ದೇಶದಲ್ಲಿ ಇದೇ ಮೊದಲ ಬಾರಿಗೆ, ಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್‌ಚೇಂಜ್ ಮ್ಯಾನಿಪ್ಯುಲೇಟರ್ಸ್ ಆಕ್ಟ್ (ಎಸ್‌ಎಎಫ್‌ಇಎಂಎ) ಮತ್ತು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ 38 ವರ್ಷದ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಒಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಪ್ರಕರಣವನ್ನು ಭೇದಿಸಿದ್ದು, ರಾಷ್ಟ್ರದಲ್ಲೇ ಪ್ರಪ್ರಥಮ ಬಾರಿಗೆ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ವಿದೇಶಿ ಡ್ರಗ್ ಪೆಡ್ಲರ್ ಅಕ್ರಮವಾಗಿ ಗಳಿಸಿದ್ದ ₹12 ಲಕ್ಷ ನಗದನ್ನು ಜಪ್ತಿ ಮಾಡಿದೆ.
ಪೆಡ್ಲರ್, ಪೀಟರ್ ಇಕೆಡಿ ಬೆಲನ್ವು ಬಂಧಿತ ವ್ಯಕ್ತಿ. ಈತ ಮೂಲತಃ ನೈಜೀರಿಯಾದ ಪ್ರಜೆ. ಈತನನ್ನು ನವೆಂಬರ್ 2023ರಲ್ಲಿ ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದರು.
ಇಕೆಡಿ ವಿದೇಶಿ ಡ್ರಗ್ ಪೆಡ್ಲರ್ ಆಗಿದ್ದನು. ಡ್ರಗ್ ಸರಬರಾಜು ಮಾಡುತ್ತಿದ್ದನು. ಆರೋಪಿ 2013ರಲ್ಲಿ ಭಾರತಕ್ಕೆ ವೈದ್ಯಕೀಯ ವೀಸಾ ಅಡಿಯಲ್ಲಿ ಬಂದಿದ್ದಾನೆ. ಇಲ್ಲಿಯೇ ನೆಲೆಸಿ ಮಣಿಪುರದ ಯುವತಿಯೊಬ್ಬರನ್ನು ಮದುವೆಯಾಗಿದ್ದಾನೆ.
ತನ್ನ ಹೆಂಡತಿಯ ಹೆಸರಿನಲ್ಲಿ ಬೆಂಗಳೂರಿನಲ್ಲಿ ಎರಡು ಬ್ಯಾಂಕ್ ಖಾತೆ ಹಾಗೂ ನಕಲಿ ದಾಖಲಾತಿಗಳನ್ನು ನೀಡಿ ಇತರರ ಹೆಸರಿನಲ್ಲಿ ಐದು ಬ್ಯಾಂಕ್ ಖಾತೆಗಳು ಸೇರಿದಂತೆ ಒಟ್ಟು ಏಳು ಬ್ಯಾಂಕ್ ಖಾತೆಗಳನ್ನು ಮಾಡಿಸಿದ್ದಾರೆ. ಈ ಖಾತೆಗಳಿಂದ ಗೂಗಲ್ ಪೇ ಮತ್ತು ಫೋನ್ ಪೇ ಮೂಲಕ ಡ್ರಗ್ ಪೆಡ್ಲಿಂಗ್ ಹಣದ ವಹಿವಾಟನ್ನು ನಿರ್ವಹಿಸುತ್ತಿದ್ದ ಅಂಶಗಳು ತನಿಖೆಯಿಂದ ತಿಳಿದು ಬಂದಿದೆ.
2023ರ ನವೆಂಬರ್‌ನಲ್ಲಿ ಬಂಧಿಸಿದಾಗ ಈತನ ಬಳಿ ನಗದು ಮತ್ತು ನಾಣಾ ಬ್ಯಾಂಕ್‌ಗಳ ಪಾಸ್‌ಬುಕ್, ಡೆಬಿಟ್ ಕಾರ್ಡ್‌ಗಳು ಇರುವ ಬಗ್ಗೆ ಮಾಹಿತಿಯನ್ನು ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಸಂಗ್ರಹಿಸಿದ್ದರು. ಈತನ ಪತ್ನಿಯ ಎರಡು ಬ್ಯಾಂಕ್ ಖಾತೆಗಳಿಂದ ₹2,55,050 ಹಣ ಹಾಗೂ ಇತರೆ ಹೆಸರುಗಳಲ್ಲಿದ್ದ 5 ಬ್ಯಾಂಕ್ ಖಾತೆಗಳಲ್ಲಿದ್ದ 4,90,232 ರೂಪಾಯಿ ಸೇರಿ ಒಟ್ಟು ₹12,60,232 ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನಂತರ ಚೆನ್ನೈನ ಎನ್.ಡಿ.ಪಿ.ಎಸ್ ಅಧಿಕಾರಿಗಳು ಈ ಮುಟ್ಟುಗೋಲು ಆದೇಶವನ್ನು ಅನುಮೋದಿಸಿದ್ದಾರೆ.
ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ, ಉಪ ಪೊಲೀಸ್ ಆಯುಕ್ತ ಆರ್. ಶ್ರೀನಿವಾಸಗೌಡ ಇವರ ಮಾರ್ಗದರ್ಶನದಲ್ಲಿ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸ್ ಇನ್ಸ್ ಪೆಕ್ಟರ್ ಮೊಹಮ್ಮದ್ ಮುಖಾರಮ್ ಮತ್ತು ಸಿಬ್ಬಂದಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 2023ರಲ್ಲಿ ಕೆಐಎ ವಿಮಾನ ನಿಲ್ದಾಣದಿಂದ 37.2 ಮಿಲಿಯನ್ ಪ್ರಯಾಣಿಕರ ಪ್ರಯಾಣ
ಏಳು ಮಂದಿ ಡ್ರಗ್ ಪೆಡ್ಲರ್ ಬಂಧನ
ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಏಳು ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ್ದು, ಬಂಧಿತರಿಂದ ಒಟ್ಟು ₹1.66 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಸಿಸಿಬಿ ಪೊಲೀಸರು ಒಂದು ವಾರದಿಂದ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ 18.5 ಕೆಜಿ ಗಾಂಜಾ, 203 ಗ್ರಾಂ ಎಂಡಿಎಂಎ, 410 ಎಕ್ಸ್ ಟಸಿ ಪಿಲ್ಸ್, 7 ಮೊಬೈಲ್, 2 ದ್ವಿಚಕ್ರ ವಾಹನ, 1 ಕಾರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.
ಗಿರಿನಗರ, ಮಡಿವಾಳ, ಚಿಕ್ಕಜಾಲ, ಆರ್.ಟಿ.ನಗರ ಬೈಯಪ್ಪನಹಳ್ಳಿ ವ್ಯಾಪ್ತಿಯಲ್ಲಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಬಂಧಿತರ ವಿರುದ್ಧ ಒಟ್ಟು ಐದು ಪ್ರಕರಣ ದಾಖಲಿಸಿಕೊಂಡಿದ್ದಾರೆ.