‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯ ನನಸಾಗಬೇಕಾದರೆ, ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಶಾಲೆಗಳು ಉಸಿರಾಡಬೇಕು. ಸರ್ಕಾರಿ ಮತ್ತು ಅನುದಾನಿತ ಕನ್ನಡ ಶಾಲೆಗಳ ಸಬಲೀಕರಣಕ್ಕೆ ‘ಕನ್ನಡ ಮಾಧ್ಯಮ ಶಾಲೆಗಳ ಸಬಲೀಕರಣ ಪ್ರಾಧಿಕಾರ’ ರಚನೆಯಾಗಬೇಕು ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಒತ್ತಾಯಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ, “ಶಾಲಾ ಹಂತದಲ್ಲಾದರೂ ಕನ್ನಡ ಶಿಕ್ಷಣದ ಮಾಧ್ಯಮವಾಗಬೇಕು. ಕನ್ನಡ ನನ್ನ ಉಸಿರು ಎನ್ನುತ್ತಲೇ, ಕನ್ನಡ ಶಾಲೆಯ ಪಕ್ಕದಲ್ಲಿಯೇ, ಆಂಗ್ಲಮಾಧ್ಯಮ ಶಾಲೆಗಳಿಗೆ ಸರ್ಕಾರ ಅನುಮತಿ ನೀಡುತ್ತಿದೆ. ರಾಜಕಾರಣಿಗಳ ನಿರಂತರ ಆತ್ಮವಂಚನೆಯ ಕೆಲಸ ನಿಲ್ಲಬೇಕು” ಎಂದು ಹೇಳಿದ್ದಾರೆ.
“ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ಇದು ಸ್ವಾಗತಾರ್ಹ. ಜೂನ್ 21ರಂದು ವೇದಿಕೆ ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ವಿವರವಾದ ಮನವಿ ಸಲ್ಲಿಸಿತ್ತು. ಮನವಿಯ ಉಳಿದ ಹಕ್ಕೊತ್ತಾಯಗಳನ್ನು ಸಹ ಈಡೇರಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೂರು ದಿನಗಳ ಬಳಿಕ ಬಲೆಗೆ ಬಿದ್ದ ಚಿರತೆ ಸಾವು
“ರಾಜ್ಯವನ್ನು ಮೈಸೂರಿನ ಬದಲಾಗಿ ಕರ್ನಾಟಕವೆಂದು ನಾಮಕರಣ ಮಾಡಿದ 50 ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲಾಗುತ್ತಿದೆ. ಕನ್ನಡವನ್ನು ಉಳಿಸಿ ಬೆಳೆಸಿ ಉಸಿರಾಗಿಸುವ ಮೂಲಕ ಕರ್ನಾಟಕ – ಕನ್ನಡ – ಕನ್ನಡಿಗರ ಬದುಕು ಬೆಳಗಬೇಕಿದೆ” ಎಂದಿದ್ದಾರೆ.
“ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಕಳೆದ 50 ವರ್ಷದ ಸಾಧನೆಗಳನ್ನು ಒರೆಗಲ್ಲಿಗೆ ಹಚ್ಚುವ ರಚನಾತ್ಮಕ ವಿಮರ್ಶೆ ಮತ್ತೆ ಮುಂದಿನ 50 ವರ್ಷಗಳ ಅಭಿವೃದ್ಧಿ ದಾರಿಯ ನೀಲಿ ನಕಾಶೆ ಕುರಿತು ಚರ್ಚಿಸಲು ವಿಶೇಷ ವಿಧಾನಸಭಾ ಅಧಿವೇಶನ ಕರೆಯಬೇಕು” ಎಂದು ವೇದಿಕೆ ಒತ್ತಾಯಿಸಿದೆ.