ರಾಜ್ಯಾದ್ಯಂತ ಹುಲಿ ಉಗುರು ಸುದ್ದಿಯಲ್ಲಿದೆ. ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದ ವರ್ತೂರು ಸತೋಷ್ ಅವರು ಹುಲಿ ಉಗುರು ಇರುವ ಲಾಕೆಟ್ ಧರಿಸಿದ್ದರು. ಈ ಬಗ್ಗೆ ದೂರು ದಾಖಲಾದ ಕೂಡಲೇ ಬಿಗ್‌ಬಾಸ್ ಮನೆಯಿಂದಲೇ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ನಾಯಕ ನಟರು, ರಾಜಕಾರಣಿಗಳು, ಚಲನಚಿತ್ರ ನಿರ್ಮಾಪಕರು ಹುಲಿ ಉಗುರು ಧರಿಸಿರುವ ಫೋಟೋ ಮತ್ತು ವಿಡಿಯೋಗಳು ಎಲ್ಲೆಡೆ ವೈರಲ್ ಆಗಿದ್ದವು. ‘ನ್ಯಾಯ ಎಂದರೆ ಎಲ್ಲರಿಗೂ ಒಂದೇ’ ಇವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಎಲ್ಲೆಡೆಯಿಂದ ಕೂಗು ಕೇಳಿಬಂದಿತ್ತು.
ಈ ಬೆನ್ನಲ್ಲೆ, ಎಚ್ಚೆತ್ತ ಅರಣ್ಯ ಅಧಿಕಾರಿಗಳು ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್‌ಲೈನ್ ವೆಂಕಟೇಶ್, ವಿನಯ್ ಗುರೂಜಿ ಸೇರಿದಂತೆ ಹಲವರ ಮನೆಯ ಮೇಲೆ ದಾಳಿ ಮಾಡಿ ಅವರಿಂದ ಹುಲಿ ಉಗುರು ಇರುವ ಪೆಂಡೆಂಟ್ ವಶಪಡಿಸಿಕೊಂಡು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು.
ಇಷ್ಟೇ ಇಲ್ಲದೆ, ದಿನಕಳೆದಂತೆ ಕಾವೇರುತ್ತಿರುವ ಈ ಹುಲಿ ಉಗುರಿನ ಸುದ್ದಿ ಎಲ್ಲೆಡೆ ವ್ಯಾಪಿಸುತ್ತಿದೆ. ಹುಲಿ ಉಗುರು ಧರಿಸಿರುವವರ ಫೋಟೋಗಳು ಒಂದೊಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹೊರಬೀಳುತ್ತಿವೆ. ಈಗ ವನ್ಯಜೀವಿ ಕಾಯ್ದೆ ನಿಯಮ ಅರಿತಿರುವ ಅರಣ್ಯ ಅಧಿಕಾರಿಗಳು ಸಹ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಎಂಬ ದೂರು ಕೇಳಿಬಂದಿದೆ.
ಹೌದು, ಕಾನೂನು ಪಾಲಿಸಬೇಕಾದ ಅರಣ್ಯಾಧಿಕಾರಿಗಳಿಂದಲೇ ಕಾನೂನು ಉಲ್ಲಂಘನೆ ಆರೋಪ ಈಗ ಕೇಳಿಬಂದಿದ್ದು, ವಲಯ ಅರಣ್ಯಾಧಿಕಾರಿ ಮುನಿರಾಜ್ ಎಂಬುವವರು ಹುಲಿ ಉಗುರು ಧರಿಸಿರುವ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿಭೂತಿಪುರ ಕೆರೆಯ ಸುತ್ತ ಸಿಸಿಟಿವಿ ಮತ್ತು ಬ್ಯಾರಿಕೇಡ್ ಅಳವಡಿಸಲು ನಿವಾಸಿಗಳ ಒತ್ತಾಯ
ವನ್ಯಜೀವಿ ಸ್ವಯಂ ಸೇವಕ ಬಾಬು ಎಂಬವರು ಇಮೇಲ್ ಮುಖಾಂತರ ದೂರು ನೀಡಿದ್ದಾರೆ. ಈ ಕೂಡಲೇ ವಲಯ ಅರಣ್ಯಾಧಿಕಾರಿ ಮುನಿರಾಜ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇನ್ನು ಅರಣ್ಯ ಇಲಾಖೆಯ ಕಳಸ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಎಬುವವರ ವಿರುದ್ಧ ಕೂಡ ಹುಲಿ ಉಗುರು ಧರಿಸಿರುವ ಆರೋಪ ಕೇಳಿ ಬಂದಿದೆ.
ಹುಲಿ ಉಗುರಿನ ಲಾಕೆಟ್ ಹೊಂದಿರುವ ಆರೋಪದಲ್ಲಿ ಕಳಸ ಉಪ ವಲಯ ಅರಣ್ಯಾಧಿಕಾರಿ ದರ್ಶನ್‌ಕುಮಾರ್ ಎಂ. ವಿರುದ್ಧ ಅರಣ್ಯ ಇಲಾಖೆಗೆ ದೂರು ಸಲ್ಲಿಕೆಯಾಗಿದೆ.
ಅರೇನೂರಿನ ಸುಪ್ರಿತ್ ಮತ್ತು ಅಬ್ದುಲ್ ಖಾದರ್ ಎಂಬವರು ಆಲ್ದೂರು ವಲಯ ಅರಣ್ಯಾಧಿಕಾರಿಗೆ ಗುರುವಾರ ದೂರು ನೀಡಿದ್ದಾರೆ.
“ದರ್ಶನ್‌ಕುಮಾರ್ ಅವರು ತಮ್ಮ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹುಲಿ ಉಗುರು ಒಳಗೊಂಡ ಚಿನ್ನದ ಸರ ಧರಿಸಿರುವ ಚಿತ್ರವನ್ನು ಅಪ್‌ಲೋಡ್ ಮಾಡಿದ್ದರು. ಹುಲಿ ಉಗುರು ಸುದ್ದಿ ಎಲ್ಲೆಡೆ ಹಬ್ಬಿ, ಎಲ್ಲರ ವಿರುದ್ಧ ದೂರು ದಾಖಲಾಗುತ್ತಿರುವುದರಿಂದ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಿಂದ ತೆಗೆದಿದ್ದಾರೆ. ಸೈಬರ್ ಅಪರಾಧ ಪೊಲೀಸರ ಮೂಲಕ ಚಿತ್ರವನ್ನು ಮತ್ತೆ ಪಡೆದು ದರ್ಶನ್‌ಕುಮಾರ್ ವಿರುದ್ಧ ಪ್ರಕರಣ ದಾಖಲಿಸಬೇಕು” ಎಂದು ಸುಪ್ರಿತ್ ಮತ್ತು ಅಬ್ದುಲ್ ಖಾದರ್ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.