ಬೆಳಗಾವಿ ಜಿಲ್ಲೆಯ ಬಡ ರೈತ ಕುಟುಂಬವೊಂದು ಕೃಷಿ ಚಟುವಟಿಕೆಗೆ ಅನುಕೂಲವಾಗಲಿ ಎಂದು ಗೃಹಲಕ್ಷ್ಮೀ ಹಣ ಕೂಡಿಟ್ಟು ಎತ್ತು ಖರೀದಿಸಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತವಗ ಗ್ರಾಮದ ಬಸವ್ವ ಶಿವಪ್ಪ ಬುಳ್ಳಿ ದಂಪತಿ ಎತ್ತು ಖರೀದಿಸಿದ್ದಾರೆ. 22 ಸಾವಿರ ರೂ. ಹಣದಿಂದ ಒಂದು ಎತ್ತನ್ನು ಖರೀದಿಸಿದ್ದಾರೆ.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹ ಲಕ್ಷ್ಮೀ ಹಣವನ್ನು ಜನರು ನಾನಾ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿರುವುದು ವರದಿಯಾಗುತ್ತಿವೆ. ಇತ್ತೀಚೆಗೆ ಗೃಹಲಕ್ಷ್ಮಿ ಹಣದಿಂದ ಫ್ರಿಡ್ಜ್ ಖರೀದಿಸಿದ್ದು, ಮಹಿಳೆಯೊಬ್ಬರು ಊರಿಗೆ ಹೋಳಿಗೆ ಊಟ ಹಾಕಿಸಿದ ಬಗ್ಗೆ ಸುದ್ದಿಯಾಗಿತ್ತು.
ಈ ಹಿಂದೆ ಬಸವ್ವ ಅವರ ಮನೆಯಲ್ಲಿ ಒಂದೇ ಎತ್ತು ಇತ್ತು. ಇದರಿಂದ ಕೃಷಿ ಚಟುವಟಿಕೆಗೆ ಸಮಸ್ಯೆಯಾಗಿತ್ತು. ಮತ್ತೊಂದು ಎತ್ತು ಖರೀದಿಸಬೇಕು ಎಂದರೆ ಹಣದ ಅಭಾವವಿತ್ತು. ಹಾಗಾಗಿ, 11 ತಿಂಗಳ ಗೃಹಲಕ್ಷ್ಮೀ ಹಣವನ್ನು ಸೇರಿಸಿದ ಬಸವ್ವ ಒಂದು ಎತ್ತು ಖರೀದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ʼವಚನ ದರ್ಶನʼ ಕೃತಿಯಿಂದ ವಚನ ಸಾಹಿತ್ಯ ನಿರ್ನಾಮಕ್ಕೆ ಯತ್ನ : ಆರ್.ಕೆ.ಹುಡಗಿ
ಮಕ್ಕಳಿಲ್ಲದ ಬಸವ್ವ, ಶಿವಪ್ಪ ದಂಪತಿ ಎತ್ತುಗಳನ್ನೇ ಮಕ್ಕಳಂತೆ ಸಾಕುತ್ತಿದ್ದಾರೆ. ಬಸವ್ವ ಮನೆಗೆ ಗೋಕಾಕ್ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಮಹಾಂತೇಶ್ ಕಡಾಡಿ ಭೇಟಿ ನೀಡಿ, ದಂಪತಿಗೆ ವೈಯಕ್ತಿಕವಾಗಿ ನೆರವು ನೀಡಿದರು. ಬೇಸಾಯವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ದಂಪತಿಗೆ ಅನುಕೂಲವಾಗಿದೆ. ಯೋಜನೆ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯನವರಿಗೆ ಬಸವ್ವ ಕೃತಜ್ಞತೆ ಸಲ್ಲಿಸಿದ್ದಾರೆ.