ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುತ್ತಿದ್ದ ಪ್ರತ್ಯೇಕ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕೈಬಿಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿರ್ಧರಿಸಿದೆ. ಅದರಂತೆ, ಎಲ್ಲ ಕೋರ್ಸ್‌ಗಳಿಗೂ ಒಮ್ಮೆಗೇ ಸೀಟು ಹಂಚಿಕೆ ಮಾಡುವುದಾಗಿ ತಿಳಿಸಿದೆ.
ಸೀಟು ಹಂಚಿಕೆ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ, “ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅನಗತ್ಯ ವಿಳಂಬವನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
“ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಪಶುವೈದ್ಯ, ಕೃಷಿ, ನರ್ಸಿಂಗ್, ಅರ್ಕಿಟೆಕ್ಟ್ ಹಾಗೂ ಫಾರ್ಮಸಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಯೋಜಿತ ಸೀಟು ಹಂಚಿಕೆ (Combined Seat Allotment) ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಹೀಗೆ ಮಾಡುತ್ತಿರುವುದು ಇದೇ ಮೊದಲು” ಎಂದು ಅವರು ವಿವರಿಸಿದ್ದಾರೆ.
“ಪ್ರತ್ಯೇಕ ಸೀಟು ಹಂಚಿಕೆ ಪ್ರಕ್ರಿಯೆಯಿಂದಾಗಿ ಸಾಕಷ್ಟು ಅನಾನುಕೂಲಗಳು ಇದ್ದವು. ಒಬ್ಬ ಅಭ್ಯರ್ಥಿ ಒಮ್ಮೆಗೇ ಒಂದಕ್ಕಿಂತ ಹೆಚ್ಚು ಕೋರ್ಸ್‌ಗಳಲ್ಲಿ ಸೀಟು ಪಡೆದು, ನಂತರ ಆತ ಯಾವುದಾದರು ಒಂದಕ್ಕೆ ಪ್ರವೇಶ ಪಡೆಯುವವರೆಗೂ ಉಳಿದ ಕೋರ್ಸ್‌ಗಳಲ್ಲಿನ ಸೀಟು ಬೇರೆಯ ಅಭ್ಯರ್ಥಿಗಳಿಗೆ ಲಭ್ಯವಾಗುತ್ತಿರಲಿಲ್ಲ. ಇದರಿಂದ ಪ್ರತಿಭಾವಂತರಿಗೆ ಆಯ್ಕೆ ಸುತ್ತಿನಲ್ಲಿ ಸೀಟು ಕೈತಪ್ಪುತ್ತಿತ್ತು” ಎಂದು ಅವರು ಹೇಳಿದ್ದಾರೆ.
ಅಭ್ಯರ್ಥಿಗಳು ಯಾವುದೇ ಕೋರ್ಸ್‌ಗಳಿಗೆ ಪ್ರವೇಶ ಬಯಸಿದ್ದಲ್ಲಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಶುಲ್ಕ ಮತ್ತು ಲಭ್ಯವಿರುವ ಸೀಟುಗಳನ್ನು ಪರಿಶೀಲಿಸಿ, ನಂತರ ತಮ್ಮ ಆದ್ಯತೆಯನುಸಾರ ಸೀಟುಗಳ ಆಪ್ಷನ್ ಎಂಟ್ರಿ ಮಾಡಬೇಕು” ಎಂದು ಅವರು ಸಲಹೆ ನೀಡಿದ್ದಾರೆ.
ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ?
“ಅಭ್ಯರ್ಥಿಯು ಆಪ್ಷನ್ ಎಂಟ್ರಿ ಮಾಡುವಾಗ ತನ್ನ ಮೊದಲ ಆದ್ಯತೆಯ ಕೋರ್ಸ್‌ಗಳನ್ನು ಮೊದಲು ದಾಖಲಿಸಬೇಕು. ಒಂದು ವೇಳೆ ಮೊದಲ ಆದ್ಯತೆಯ ಕೋರ್ಸ್ ಸಿಗದಿದ್ದರೆ ಅದರ ನಂತರದ ಆಯ್ಕೆಯ ಕೋರ್ಸ್ ಯಾವುದು ಎನ್ನುವುದನ್ನು ಎರಡನೇ ಆದ್ಯತೆಯಾಗಿ ದಾಖಲಿಸಬೇಕು. ಇದೇ ರೀತಿ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಎಷ್ಟು ಕೋರ್ಸ್‌ಗಳು ಇವೆಯೊ ಅಷ್ಟೂ ಕೋರ್ಸ್‌ಗಳಿಗೆ ಆದ್ಯತೆಯನುಸಾರ ಆಪ್ಷನ್ ಎಂಟ್ರಿ ಮಾಡುವುದರ ಮೂಲಕ ಸೀಟು ಪಡೆಯಬಹುದು” ಎಂದು ರಮ್ಯಾ ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಈದಿನ ವಿಶೇಷ | ಕೃಷಿ ವಿವಿಗಳಲ್ಲಿ ಡಿಪ್ಲೊಮಾ ಕೋರ್ಸ್ ಸ್ಥಗಿತ, ಕೃಷಿಕರ ಮಕ್ಕಳ ಭವಿಷ್ಯಕ್ಕೆ ಬರೆ ಎಳೆದ ಸರ್ಕಾರ!
“ಅಭ್ಯರ್ಥಿಯ ಮೆರಿಟ್, ಮೀಸಲಾತಿ ಹಾಗೂ ಆಪ್ಷನ್ ಎಂಟ್ರಿ ಆಧಾರದ ಮೇಲೆ ಮೊದಲ ಸುತ್ತಿನ ಸೀಟು ಹಂಚಿಕೆ ನಡೆಯುತ್ತದೆ. ಕೆಲ ಅಭ್ಯರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಎರಡೂ ಕೋರ್ಸ್‌ಗಳಲ್ಲಿ ಸೀಟು ದೊರೆಯುವ ಸಾಧ್ಯತೆ ಇರುತ್ತದೆ. ಅಂತಹವರು ಚಾಯ್ಸ್ ಎಂಟ್ರಿ ಸ್ಕ್ರೀನ್‌ನಲ್ಲಿ ಇವೆರಡರಲ್ಲಿ (ವೈದ್ಯಕೀಯ ಅಥವಾ ಎಂಜಿನಿಯರಿಂಗ್) ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆಗ ಉಳಿದ ಮತ್ತೊಂದು ಸೀಟು ಖಾಲಿ ಇದೆ ಎಂದು ಭಾವಿಸಿ, ಅದನ್ನು ಮುಂದಿನ ಸುತ್ತಿನ ಹಂಚಿಕೆಗೂ ಬಳಸಿಕೊಳ್ಳಲಾಗುತ್ತದೆ.” ಎಂದು ಅವರು ಹೇಳಿದ್ದಾರೆ.