ಪ್ರಜಾಪ್ರಭುತ್ವ ಉಳಿಸಿ – ಸಂವಿಧಾನವನ್ನು ರಕ್ಷಿಸಲು, ಈ ಬಾರಿ ಕೇಂದ್ರದಲ್ಲಿ ಪ್ರಜಾಸತ್ತಾತ್ಮಕ ಮತ್ತು ಜಾತ್ಯತೀತ ಸರ್ಕಾರ ರಚನೆಯಾಗಬೇಕು. ಸರ್ವಾಧಿಕಾರಿ ,ಕೋಮುವಾದಿ ಮತ್ತು ಭ್ರಷ್ಟ ದುರಾಡಳಿತ ಶಕ್ತಿಗಳು ಸೋಲಬೇಕು ಎಂದು ಸಂವಿಧಾನ ರಕ್ಷಣಾ ವೇದಿಕೆ ಹೇಳಿದೆ. ಸಂವಿಧಾನ ಉಳಿಸುವ ಆದ್ಯ ಕರ್ತವ್ಯವೆಂದು ಭಾವಿಸಿ ಮತದಾರರು ತಮ್ಮ ಮತ ಚಲಾಯಿಸಬೇಕೆಂದು ಕರೆ ಕೊಟ್ಟಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂವಿಧಾನ ರಕ್ಷಣಾ ವೇದಿಕೆ, “ಭಾರತದ ಜನತೆಯ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬದುಕು ಹೇಗಿರಬೇಕು. ಯಾವ ಮೌಲ್ಯಗಳನ್ನು ಆಧರಿಸಿರಬೇಕು. ಹಾಗೂ ಯಾವ ದಿಕ್ಕಿನತ್ತ ಸಾಗಬೇಕೆಂದು ತಿಳಿಸಿ ಮುನ್ನೆಡೆಸುವ ಏಕೈಕ ಸಾಧನ ನಮ್ಮ ಸಂವಿಧಾನ” ಎಂದಿದೆ.
“ಸಾಂವಿಧಾನಿಕ ಧರ್ಮ, ಸಾಂವಿಧಾನಿಕ ನೈತಿಕತೆ ಹಾಗೂ ಸಾಂವಿಧಾನಿಕ ಮೌಲ್ಯಗಳೇ ನಮ್ಮ ದಾರಿದೀಪ. ಸಮಾನತೆ ಮತ್ತು ಸಾಮಾಜಿಕ–ಆರ್ಥಿಕ-ರಾಜಕೀಯ ನ್ಯಾಯಕ್ಕಾಗಿ ನಾವೇ ಸಮಾಲೋಚಿಸಿ-ಚರ್ಚಿಸಿ-ಒಮ್ಮತದ ಮೂಲಕ ರೂಪಿಸಿಕೊಂಡ ನಮ್ಮ ಸಂವಿಧಾನ ಸ್ವಾತಂತ್ರ್ಯ ಚಳುವಳಿಯ ಬಹುದೊಡ್ಡ ಉತ್ಪನ್ನ. ಸ್ವಾತಂತ್ರ್ಯ ಚಳುವಳಿಯ ತ್ಯಾಗ ಬಲಿದಾನಗಳ ಮೂರ್ತ ಸ್ವರೂಪ ಸಂವಿಧಾನ. ಆದ್ದರಿಂದಲೇ, ಇದು ಭಾರತದ ಜನತೆಯ ಸಾರ್ವಜನಿಕ ಬದುಕಿನ ಧರ್ಮಗ್ರಂಥ” ಎಂದಿದೆ.
“ಸ್ವಾತಂತ್ರ್ಯಾನಂತರ ಭಾರತದ ಜನತೆ ತಮ್ಮ ಪ್ರಾತಿನಿಧಿಕ ಸಂವಿಧಾನ ರಚನಾ ಸಭೆಯಲ್ಲಿ ಸಂವಿಧಾನವನ್ನು ರೂಪಿಸಿ ಅಳವಡಿಸಿಕೊಂಡು ಆಧಿಕೃತವಾಗಿ ಜಾರಿಗೊಳಿಸಿಕೊಂಡ ನಂತರ, ಭಾರತವನ್ನು ಹೇಗೆ ಕಟ್ಟಿಕೊಳ್ಳಬೇಕೆಂಬ ಬಗ್ಗೆ ಸಂವಿಧಾನದ ಪ್ರಸ್ತಾವನೆಯಲ್ಲಿ ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ. ಅದರಂತೆ, ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿಸುವ ಮಹದಾಶೆಯನ್ನು ಅದು ಹೊಂದಿದೆ” ಎಂದು ಹೇಳಿದೆ.
“ಮೊದಲ 65 ವರ್ಷಗಳಲ್ಲಿ ಸಂವಿಧಾನವನ್ನು ಪೂರ್ಣವಾಗಿ ಜಾರಿಗೊಳಿಸಲು ಸಾಧ್ಯವಾಗದಿದ್ದರೂ, ಸಾಂವಿಧಾನಿಕ ಮೌಲ್ಯಗಳಿಗೆ ಭಂಗವಾಗದ ರೀತಿಯಲ್ಲಿ ರಕ್ಷಿಸಿ ಕಾಪಾಡಿಕೊಂಡು ಮುನ್ನೆಡೆಯಲು ಸಾಧ್ಯವಾಗಿತ್ತೆಂಬುದು ಮಹತ್ವದ ಸಂಗತಿ. ಆದರೆ, ಕಳೆದ 10 ವರ್ಷಗಳಿಂದ ಸಂವಿಧಾನ ಹಾಗೂ ಸಾಂವಿಧಾನಿಕ ಮೌಲ್ಯಗಳ ಮೇಲೆ ನಿರಂತರ ದಾಳಿಯಾಗುತ್ತಿದೆ” ಎಂದು ತಿಳಿಸಿದೆ.
“ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ಬುಡಮೇಲು ಮಾಡುವ ದುಷ್ಕೃತ್ಯವನ್ನು ಕೆಲವು ಶಕ್ತಿಗಳು ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ಮಾಡುತ್ತಿವೆ. ಕೆಲವರ ಪುಂಡಾಟಿಕೆಯಂತು ಮಿತಿಮೀರಿದ್ದು, ಸಂವಿಧಾನವನ್ನೇ ಬದಲಾಯಿಸುವ ಉದ್ಧಟತನದ ಮಾತುಗಳ್ಳನಾಡುತ್ತಿದ್ದಾರೆ. ಒಟ್ಟಾರೆ, ಭಾರತದ ಸ್ವಾಂತಂತ್ರ್ಯ ಚಳುವಳಿಯ ತ್ಯಾಗ ಬಲಿದಾನದ ಮೂಲಕ ಹೊಸ ಭಾರತವನ್ನು ಕಟ್ಟಿಕೊಳ್ಳಲು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಜಗತ್ತಿನ ಶ್ರೇಷ್ಠ ಸಂವಿಧಾನ ಇಂದು ಬಹು ದೊಡ್ಡ ಅಪಾಯದಲ್ಲಿದೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ನೀತಿ ಸಂಹಿತೆ ಉಲ್ಲಂಘನೆ; ಇಬ್ಬರು ಪ್ರಭಾವಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲು
ಕಳೆದ 10 ವರ್ಷಗಳಲ್ಲಿ ಸಂವಿಧಾನವನ್ನು ಗೌಣಗೊಳಿಸುವ ಹಾಗೂ ಅಸ್ಥಿರಗೊಳಿಸುವ ಅನೇಕ ಕಾರ್ಯಗಳನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ತನ್ನ ನೀತಿ, ಕಾನೂನು ಮತ್ತು ಕಾರ್ಯಕ್ರಮಗಳ ಜಾರಿಯಲ್ಲಿ ಅನುಸರಿಸಿದೆ. 10 ವರ್ಷದ ಕನಿಷ್ಠ 10 ಸಂವಿಧಾನ ವಿರೋಧಿ ಉದಾಹರಣೆಗಳನ್ನು ಪಟ್ಟಿ ಮಾಡಬಹುದಾಗಿದೆ.
- ಸಂವಿಧಾನದಲ್ಲಿನ ಶಿಕ್ಷಣದ ಮೂಲಭೂತ ಹಕ್ಕಿನ ಭಾಗವಾಗಿ ದೇಶದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಒದಗಿಸಲು ರೂಪಿಸಿ ಜಾರಿಗೊಳಿಸಿದ್ದ ಶಿಕ್ಷಣ ಹಕ್ಕು ಕಾಯಿದೆಯ ಸಂಪೂರ್ಣ ನಿರ್ಲಕ್ಷ್ಯ
- ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ ಶಿಕ್ಷಣದ ಸಂಪೂರ್ಣ ಕೇಸರೀಕರಣ, ಕೋಮುವಾದೀಕರಣ, ಕೇಂದ್ರೀಕರಣ, ಖಾಸಗೀಕರಣ, ವಾಣಿಜ್ಯೀಕರಣ ಮತ್ತು ಕಾರ್ಪೊರೇಟರೀಕರಣ
- ಎಲ್ಲ ರಂಗಗಳಲ್ಲಿ ಅಸಂವಿಧಾನಿಕ ನೀತಿ/ಕಾನೂನುಗಳು ಮತ್ತು ಕಾರ್ಯಕ್ರಮಗಳ ಮೂಲಕ ಸಂವಿಧಾನದ ನಿರಂತರ ಉಲ್ಲಂಘನೆ
- ಜನರ ಗೌರವಯುತ ಬದುಕನ್ನು ಕಸಿದ ತೀವ್ರ ಬೆಲೆ ಏರಿಕೆ ಮತ್ತು ಆರ್ಥಿಕ ಸಂಕಷ್ಠ
- ಯುವಜನರ ಜೀವನವನ್ನು ದುರ್ಬರಗೊಳಿಸಿದ ನಿರುದ್ಯೋಗದ ಸಮಸ್ಯೆ
- ಸಂವಿಧಾನದ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಅಡಿಯಲ್ಲಿ ಸಮುದಾಯ ಮತ್ತು ಸಾರ್ವಜನಿಕ ಒಳಿತಿಗಾಗಿ ರಕ್ಷಿಸಬೇಕಾದ ಎಲ್ಲ ಸಾರ್ವಜನಿಕ ಆಸ್ತಿ ಮತ್ತು ಸಂಪನ್ಮೂಲಗಳ ಸಂಪೂರ್ಣ ಮಾರಾಟ
- ಧರ್ಮಾಂಧತೆಯ ಕೋಮುವಾದವನ್ನು ಹರಡುವ ಮತ್ತು ಸುಳ್ಳಿನ ಮೂಲಕ ದ್ವೇಷ ಬಿತ್ತನೆಯನ್ನೇ ಎಲ್ಲರ ವಿಕಾಸವೆಂದು ಬಿಂಬಿಸುವ ಮೂಲಕ ದೇಶದ ಜನರನ್ನು ದಾರಿ ತಪ್ಪಿಸುವ ಏಕೈಕ ಅಜೆಂಡಾ
- ಸಂವಿಧಾನದ ಮೂಲ ಆಶಯವಾದ ಬಹುತ್ವ, ಬಹುಸಂಸ್ಕೃತಿ, ಬಹುಭಾಷೆ ಮತ್ತು ಶಾಂತಿಯುತ ಸಹಬಾಳ್ವೆಯನ್ನು ಹತ್ತಿಕ್ಕುವ ಧಾರ್ಮಿಕ ಮತಾಂಧತೆಯ ಪೊಳ್ಳು ರಾಷ್ಟ್ರೀಯವಾದ ಮೂಲಕ ಹಿಂದೂ ರಾಷ್ಟ್ರ ನಿರ್ಮಾಣದ ಸಂವಿಧಾನ ವಿರೋಧಿ ರಾಷ್ಟ್ರೀಯತೆ ಪ್ರತಿಪಾದನೆ
- ನಿರಂತರವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ದೇಶದ-ನಾಡಿನ ಪ್ರಜ್ಞಾವಂತ ಬುದ್ದಿಜೀವಿಗಳ ಮೇಲೆ ನಿರಂತರ ದಾಳಿ ಹಾಗೂ ಅವಮಾನ. ಮಕ್ಕಳ-ಮಹಿಳೆಯರ ಮೇಲಿನ ನಿರಂತರ ದೌರ್ಜನ್ಯ.
- ಸಂವಿಧಾನ ಬದ್ಧ ಸಂಸದೀಯ ಚುನಾವಣಾ ವ್ಯವಸ್ಥೆಯನ್ನೇ ಬುಡಮೇಲು ಮಾಡುವ, ಭಾರತದ ಇತಿಹಾಸದಲ್ಲಿ ಕಂಡರಿಯದ ಚುನಾವಣಾ ಬಾಂಡ್ ಭ್ರಷ್ಟಾಚಾರ
ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನೋಡಿದಾಗ , ಪರಮಾಧಿಕಾರವು ಭ್ರಷ್ಟತೆಗೆ ಒಲವು ತೋರುತ್ತದೆ ಮತ್ತು ಸಂಪೂರ್ಣ ಸರ್ವಾಧಿಕಾರವು ಸಂಪೂರ್ಣವಾಗಿ ಭ್ರಷ್ಟಗೊಳ್ಳುತ್ತದೆ” ಎಂಬುದು ಈಗಿನ ಸಂದರ್ಭದಲ್ಲಿ ಸತ್ಯವಾಗಿದೆ.
ಸಂವಿಧಾನ ಉಳಿಯದೆ, ಭಾರತ ಒಂದು ದೇಶವಾಗಿ ಉಳಿಯಲು ಸಾಧ್ಯವಿಲ್ಲವೆಂಬುದು ನಮ್ಮ ಖಚಿತ ನಂಬಿಕೆ. ಹೀಗಾಗಿ, ದೇಶದ-ನಾಡಿನ ಜನರು ಎಚ್ಚರಿಕೆಯಿಂದ ಮತ್ತು ಸಂವಿಧಾನ ಉಳಿಸುವ ಆದ್ಯ ಕರ್ತವ್ಯದ ಭಾಗವಾಗಿ ಮತ ಚಲಾಯಿಸಬೇಕು ಎಂದು ವಿನಮ್ರವಾಗಿ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದೆ.