ರಾಜ್ಯದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ (ಕೆಎಸ್‌ಡಿಬಿ) ನಿರ್ಮಿಸಿರುವ 36,789 ಮನೆಗಳನ್ನು ಬಡ ಕುಟುಂಬಗಳಿಗೆ ಹಂಚಿಕೆ ಮಾಡಲಾಗುತ್ತಿದೆ. ಪ್ರತಿ ಮನೆಗೆ ₹4.50 ಲಕ್ಷ ನಿಗದಿಯಾಗಿದ್ದು, ಅಷ್ಟು ಮೊತ್ತವನ್ನು ಫಲಾನುಭವಿಗಳು ಪಾವತಿಸಲು ಸಾಧ್ಯವಿಲ್ಲದ ಕಾರಣ, ಫಲಾನುಭವಿಗಳು ಕೇವಲ ₹1 ಲಕ್ಷ ಪಾವತಿಸಿದರೆ ಸಾಕು. ಉಳಿದ ಹಣವನ್ನು ಸರ್ಕಾರವೇ ಪಾವತಿಸುತ್ತದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
ಮನೆಗಳ ಹಂಚಿಕೆಯ ಚಾಲನಾ ಕಾರ್ಯಕ್ರಮ ಶನಿವಾರ ನಡೆದಿದೆ. ಬಡ ಕುಟುಂಬಗಳ ಆರ್ಥಿಕ ಸಂಕಷ್ಟವನ್ನು ಅರಿತು, ಫಲಾನುಭವಿಗಳ ಪಾಲಿನ ವಂತಿಗೆ ಮೊತ್ತ ₹6,170 ಕೋಟಿಯನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಲು ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕಚೇರಿ ವಿವರಿಸಿದೆ.
1,80,253 ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಮೊದಲನೇ ಕಂತು ₹500 ಕೋಟಿ ಬಿಡುಗಡೆ ಆಗಿದ್ದು, ಮೊದಲ ಹಂತದಲ್ಲಿ 36,789 ಮನೆಗಳನ್ನು ಈಗ ಹಂಚಿಕೆ ಮಾಡಲಾಗುತ್ತಿದೆ. ಕೆ.ಆರ್.ಪುರದ ನಗರೇಶ್ವರ ನಾಗೇನಹಳ್ಳಿಯಲ್ಲಿ 1,047 ಮನೆ ನಿರ್ಮಿಸಿದ್ದು, ಆ ಪೈಕಿ, ಶನಿವಾರ 480 ಮನೆ ಹಂಚಿಕೆ ಮಾಡಲಾಗಿದೆ. ಇದೇ ರೀತಿ ರಾಜ್ಯದಾದ್ಯಂತ ನಿರ್ಮಿಸಿರುವ ಮನೆಗಳನ್ನು ಏಕಕಾಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಂಚಿಕೆ ಮಾಡಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
“ಯೋಜನೆಯಡಿಯಲ್ಲಿ ಫಲಾನುಭವಿಗಳು ತಲಾ ₹4.50 ಲಕ್ಷ ಪಾವತಿಸಬೇಕಿತ್ತಾದರೂ ಇದೀಗ ₹1 ಲಕ್ಷ ಪಾವತಿಸಿದರೆ ಉಳಿದ ಮೊತ್ತ ಸರ್ಕಾರವೇ ಭರಿಸುತ್ತಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಮನೆಗೆ ₹7.50 ಲಕ್ಷ ವೆಚ್ಚವಾಗಲಿದ್ದು, ₹3 ಲಕ್ಷ ಸಬ್ಸಿಡಿ ಹೊರತು ಪಡಿಸಿದರೆ ಉಳಿದ ಮೊತ್ತ ಫಲಾನುಭವಿ ಕೊಡಬೇಕಿತ್ತು. ಬ್ಯಾಂಕ್ ಸಾಲವೂ ದೊರೆಯದೆ ಅಷ್ಟು ಕುಟುಂಬಗಳು ಸಂಕಷ್ಟ ಎದುರಿಸುತ್ತಿದ್ದವು. ಇದೀಗ ಸರ್ಕಾರದ ತೀರ್ಮಾನದಿಂದ 1,80,253 ಕುಟುಂಬಗಳಿಗೆ ನೆಮ್ಮದಿ ಸಿಕ್ಕಂತಾಗಿದೆ” ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ಕೊಳವೆಬಾವಿಯಿಂದ ನೀರು ಪೂರೈಸುವ ಟ್ಯಾಂಕರ್‌ಗಳು ಸರ್ಕಾರದ ಸುಪರ್ದಿಗೆ: ಡಿಸಿಎಂ ಶಿವಕುಮಾರ್
ಸಂಕಷ್ಟದಲ್ಲಿದ್ದ ಬಡ ಕುಟುಂಬಗಳಿಗೆ ಸೂರು ಕಲ್ಪಿಸುವ ತೀರ್ಮಾನ ನಮ್ಮ ಅವಧಿಯಲ್ಲಿ ಕೈಗೊಂಡಿದ್ದು ಸಂತೋಷ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ನಮ್ಮ ಕಾಂಗ್ರೆಸ್ ಸರ್ಕಾರದ ಬಡವರ ಪರ ಕಾಳಜಿ, ಹಣಕಾಸು ಇಲಾಖೆ ಅಧಿಕಾರಿಗಳ ಸಹಕಾರದಿಂದ ಬಡವರು ಶಾಶ್ವತ ಸೂರು ಪಡೆದಂತಾಗಿದೆ. ಆ ಮೂಲಕ ಮುಖ್ಯಮಂತ್ರಿಗಳ ಕನಸು ಮತ್ತು ಕಾಳಜಿ ಸಾಕಾರಗೊಳ್ಳುತ್ತಿದೆ ಎಂದು ತಿಳಿಸಿದೆ.