ಮಹಿಳೆಯೊಬ್ಬರಿಗೆ ನಾಯಿ ಕಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಅವರಿಗೆ ರಾಜರಾಜೇಶ್ವರಿ ನಗರದ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಮೂರು ದಿನದ ಒಳಗೆ ದರ್ಶನ್ ಅವರು ವಿಚಾರಣೆಗೆ ಹಾಜರಾಗಬೇಕು ಎಂದು ನೋಟಿಸ್ ಮೂಲಕ ತಿಳಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿಯನ್ನು ನೋಡಿಕೊಳ್ಳುತ್ತಿದ್ದ ಹೇಮಂತ್ ಎನ್ನುವವರನ್ನು ಪೊಲೀಸರು ಈಗಾಗಲೇ ವಿಚಾರಣೆ ನಡೆಸಿದ್ದು, ಈಗ ದರ್ಶನ್ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಏನಿದು ಪ್ರಕರಣ: ಅಮಿತ ಜಿಂದಾಲ್ ಎನ್ನುವ ಮಹಿಳೆ ಕಾರ್ಯಕ್ರಮವೊಂದಕ್ಕೆ ರಾಜರಾಜೇಶ್ವರಿ ನಗರಕ್ಕೆ ಬಂದಿದ್ದರು. ಈ ವೇಳೆ ಅವರು ನಟ ದರ್ಶನ್ ಅವರ ಮನೆಯ ಬಳಿ ಕಾರು ಪಾರ್ಕಿಂಗ್ ಮಾಡಿದ್ದರು. ಕಾರ್ಯಕ್ರಮ ಮುಗಿದ ನಂತರ ಕಾರು ತೆಗೆದುಕೊಳ್ಳಲು ಹೋದಾಗ ಅಲ್ಲಿ ದರ್ಶನ್ ಮನೆಯ ನಾಯಿಗಳಿದ್ದವು. ಎರಡು ನಾಯಿಗಳನ್ನು ಕಟ್ಟಿ ಹಾಕಲಾಗಿತ್ತು, ಒಂದು ನಾಯಿಯನ್ನು ಹಾಗೆಯೆ ಬಿಟ್ಟಿದ್ದರು ಎನ್ನಲಾಗಿದೆ. ಆ ನಾಯಿ ಅಮಿತ ಅವರ ಮೇಲೆ ಮೇಲೆ ದಾಳಿ ಮಾಡಿದೆ. ಅದನ್ನು ನೋಡಿದರೂ ದರ್ಶನ್ ಮನೆಯ ಸಿಬ್ಬಂದಿ ಸುಮ್ಮನಿದ್ದರು ಎಂದು ಅವರು ಆರೋಪಿಸಿದ್ದಾರೆ. ಈ ಸಂಬಂಧ ಅವರು ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದೂರು ನೀಡಿದ್ದು, ದರ್ಶನ್ ಮನೆಯ ಸಿಬ್ಬಂದಿ ಎ1 ಆರೋಪಿಯಾಗಿದ್ದರೆ, ದರ್ಶನ್ ಎ2 ಆರೋಪಿಯಾಗಿದ್ದಾರೆ.