ಪ್ರಗತಿಪರ ಚಿಂತಕ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಎಸ್. ಭಗವಾನ್ ಅವರ ಮುಖಕ್ಕೆ ಕೋರ್ಟ್ ಅಂಗಳದಲ್ಲೇ ಮಸಿ ಬಳಿದಿದ್ದ ವಕೀಲೆಯನ್ನು ಬಾರ್ ಕೌನ್ಸಿಲ್ ನಿಂದ ಅಮಾನತು ಮಾಡಲಾಗಿದೆ.
ಶ್ರೀರಾಮ ದೇವರನ್ನು ನಿಂದಿಸಿ ಬರೆದಿದ್ದಾರೆ ಎಂದು ಆರೋಪಿಸಿ 2ನೇ ಎಸಿ ಎಂ ಎಂ ನ್ಯಾಯಾಲಯದಲ್ಲಿ ವಕೀಲೆ ಮೀರಾ ರಾಘವೇಂದ್ರ ಕೇಸು ದಾಖಲಿಸಿದ್ದರು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಾಂಕ 04/02/2021 ರಂದು ನ್ಯಾಯಾಲಯದಲ್ಲಿ ಹಾಜರಾಗಿ ಜಾಮೀನು ಪಡೆದು ಕೋರ್ಟಿನಿಂದ ಹೊರಬರುತ್ತಿದ್ದ ಭಗವಾನ್ ಅವರ ಮುಖಕ್ಕೆ ಮಸಿ ಬಳಿದು, ಪ್ರೊ.ಕಲ್ಬುರ್ಗಿ ಹಾಗೂ ಗೌರಿ ಲಂಕೇಶ್ ಕೊಲೆಯಾದಂತೆ, ಭಗವಾನ್ ಅವರನ್ನೂ ಕೊಲೆ ಮಾಡುವುದಾಗಿ ಜೀವ ಬೆದರಿಕೆಯನ್ನು ಹಾಕಿದ್ದರು.
ಈ ದೃಶ್ಯ ಹಾಗೂ ವರದಿಗಳು ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಆರೋಪಿ ವಕೀಲೆ ಮೀರಾ ರಾಘವೇಂದ್ರ ಅವರ ವಿರುದ್ಧ ಭಗವಾನ್ ಅವರು ಕರ್ನಾಟಕ ಬಾರ್ ಕೌನ್ಸಿಲ್‌ಗೆ ದೂರು ನೀಡಿದ್ದರು. ಸದರಿ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮೀರಾ ರಾಘವೇಂದ್ರ ಅವರಿಗೆ ಕಳುಹಿಸಿದ ರಿಜಿಸ್ಟರ್ಡ್ ಅಂಚೆಯನ್ನು ಸ್ವೀಕರಿಸಲಿಲ್ಲ. ಅವರ ಅನುಪಸ್ಥಿತಿಯಲ್ಲಿ ದೂರಿನ ವಿಚಾರಣೆ ನಡೆಸಿದ ಬಾರ್ ಕೌನ್ಸಿಲ್ ಕಮಿಟಿ, “ವಕೀಲೆಯಾಗಿದ್ದೂ ದೂರಿನ ಬಗ್ಗೆ ವಿಚಾರಣೆಗೆ ಹಾಜರಾಗದೇ, ನೋಟಿಸನ್ನು ಸ್ವೀಕರಿಸದೇ ನಡೆದುಕೊಂಡಿರುವ ರೀತಿ ಬಾರ್ ಕೌನ್ಸಿಲ್ ನ ನಿಯಮಗಳಿಗೆ ವಿರ್ರುದ್ಧವಾಗಿದ್ದು, ಕೋರ್ಟಿನ ಆವರಣದಲ್ಲಿ ವಕೀಲರ ಸಮವಸ್ತ್ರದಲ್ಲಿದ್ದು ಮುಖಕ್ಕೆ ಮಸಿ ಬಳಿಯುವ ಕೆಲಸ ಅವರ ದುರ್ನಡತೆಯನ್ನು ತೋರಿಸುತ್ತದೆ. ತಮ್ಮ ವೃತ್ತಿಗೆ ಬದ್ಧರಾಗಿರದೇ ಅವರು ನಡೆದುಕೊಂಡಿರುವ ರೀತಿ, ವೃತ್ತಿಯ ಶಿಷ್ಟಾಚಾರಕ್ಕೆ ಅಪಮಾನ. ಆರೋಪಿ ವಕೀಲೆ ಮೂರು ತಿಂಗಳ ಕಾಲ ಕರ್ನಾಟಕ ಹಾಗೂ ದೇಶದ ಯಾವುದೇ ನಾಯಾಲಯಗಳಲ್ಲಿ ವಕೀಲಿಕೆ ಮಾಡಬಾರದು” ಎಂದು ಕರ್ನಾಟಕ ಬಾರ್ ಕೌನ್ಸಿಲ್ ದಿನಾಂಕ ನ.21ರಂದು ಆದೇಶಿಸಿದೆ.
ಈ ಬಗ್ಗೆ ಈ ದಿನ ದ ಜೊತೆ ಮಾತನಾಡಿದ ಪ್ರೊ ಭಗವಾನ್, ಇಂದು ಕೋರ್ಟ್ ರಿಜಿಸ್ಟ್ರಾರ್ ಈ ಮಾಹಿತಿ ನೀಡಿರುವುದಾಗಿ ತಿಳಿಸಿದರು. ತಡವಾಗಿಯಾದರೂ ಬಾರ್ ಕೌನ್ಸಿಲ್ ಕ್ರಮ ಕೈಗೊಂಡಿರುವುದು ಸಮಾಧಾನ ತಂದಿದೆ ಎಂದರು.