ಕಳೆದ ಒಂದು ವಾರದಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಮಹೋತ್ಸವದ ಸಂಭ್ರಮ ಮನೆ ಮಾಡಿತ್ತು. ಕರಗ ಮಹೋತ್ಸವದ ಮೆರವಣಿಗೆ ವೇಳೆ ಯುವಕರ ನಡುವೆ ಗಲಾಟೆಎ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಅಣ್ಣಮ್ಮ ದೇಗುಲದ ಬಳಿ ಏಪ್ರಿಲ್ 24ರ ಮುಂಜಾನೆ 3.30ರ ಸುಮಾರಿಗೆ ಘಟನೆ ನಡೆದಿದೆ. ಸಾರಧಿ ಮೃತಪಟ್ಟ ಯುವಕ.
ಮೃತ ಯುವಕ ನಗರದ ಶೇಷಾದ್ರಿಪುರಂನ ವಿವಿ ಗಿರಿ ಕಾಲೋನಿಯ ನಿವಾಸಿ. ಬೆಂಗಳೂರಿನ ಅಣ್ಣಮ್ಮ ದೇಗುಲದ ಮುಂದೆ ಸಾರಧಿ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ, ಸ್ನೇಹಿತರನ್ನ ಸ್ಪರ್ಶಿಸಿದ್ದಾರೆ. ಈ ವಿಚಾರವಾಗಿ ಅಲ್ಲಿ ಇದ್ದಿದ್ದ ಗುಂಪುಗಳ ಮಧ್ಯೆ ಜಗಳವಾಗಿದೆ. ಅಲ್ಲದೇ, ಸಾರಧಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 23 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ತಕ್ಷಣವೇ ಸಾರಧಿಯನ್ನು ಸ್ಥಳೀಯರು ಮಲ್ಲೇಶ್ವರಂ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಚಿಕಿತ್ಸೆ ಫಲಿಸದೆ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾರಧಿ ಮೃತಪಟ್ಟಿದ್ದಾನೆ.
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಾಲ್ವರು ಆರೋಪಿಗಳು ಅಪ್ರಾಪ್ತರು ಎನ್ನಲಾಗಿದೆ.