ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟ ಕಾಡಂಚಿನಲ್ಲಿ ಪದೇಪದೆ ಮಹಿಳೆಯ ಅಂಗಾಂಗಗಳು ಪತ್ತೆಯಾಗುತ್ತಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಇಪ್ಪತ್ತು ದಿನಗಳ ಹಿಂದೆ ಮಹಿಳೆಯ ಕೈ ಪತ್ತೆಯಾಗಿತ್ತು. ಇಂದು (ಮಾರ್ಚ್ 15) ಮಹಿಳೆಯ ಎರಡು ಕಾಲುಗಳು ಪತ್ತೆಯಾಗಿವೆ. 30 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಎರಡು ಕಾಲುಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇನ್ನು ದೇಹದ ಉಳಿದ ಭಾಗದ ಶೋಧ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟದ ಸಮೀಪದಲ್ಲಿರುವ ಮುನಿ ಮಾರಯ್ಯನ ದೊಡ್ಡಿ ಅರಣ್ಯದಂಚಿನಲ್ಲಿ ಅಪರಿಚಿತ ಮಹಿಳೆಯ ಎರಡು ಕಾಲುಗಳು ಪತ್ತೆಯಾಗಿವೆ.
ಸ್ಥಳೀಯರು ಮಾರ್ಚ್ 15ರಂದು ಬೆಳಗಿನ ಜಾವ ವಾಕಿಂಗ್‌ಗೆ ತೆರಳಿದ್ದಾಗ ಮೃತದೇಹದ ಕಾಲುಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಈ ಬಗ್ಗೆ ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಲ್ಮಾ ಮೀಡಿಯಾ ಸ್ಕೂಲ್‌ನಲ್ಲಿ 6 ತಿಂಗಳ ಡಿಪ್ಲೋಮಾ ಕೋರ್ಸ್‌ಗೆ ಪ್ರವೇಶ ಆರಂಭ
ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯ ತಂಡ ಮತ್ತು ಶ್ವಾನದಳ ಪರಿಶೀಲನೆ ನಡೆಸಿದ್ದಾರೆ.
15 ರಿಂದ 20 ದಿನಗಳ ಹಿಂದೆ 30 ವರ್ಷದ ಮಹಿಳೆಯನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಬಳಿಕ ಮಹಿಳೆಯ ಅಂಗಾಂಗಗಳನ್ನು ಕತ್ತರಿಸಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ.