- ಉಜಿರೆಯ ಭಾಸ್ಕರ್ ನಾಯ್ಕ ಎಂಬವರ ಮೇಲೆ ಹಲ್ಲೆ ಪ್ರಕರಣ
- ಈದಿನ.ಕಾಮ್‌ಗೆ ದಕ್ಷಿಣ ಕನ್ನಡ ಎಸ್‌ಪಿ ಪ್ರತಿಕ್ರಿಯೆ
ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸಂಗಡಿಗರನ್ನು ಬಂಧಿಸುವಂತೆ ಹೈಕೋರ್ಟ್ ಆದೇಶಿಸಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ‘ಆ ರೀತಿಯ ಯಾವುದೇ ಆದೇಶ ನಮಗೆ ಬಂದಿಲ್ಲ. ಹೈಕೋರ್ಟ್ ಆದೇಶ ನೀಡಿದೆ ಎಂಬುದು ಗಾಳಿ ಸುದ್ದಿ’ ಎಂದು ಹೇಳಿದ್ದಾರೆ.
ಉಜಿರೆ ಗ್ರಾಮದ ಬಡೆಕೊಟ್ಟು ನಿವಾಸಿ ಭಾಸ್ಕರ ನಾಯ್ಕ ಎಂಬುವವರ ಮೇಲೆ ಕಳೆದ ಸೆಪ್ಟೆಂಬರ್ 3ರಂದು ಸಂಜೆ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ತಂಡದವರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿತ್ತು.

ವಾಟ್ಸಪ್‌ನಲ್ಲಿ ಹರಿದಾಡಿದ ಸುದ್ದಿಯ ಸ್ಕ್ರೀನ್ ಶಾಟ್
ಈ ಪ್ರಕರಣವನ್ನೇ ದಾಳವಾಗಿಸಿಕೊಂಡಿರುವ ಕೆಲವರು, ‘ಅಟ್ರಾಸಿಟಿ ಪ್ರಕರಣ ದಾಖಲಾಗಿ ಒಂಭತ್ತು ದಿನ ಕಳೆದರೂ ಈವರೆಗೆ ಆರೋಪಿಗಳನ್ನು ಪೊಲೀಸರು ಬಂಧಿಸದೆ ಸುಮ್ಮನಿದ್ದಾರೆ ಎಂದು ದೂರಿ, ಭಾಸ್ಕರ್ ನಾಯ್ಕ್ ಸೋಮವಾರ ಹೈಕೋರ್ಟ್ ಮೊರೆ ಹೋಗಿದ್ದರು. ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ ಮತ್ತು ಮೂರು ದಿನದ ಒಳಗೆ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಆದೇಶಿಸಿದೆ’ ಎಂಬ ವದಂತಿಯನ್ನು ಹರಿಯಬಿಟ್ಟಿದ್ದಾರೆ. ಕೆಲವು ಮಾಧ್ಯಮಗಳೂ ಕೂಡ ಇದನ್ನು ವರದಿ ಮಾಡಿವೆ.
ಪ್ರಕರಣ ಮತ್ತು ವದಂತಿ ಸಂಬಂಧ ಈ ದಿನ.ಕಾಮ್ ಜೊತೆ ಮಾತನಾಡಿದ ದಕ್ಷಿಣ ಕನ್ನಡ ಎಸ್‌ಪಿ ರಿಷ್ಯಂತ್ ಸಿ.ಬಿ, “ಮಹೇಶ್ ತಿಮರೋಡಿ ಬಂಧನಕ್ಕೆ ಹೈಕೋರ್ಟ್‌ನಿಂದ ನಮಗೆ ಯಾವುದೇ ಆದೇಶ ಬಂದಿಲ್ಲ. ಸುದ್ದಿ ಮಾಡಿರುವ ಮಾಧ್ಯಮಗಳಲ್ಲಿ ಯಾರಿಗಾದರೂ ಆದೇಶ ಪ್ರತಿ ದೊರೆತಿದ್ದರೆ, ನಮಗೆ ಕಳಿಸಿಕೊಡಲಿ” ಎಂದು ಹೇಳಿದ್ದು, ವದಂತಿಯನ್ನು ತಳ್ಳಿ ಹಾಕಿದ್ದಾರೆ.

ಹಲ್ಲೆಗೊಳಗಾಗಿರುವ ಭಾಸ್ಕರ ನಾಯ್ಕ್
ಪ್ರಕರಣವೇನು?
ಮಹೇಶ್ ಶೆಟ್ಟಿ ತಿಮರೋಡಿಯ ಮಾಜಿ ಆಪ್ತರಾಗಿರುವ ಭಾಸ್ಕರ ನಾಯ್ಕ್ ಸೆ. 3 ರಂದು ಸಂಜೆ ಮಂಗಳೂರಿನಲ್ಲಿ ಯೂಟ್ಯೂಬ್ ಚಾನಲ್‌ವೊಂದಕ್ಕೆ ಸಂದರ್ಶನ ನೀಡಿ ವಾಪಸ್ ಬರುವಾಗ ಮಹೇಶ್ ಶೆಟ್ಟಿ ತಿಮರೋಡಿ, ಮೋಹನ್ ಶೆಟ್ಟಿ, ಮುಖೇಶ್ ಶೆಟ್ಟಿ, ನಿತಿನ್, ಪ್ರಜ್ವಲ್ ಕೆವಿ ಗೌಡ, ಪ್ರಮೋದ್ ಶೆಟ್ಟಿ ಮತ್ತಿತರರು ಕಾರು ಅಡ್ಡ ಹಾಕಿ, ಹಲ್ಲೆ ಮಾಡಿದ್ದರು ಎಂದು ಆರೋಪಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಭಾಸ್ಕರ್ ನಾಯ್ಕ ದೂರು ನೀಡಿದ್ದರು.