದಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.
2023ರಲ್ಲಿ 29ನೇ ಸ್ಥಾನದಲ್ಲಿದ್ದ ಕಲಬುರಗಿ 2024ರಲ್ಲಿ 34ನೇ ಸ್ಥಾನಕ್ಕೆ ಕುಸಿದಿತ್ತು. ಪ್ರಸಕ್ತ ಸಾಲಿನಲ್ಲಿ ಫಲಿತಾಂಶ (ಶೇ 42.43) ಜೊತೆಗೆ 35ನೇ ಸ್ಥಾನಕ್ಕೆ ಇಳಿಮುಖ ಕಂಡಿದೆ. 2023ರಲ್ಲಿ 34ನೇ ಸ್ಥಾನದಲ್ಲಿದ್ದ ಬೀದರ್ ಕಳೆದ ವರ್ಷ ಒಂದು ಸ್ಥಾನ ಜಿಗಿತ ಕಂಡಿತ್ತು, ಈ ಬಾರಿ 31ನೇ ಸ್ಥಾನಕ್ಕೇರಿದ್ದು, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಬೀದರ್ ಮೂರನೇ ಸ್ಥಾನ (53.22) ಪಡೆದಿದೆ.
2023ರಲ್ಲಿ 16ನೇ ಸ್ಥಾನ ಪಡೆದಿದ್ದ ಕೊಪ್ಪಳ ಜಿಲ್ಲೆ ದಿಢೀರನೆ ಅರ್ಧದಷ್ಟು ಕುಸಿದು 32ನೇ ಸ್ಥಾನಕ್ಕೆ ತಲುಪಿತು. ಈ ಬಾರಿ ಎರಡು ಸ್ಥಾನ ಜಿಗಿದು ಮತ್ತೆ 30ನೇ (57.32) ಸ್ಥಾನದಲ್ಲಿದೆ. ರಾಯಚೂರು ಕಳೆದ ಮೂರು ವರ್ಷದಿಂದ ಒಂದೊಂದು ಸ್ಥಾನ ಇಳಿಮುಖವಾಗುತ್ತಿದ್ದು, ಈ ಬಾರಿ ಶೇ 52.05ರಷ್ಟು ಫಲಿತಾಂಶ ದಾಖಲಿಸಿ 32ನೇ ಸ್ಥಾನದಲ್ಲಿ.
2024ರಲ್ಲಿ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳು ಕ್ರಮವಾಗಿ 27 ಮತ್ತು 28 ಸ್ಥಾನದಲ್ಲಿದ್ದವು. ಆದರೆ ಈ ಬಾರಿ ವಿಜಯನಗರ 19ನೇ ಸ್ಥಾನಕ್ಕೆ ಜಿಗಿದು ಕಲ್ಯಾಣ ಕರ್ನಾಟಕದಲ್ಲಿ (67.62) ಮೊದಲ ಸ್ಥಾನ ಪಡೆದಿದೆ. ಕಳೆದ ವರ್ಷಕ್ಕಿಂತ 9 ಸ್ಥಾನಗಳ ಸುಧಾರಣೆ ಕಂಡಿದೆ. ಕಳೆದ ಬಾರಿ 28 ಸ್ಥಾನದಲ್ಲಿದ್ದ ಬಳ್ಳಾರಿ ಈ ಸಲ ಒಂದು ಸ್ಥಾನ ಕುಸಿತ ಕಂಡು 29ನೇ ಸ್ಥಾನದಲ್ಲಿದ್ದು, ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ (60.26) ಎರಡನೇ ಸ್ಥಾನ ಹೊಂದಿದೆ.
2023-24 ಹಾಗೂ 2024-25ನೇ ವರ್ಷದ ಫಲಿತಾಂಶ ಹೋಲಿಕೆ :
ಕಳೆದ ವರ್ಷಕ್ಕೆ ಹೋಲಿಸಿದರೆ ಕಲ್ಯಾಣ ಕರ್ನಾಟಕ ವಿಭಾಗದ 6 ಜಿಲ್ಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕನಿಷ್ಠ ಸಾಧನೆ ತೋರಿವೆ. ಸ್ಥಾನಪಲ್ಲಟವಾದರೂ ಫಲಿತಾಂಶದಲ್ಲಿ ಕುಸಿತ ಕಂಡಿರುವುದು ಶಿಕ್ಷಣ ಇಲಾಖೆ ಮಾಹಿತಿಯಿಂದ ಗೊತ್ತಾಗುತ್ತದೆ.
2023-24ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ ಒಟ್ಟು 1,91,071 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಈ ಪೈಕಿ 1,11,885 ವಿದ್ಯಾರ್ಥಿಗಳು ಉತೀರ್ಣರಾಗಿದ್ದರು. ಒಟ್ಟು ಶೇ 58.55 ಫಲಿತಾಂಶ ದಾಖಲಾಗಿತ್ತು. ಪ್ರಸಕ್ತ ವರ್ಷ 1,67,746 ವಿದ್ಯಾರ್ಥಿಗಳು ಹಾಜರಾಗಿದ್ದರು. ಅದರಲ್ಲಿ 89,658 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 53.44ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ಬಾರಿ ಶೇ 5.11ರಷ್ಟು ಫಲಿತಾಂಶ ಕುಸಿದಿದೆ.
ʼರಾಜ್ಯದ ಅಗ್ರ 10 ಜಿಲ್ಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಿಷಾದನೀಯ ಹಾಗೂ ದುಖಃಕರ ಸಂಗತಿಯಾಗಿದೆ. ಅದರಲ್ಲಿಯೂ ಕಲಬುರಗಿ ಜಿಲ್ಲೆಯು ಅತಿ ಕನಿಷ್ಠ ಸ್ಥಾನ ಪಡೆದು, ಕೇವಲ ಶೇ 42.43ರಷ್ಟು ಉತ್ತೀರ್ಣ ಪ್ರಮಾಣವನ್ನು ದಾಖಲಿಸಿರುವುದು ಆತಂಕಕಾರಿಯಾಗಿದೆʼ ಎಂದು ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ್ ಶಂಕರ್ ಬೇಸರ ವ್ಯಕ್ತಪಡಿಸಿದ್ದಾರೆ.
ʼಕಳೆದ ವರ್ಷದಿಂದ ಜಾರಿಗೊಳಿಸಲಾದ ʼವೆಬ್‌ಕಾಸ್ಟಿಂಗ್ʼ ವ್ಯವಸ್ಥೆಯು ಪರೀಕ್ಷಾ ಅಕ್ರಮಗಳನ್ನು ತಡೆದು, ಶೈಕ್ಷಣಿಕ ವ್ಯವಸ್ಥೆಯ ನೈಜ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ಇದರಿಂದಾಗಿ ಶೈಕ್ಷಣಿಕ ಗುಣಮಟ್ಟದ ವಾಸ್ತವ ಸ್ಥಿತಿ ಅರಿತುಕೊಳ್ಳಲು ಸಾಧ್ಯವಾಗಿದೆ. ಸರ್ಕಾರ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಣದ ಬಗ್ಗೆ ಚಿಂತಿಸುವ ಎಲ್ಲರ ಕಣ್ತೆರೆಸಿದೆ. ಕಳೆದ ಸಾಲಿನಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೃಪಾಂಕಗಳನ್ನು ನೀಡಿ ಉತ್ತೇಜಿಸುವ ನಿರ್ಧಾರ ಕೈಗೊಂಡಿತ್ತು. ಆದರೆ ಈ ಬಾರಿ ಯಾವುದೇ ಕೃಪಾಂಕಗಳನ್ನು ನೀಡಿಲ್ಲʼ ಎಂದು ಅವರು ತಿಳಿಸಿದ್ದಾರೆ.
ಕಲಬುರಗಿ ವಿಭಾಗದಲ್ಲಿ 21,381 ಶಿಕ್ಷಕರ ಹುದ್ದೆ ಖಾಲಿ :
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದಲ್ಲಿ 21,381 (ಶೇ 37.36) ಶಿಕ್ಷಕರ ಕೊರತೆಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತವಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿ ವಿಭಾಗದಲ್ಲಿ ಶೇ 23.12ರಷ್ಟು (15,885), ಮೈಸೂರು ವಿಭಾಗದಲ್ಲಿ ಶೇ 21.83ರಷ್ಟು (9,756) ಹಾಗೂ ಬೆಂಗಳೂರು ವಿಭಾಗದಲ್ಲಿ ಶೇ 19.90ರಷ್ಟು (12,432) ಶಿಕ್ಷಕರ ಹುದ್ದೆಗಳು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇವೆ. ಹೀಗಾಗಿ, ಕಾಯಂ ಶಿಕ್ಷಕರ ಕೊರತೆಯು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ʼಕಲಬುರಗಿ ವಿಭಾಗದಲ್ಲಿ ಪ್ರಾಥಮಿಕ 17,274 ಪ್ರೌಢ 4,107 ಸೇರಿ ಒಟ್ಟು 21,381 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಮುಂಬಡ್ತಿ ಮೂಲಕ 9,362 ಹಾಗೂ ನೇರ ನೇಮಕಾತಿ ಅಡಿ 12,019 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕಿದೆ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೆ, ನಾವು ಎಷ್ಟೇ ಕ್ರಮಗಳನ್ನು ಕೈಗೊಂಡು, ಕಟ್ಟಡಗಳಿಗಾಗಿ ಎಷ್ಟೇ ಹಣ ಖರ್ಚು ಮಾಡಿದರೂ ಶೈಕ್ಷಣಿಕ ಗುಣಮಟ್ಟ ಸುಧಾರಣೆ ಸಾಧ್ಯತೆಗಳು ಕಡಿಮೆ ಇದೆ. ನೇರ ನೇಮಕಾತಿ ಅಡಿ 5,267 ಖಾಲಿ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಒಳ ಮೀಸಲಾತಿ ನಿರ್ಬಂಧಗಳಿದ್ದು, ಮುಂಬರುವ 6 ತಿಂಗಳೊಳಗೆ ಪೂರ್ಣಗೊಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆʼ ಎಂದು ಹೇಳಿದ್ದಾರೆ.
27 ಶಾಲೆಗಳು ಶೂನ್ಯ ಸಂಪಾದನೆ:
ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಒಟ್ಟು 27 ಶಾಲೆಗಳು ಶೂನ್ಯ ಸಂಪಾದನೆ ಮಾಡಿವೆ. ಸರ್ಕಾರಿ ಕನ್ನಡ, ಉರ್ದು ಹಾಗೂ ಮರಾಠಿ ಮಾಧ್ಯಮ 3 ಶಾಲೆ, ಅನುದಾನಿತ 7, ಅನುದಾನ ರಹಿತ 16 ಮತ್ತು 1 ಅಲ್ಪಸಂಖ್ಯಾತರ ಇಲಾಖೆ ಶಾಲೆಗಳು ಇವುಗಳಲ್ಲಿ ಒಳಗೊಂಡಿವೆ.
ಕಲಬುರಗಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಹಿನ್ನೆಲೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕಡಿಮೆ ಗೌರವಧನದಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರಿಂದ ಗುಣಮಟ್ಟ ಶಿಕ್ಷಣ ನಿರೀಕ್ಷಿಸುವುದು ಅಸಾಧ್ಯ ಎನ್ನುವಂತಿದೆ. ವಿದ್ಯಾರ್ಥಿಗಳು ಗೈರು ಹಾಜರಾತಿಗೂ ಕಾರಣವಾಗಿದೆ. ಹೀಗಾಗಿ ಫಲಿತಾಂಶ ಕುಸಿದಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಬಗ್ಗೆ ಶಾಲಾ ಮುಖ್ಯಶಿಕ್ಷಕರೊಂದಿಗೆ ಸಮಾಲೋಚನಾ ಸಭೆ ನಡೆಸಲಾಗಿದೆʼ ಎಂದು ಕಲಬುರಗಿ ಡಿಡಿಪಿಐ ಸೂರ್ಯಕಾಂತ ಮದಾನೆ ಹೇಳಿದ್ದಾರೆ.
ʼಕಲ್ಯಾಣ ಕರ್ನಾಟಕ ಭಾಗದ 18 ಕಂದಾಯ ತಾಲ್ಲೂಕುಗಳ ಪೈಕಿ ಸುಮಾರು 14 ತಾಲ್ಲೂಕುಗಳು ಒಳಗೊಂಡ ನೂತನ ಶೈಕ್ಷಣಿಕ ವಲಯಗಳನ್ನು ಸೃಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಿರುವ 34 ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳ ಜೊತೆಗೆ ಹೆಚ್ಚುವರಿ ಶೈಕ್ಷಣಿಕ ವಲಯಗಳು ಸೇರ್ಪಡೆಯಾಗಲಿವೆ. ಆಡಳಿತಾತ್ಮಕ ಬಲವರ್ಧನೆ ಹಾಗೂ ಶೈಕ್ಷಣಿಕ ಮೇಲ್ವಿಚಾರಣೆ ಸುಲಭಗೊಳಿಸಲು ಸಹಕಾರಿಯಾಗಲಿದೆʼ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೋರಾಟಗಾರರು ಏನಂತಾರೆ?
ʼರಾಜ್ಯದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಬಹುತೇಕ ಜಿಲ್ಲೆಗಳು ಕೊನೆಯ ಸ್ಥಾನದಲ್ಲಿ ಫಲಿತಾಂಶ ಬಂದಿರುವುದು ದುಃಖಕರ ಸಂಗತಿಯಾಗಿದೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಈ ಭಾಗದ ಜನಪ್ರತಿನಿಧಿಗಳು, ಪ್ರಾದೇಶಿಕ ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆ ಸೇರಿದಂತೆ ಶಿಕ್ಷಕರು ಮತ್ತು ಜವಾಬ್ದಾರಿಯುತ ಸರ್ಕಾರದ ಆಯಾ ಸಮಿತಿಯ ಪ್ರಮುಖರು ಆತ್ಮಾವಲೋಕನ ಮಾಡಿಕೊಳ್ಳಬೇಕುʼ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
ʼಕಲ್ಯಾಣಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ ವಿಶೇಷ ಅಭಿವೃದ್ಧಿಗೆ, ಸ್ವಾಯತ್ತ ಅಭಿವೃದ್ಧಿ ಮಂಡಳಿ ರಚನೆಯಾಗಿದೆ. ಆದರೂ, ನಮ್ಮ ಅಭಿವೃದ್ಧಿ ಎಕೆ ಆಗುತ್ತಿಲ್ಲ ಎಂಬುವುದರ ಬಗ್ಗೆ ಸಚಿವರು, ಶಾಸಕರು ಸೇರಿದಂತೆ ಎಲ್ಲಾ ಪಕ್ಷದ ನಾಯಕರು ಗಂಭೀರವಾಗಿ ಪರಿಗಣಿಸುವುದಲ್ಲದೆ ಈ ಬಗ್ಗೆ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕಠಿಣ ಕ್ರಮಗಳ ಬಗ್ಗೆ ಇಂದಿನಿಂದಲೇ ಸಿದ್ಧತೆ ನಡೆಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಹೋರಾಟಗಳನ್ನು ಹಮ್ಮಿಕೊಳ್ಳುವ ಬಗ್ಗೆ ಆದಷ್ಟು ಶೀಘ್ರ ಕೋರ್ ಕಮಿಟಿಯ ಸಭೆ ನಡೆಸಲಾಗುವುದುʼ ಎಂದು ಹೇಳಿದರು.
ʼಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ವಿದ್ಯಾರ್ಥಿಗಳನ್ನು ಪ್ರಾಥಮಿಕ ಹಂತದಿಂದಲೇ ಸುಧಾರಣೆ ಮಾಡುವ ಅಗತ್ಯವಿದೆ. ಅತಿಥಿ ಶಿಕ್ಷಕರನ್ನು ಜುಲೈ, ಅಗಸ್ಟ್ ತಿಂಗಳಲ್ಲಿ ನೇಮಕ ಮಾಡುತ್ತಾರೆ. ಇದರಿಂದ ವಿಷಯ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗುತ್ತಿದೆ. ಹೀಗಾಗಿ ಶಾಲಾ ಆರಂಭದಲ್ಲೇ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ನಡೆಯಬೇಕು. ಇಲಾಖೆಯ ಮೇಲ್ವಿಚಾರಣೆ ನಿರಂತರವಾಗಿ ನಡೆಸುವ ಮೂಲಕ ಶಿಕ್ಷಕರಿಗೆ ಫಲಿತಾಂಶ ಸುಧಾರಣೆಯ ಜವಾಬ್ದಾರಿ ನೀಡಬೇಕು. ಶಿಕ್ಷಕರು ಕೂಡ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಕಾಳಜಿಪೂರ್ವಕ ಬೋಧನೆಗೆ ಮುಂದಾಗಬೇಕು. ಇನ್ನು ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಸರ್ಕಾರ ಕ್ರಮಕೈಗೊಳ್ಳಬೇಕುʼ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಉಪಾಧ್ಯಕ್ಷ ರಜಾಕ್ ಉಸ್ತಾದ್ ಒತ್ತಾಯಿಸಿದರು.
ʼಬಹುತೇಕ ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿದೆ. ಇನ್ನು ಮಕ್ಕಳಿರುವ ಕೆಲ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ನೇಮಕವಾದ ಅತಿಥಿ ಶಿಕ್ಷಕರಿಗೆ ಕಡಿಮೆ ಸಂಬಳ ಕೊಟ್ಟು ಹೆಚ್ಚು ಜವಾಬ್ದಾರಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರ ಅಸಡ್ಡೆ ತೋರದೆ ಶಿಕ್ಷಕರ ಖಾಲಿ ಹುದ್ದೆ ಭರ್ತಿಗೆ ಮುಂದಾಗಬೇಕು. ಅನುದಾನ ರಹಿತ ಶಾಲೆಗಳಿಗೆ ಹೋಲಿಸಿದರೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಫಲಿತಾಂಶ ಕುಸಿದಿರುವುದು ಬೇಸರ ತಂದಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಕೇವಲ ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಮಾತ್ರ ಚರ್ಚಿಸದೆ ಇದನ್ನು ಗಂಭೀರವಾಗಿ ಪರಿಗಣಿಸಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕುʼ ಎಂದು ಬೀದರ್‌ನ ನಿವೃತ್ತ ಪ್ರಾಚಾರ್ಯ ವಿಠ್ಠಲದಾಸ ಪ್ಯಾಗೆ ಒತ್ತಾಯಿಸಿದರು.
5 ವರ್ಷಗಳಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆ:
ರಾಜ್ಯ ಸರ್ಕಾರ ಪೂರ್ವ ಪ್ರಾಥಮಿಕ ಹಂತದಿಂದಲೇ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ‘ಓದು ಕರ್ನಾಟಕ’, ‘ಗಣಿತ ಕಲಿಕಾ ಯೋಜನೆ’, ‘ಮರುಸಿಂಚನ’ ಹಾಗೂ ಇನ್ನಿತರ ಸೂಕ್ತ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ 2025-26ನೇ ಸಾಲಿನಿಂದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನಗಳ ಅಡಿಯಲ್ಲಿ 200 ನೂತನ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ.ಆಕಾಶ್ ಶಂಕರ್ ತಿಳಿಸಿದ್ದಾರೆ.
‘ಅಕ್ಷರ ಆವಿಷ್ಕಾರ’ ಯೋಜನೆ ಯೋಜನೆಯಡಿಯಲ್ಲಿ ಈಗಾಗಲೇ ಶಿಕ್ಷಣ ಇಲಾಖೆಗೆ ₹1,200 ಕೋಟಿ ಅನುದಾನ ಲಭ್ಯವಾಗಿದ್ದು, ಇದು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ವೃದ್ಧಿಗೊಳಿಸಲು ಬಳಕೆಯಾಗಲಿದೆ. ಕೆಕೆಆರ್‌ಡಿಬಿಯ ‘ಅಕ್ಷರ ಆವಿಷ್ಕಾರ’ ಯೋಜನೆ ಅಡಿ ಈಗಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರಗಳು, ದ್ವಿಭಾಷಾ ಶಾಲೆಗಳು ಹಾಗೂ ಎನ್‌ಎಸ್‌ಕ್ಯೂಎಫ್ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಈ ಎಲ್ಲಾ ಉಪಕ್ರಮಗಳಿಂದಾಗಿ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಗುಣಮಟ್ಟ ಗಣನೀಯವಾಗಿ ಸುಧಾರಿಸುವ ನಿರೀಕ್ಷೆಯಿದೆ. ಈ ಎಲ್ಲ ಕ್ರಮಗಳ ಮೂಲಕ, ಮುಂದಿನ 5 ವರ್ಷಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಗಣನೀಯವಾಗಿ ಹೆಚ್ಚಿಸುವುದು ಸರ್ಕಾರ ಉದ್ದೇಶವಾಗಿದೆʼ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಕನ್ನಡ, ಉರ್ದು ಮಾಧ್ಯಮದ 500 ವಿದ್ಯಾರ್ಥಿಗಳಿಗೆ ʼಶಾಹೀನ್ ವಿದ್ಯಾರ್ಥಿ ವೇತನʼ
ಶಿಕ್ಷಣ ವ್ಯವಸ್ಥೆಯ ಗುಣಮಟ್ಟ ಸುಧಾರಣೆ ಹೇಗೆ? ಎಂಬ ಪ್ರಶ್ನೆ ಬಂದಾಗ, ʼಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ಎಂದು ಜಾರಿಕೊಳ್ಳುತ್ತಿದ್ದೇವೆ. ಮುಂದಿನ ತಲೆಮಾರಿಗೆ ನಾವು ಉಳಿಸಿ ಹೋಗಬೇಕಾಗಿರುವುದೇನು ಎಂಬುದರ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು.
ವರದಿ ಮಾಹಿತಿ : ರಫಿ ಗುರಗುಂಟಾ, ರಾಯಚೂರು, ಕೇಶವ ಕಟ್ಟಿಮನಿ ಕೊಪ್ಪಳ, ಗೀತಾ ಹೊಸಮನಿ ಕಲಬುರಗಿ

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.