ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬಜೆಟ್ ಮಂಡಿಸಿದ್ದು, ಈ ವೇಳೆ ನಕ್ಸಲ್ ನಿಗ್ರಹ ಪಡೆ ವಿಸರ್ಜನೆ ಮಾಡಲಾಗುವುದು ಎಂದು ಹೇಳಿದ್ದಾರೆ. ಹಾಗೆಯೇ ನಕ್ಸಲರ ಪುನರ್ವಸತಿಗೆ 10 ಕೋಟಿ ರೂಪಾಯಿ ಘೋಷಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಪೊಲೀಸ್ ವಿಭಾಗಗಳ ಸಂಖ್ಯೆಯನ್ನು ಎಂಟರಿಂದ 11ಕ್ಕೆ ಹೆಚ್ಚಿಸಲಾಗುವುದು. ಪರಿಣಾಮಕಾರಿಯಾಗಿ ಪೊಲೀಸ್ ವ್ಯವಸ್ಥೆ ಕಲ್ಪಿಸಲು ವಿಭಾಗಗಳ ಸಂಖ್ಯೆಯನ್ನು ಅಧಿಕಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನಕ್ಸಲ್ ಹೋರಾಟ ತ್ಯಜಿಸಿ ಮುಖ್ಯವಾಹಿನಿಗೆ ಬಂದ ರವೀಂದ್ರ ಕೋಟೆಹೊಂಡ
“ನಮ್ಮ ಅಧಿಕಾರವಧಿಯಲ್ಲಿ ಸುಮಾರು ಆರು ನಕ್ಸಲರು ಶರಣಾಗತಿಯಾಗಿದ್ದಾರೆ. ಈಗ ಕರ್ನಾಟಕವು ನಕ್ಸಲ್ ಮುಕ್ತವಾಗಿದೆ. ಆದ್ದರಿಂದ ನಕ್ಸಲ್ ನಿಗ್ರಹ ಪಡೆ ವಿಸರ್ಜನೆ ಮಾಡಲಾಗುತ್ತದೆ” ಎಂದರು.
“ಶರಣಾದ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲಾಗುವುದು ಮತ್ತು ನಕ್ಸಲ್ ಪೀಡಿತ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಅದಕ್ಕಾಗಿ 10 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಮೀಸಲಿಡಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ 33 ವಿಶೇಷ ಪೊಲೀಸ್ ಠಾಣೆಗಳ ಸ್ಥಾಪನೆ ಬಗ್ಗೆಯೂ ಸಿಎಂ ಘೋಷಿಸಿದ್ದಾರೆ. ಪರಿಶಿಷ್ಟ ಪಂಗಡ/ ಪರಿಶಿಷ್ಟ ಜಾತಿಯ ಜನರ ಮೇಲೆ ಆಗುವ ದೌರ್ಜನ್ಯವನ್ನು ತಡೆಗಟ್ಟಲು 33 ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಎಂದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ಸಮಾಜದ ಮುಖ್ಯವಾಹಿನಿಗೆ ಬರಲು ಸಂಘಟನೆ ಮುಖ್ಯ: ಸಚಿವ ಮಧು ಬಂಗಾರಪ್ಪ
ಇನ್ನು ಪೊಲೀಸ್ ತನಿಖೆಗೆ ಅಗತ್ಯವಿರುವ ವಿಧಿವಿಜ್ಞಾನ ಪರೀಕ್ಷೆಯ ವರದಿಯನ್ನು ನೀಡಬೇಕಾದ ಗಡುವನ್ನು ಮೂರು ವರ್ಷದಿಂದ ಆರು ತಿಂಗಳಿಗೆ ಇಳಿಸಲಾಗಿದೆ. ಸೈಬರ್ ಕ್ರೈಮ್ ವಿಭಾಗವನ್ನು ಬಲಪಡಿಸಲು 5 ಕೋಟಿ ರೂಪಾಯಿ ಘೋಷಿಸಲಾಗಿದೆ. ಬಳ್ಳಾರಿ, ದಾವಣಗೆರೆ, ಮೈಸೂರು ಮತ್ತು ಬೆಂಗಳೂರು ಕೇಂದ್ರ ವಲಯಗಳಲ್ಲಿ ಈ ವರ್ಷವೇ ನಾಲ್ಕು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳಗಳನ್ನು ಸ್ಥಾಪಿಸಲಾಗುವುದು.
ಹಾಗೆಯೇ ಸಮಾಜದ ಸಾಮರಸ್ಯ ಕದಡುವ ಕೃತ್ಯ ಎಸಗಿದವರ ವಿರುದ್ಧ ಯಾವುದೇ ಸಹಿಷ್ಣುತೆ ಇರಲಾರದು. ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಪೊಲೀಸ್ ಸಿಬ್ಬಂದಿಗೆ ವಾರ್ಷಿಕ ವೈಯಕ್ತಿಕ ಆರೋಗ್ಯ ತಪಾಸಣೆಗಾಗಿ ನೀಡಲಾಗುತ್ತಿರುವ ಮೊತ್ತವನ್ನು ಒಂದು ಸಾವಿರ ರೂಪಾಯಿಯಿಂದ 1,500 ರೂಪಾಯಿಗೆ ಹೆಚ್ಚಿಸಲಾಗುವುದು. ಇನ್ನು ಕರ್ತವ್ಯದಲ್ಲಿರುವ ಪೊಲೀಸರು ಮತ್ತು ಸಿಬ್ಬಂದಿಗಳಿಗೆ ನೀಡಲಾಗುವ ಆಹಾರ ಭತ್ಯೆಯನ್ನು 200 ರೂಪಾಯಿಯಿಂದ 300 ರೂಪಾಯಿಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
