ಬೆಂಗಳೂರಿನಲ್ಲಿ ನೀರು ನಿರ್ವಹಣೆ ಮತ್ತು ಪ್ರವಾಹ ತಗ್ಗಿಸುವ ಉಪಕ್ರಮಗಳಿಗೆ ವಿಶ್ವಬ್ಯಾಂಕ್ ₹3,000 ಕೋಟಿ ಸಾಲ ರೂಪದ ಅನುದಾನ ನೀಡಲು ವಿಶ್ವಬ್ಯಾಂಕ್ ಮುಂದೆಬಂದಿದೆ.
ಈ ಕುರಿತ ಪ್ರಸ್ತಾವಣೆಗೆ ಸುಮಾರು ಒಂದು ತಿಂಗಳ ಹಿಂದೆ ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ) ಗ್ರೀನ್ ಸಿಗ್ನಲ್‌ನೀಡಿದೆ. ಮುಂದಿನ ಹಂತಗಳ ಬಗ್ಗೆ ನಕ್ಷೆ ಮಾಡಲು ಬಿಬಿಎಂಪಿ ಇತ್ತೀಚೆಗೆ ವಿಶ್ವಬ್ಯಾಂಕ್ ಪ್ರತಿನಿಧಿಗಳೊಂದಿಗೆ ತನ್ನ ಮೊದಲ ಸಭೆ ನಡೆಸಿತ್ತು.
ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲುಎಸ್‌ಎಸ್‌ಬಿ) ಸಾಲದ ಮೊತ್ತವನ್ನು ಕ್ರಮವಾಗಿ ₹2,000 ಕೋಟಿ ಮತ್ತು ₹1,000 ಕೋಟಿ ಆಗಿ ಹಂಚಿಕೊಳ್ಳಲಿದೆ.
ವಿಶ್ವಬ್ಯಾಂಕ್‌ನಿಂದ ಪಡೆದ ಸಾಲದೊಂದಿಗೆ ಬಿಬಿಎಂಪಿಯೂ ವಿಶೇಷವಾಗಿ 173 ಕಿಲೋಮೀಟರ್ ಉದ್ದಕ್ಕೂ ತಡೆಗೋಡೆಗಳನ್ನು ನಿರ್ಮಿಸುವ ಮೂಲಕ ಬಾಹ್ಯ ಪ್ರದೇಶಗಳಲ್ಲಿ ಮಳೆನೀರಿನ ಚರಂಡಿಗಳನ್ನು ಬಲಪಡಿಸಲು ಯೋಜಿಸಿದೆ. ಜತೆಗೆ, ಕೋರಮಂಗಲ ವ್ಯಾಲಿ ವಾಟರ್ವೇಯನ್ನು ದಕ್ಷಿಣ ಪಿನಾಕಿನಿ ನದಿಯೊಂದಿಗೆ ಸಂಪರ್ಕಿಸುವ ನಿಟ್ಟಿನಲ್ಲಿ ಯೋಜನೆಯನ್ನು ವಿಸ್ತರಿಸಲಿದೆ.
ಜಲ ಮಂಡಳಿಯು ಹೊಸ ಒಳಚರಂಡಿ ನಿರ್ಮಾಣ ಮತ್ತು ಕೊಳಚೆನೀರಿನ ಸಂಸ್ಕರಣಾ ಘಟಕಗಳನ್ನು ರಚಿಸಲು ಹಣವನ್ನು ಬಳಸಿಕೊಳ್ಳಲಿದೆ.
ಬಿಡಬ್ಲೂಎಸ್‌ಎಸ್‌ಬಿ ಈ ಹಿಂದೆ ಹಲವು ಬಾರಿ ವಿಶ್ವಬ್ಯಾಂಕ್ ನಿಧಿಯನ್ನು ಬಳಸಿಕೊಂಡಿದ್ದರೂ, ಬಿಬಿಎಂಪಿಗೆ ಇದು ಮೊದಲ ಅನುಭವವಾಗಿದೆ. ಮಾಸಾಂತ್ಯದ ವೇಳೆಗೆ ವಿಶ್ವಬ್ಯಾಂಕ್‌ನೊಂದಿಗೆ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಹಂಚಿಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಏಜೆನ್ಸಿಗಳಿಗೆ ನಿಧಿಯ ಜೊತೆಗೆ, ವಿಶ್ವಬ್ಯಾಂಕ್ ಕೂಡ ಕರ್ನಾಟಕಕ್ಕೆ ಪ್ರವಾಹ ತಗ್ಗಿಸಲು ₹2,000 ಕೋಟಿ ನೀಡಲಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಕರ್ನಾಟಕ ಕಂದಾಯ ಇಲಾಖೆ ಜಾಗತಿಕ ಏಜೆನ್ಸಿಯೊಂದಿಗೆ ಸಂಪರ್ಕದಲ್ಲಿದೆ. ವಿಶ್ವಬ್ಯಾಂಕ್ ಜತೆ ಮಾತುಕತೆ ನಡೆಸುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿಗೆ ಹೆಸರಘಟ್ಟ ಕೆರೆ ನೀರು ಸರಬರಾಜು ನಿರ್ಧಾರ ಮರುಪರಿಶೀಲನೆ: ಜಲಮಂಡಳಿ ಅಧ್ಯಕ್ಷ
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಹಠಾತ್ ಪ್ರವಾಹ ಪುನರಾವರ್ತನೆಯಾಗುತ್ತಿದೆ. ಇದು ಜನರ ಜೀವ ಮತ್ತು ಆಸ್ತಿಗೆ ಅಪಾಯವನ್ನುಂಟುಮಾಡುತ್ತಿದೆ.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಸಂಶೋಧಕರಾದ ಪ್ರೊ.ಟಿ.ವಿ.ರಾಮಚಂದ್ರ, ವಿನಯ್ ಎಸ್, ಮತ್ತು ಭರತ್ ಎಚ್ ಐತಾಳ್ ಅವರ 2017 ರ ಅಧ್ಯಯನವು ಬೆಂಗಳೂರಿನ ಪ್ರವಾಹದ ಸಮಸ್ಯೆಗಳ ಹಿಂದೆ ಹಲವಾರು ಕಾರಣಗಳನ್ನು ಗುರುತಿಸಿದೆ. ಇವುಗಳಲ್ಲಿ ಕುಗ್ಗುತ್ತಿರುವ ಮಳೆನೀರಿನ ಚರಂಡಿಗಳು, ಕೆರೆಗಳ ನಾಶ, ಕಣಿವೆ ವಲಯಗಳಲ್ಲಿನ ಉಲ್ಲಂಘನೆಗಳು ಮತ್ತು ಕೆರೆಗಳ ಡಿನೋಟಿಫಿಕೇಶನ್ ಸೇರಿವೆ.