ಹಲವು ಬಾರಿ ಸಂಚಾರ ನಿಯಮ ಉಲ್ಲಂಘಿಸಿ, ಹೆಚ್ಚು ದಂಡಕ್ಕೆ ಗುರಿಯಾಗಿರುವ ವಾಹನಗಳನ್ನು ಬೆಂಗಳೂರು ಸಂಚಾರ ಪೊಲೀಸರು ಪಟ್ಟಿ ಮಾಡಿದ್ದಾರೆ. ಅವುಗಳಲ್ಲಿ 123 ವಾಹನಗಳು ತಲಾ 1 ಲಕ್ಷಕ್ಕೂ ಅಧಿಕ ಮೊತ್ತದ ಟ್ರಾಫಿಕ ದಂಡವನ್ನು ಬಾಕಿ ಉಳಿಸಿಕೊಂಡಿವೆ. 2,858 ವಾಹನಗಳು ಕಳೆದ ಐದು ವರ್ಷಗಳಲ್ಲಿ ನಿಯಮ ಉಲ್ಲಂಘನೆಗಾಗಿ ತಲಾ ₹50,000 ದಂಡಕ್ಕೆ ಗುರಿಯಾಗಿವೆ.
ಇನ್ನು, ₹2 ಲಕ್ಷಗಿಂತ ಹೆಚ್ಚಿನ ದಂಡ ಬಾಕಿ ಇರುವ ಮೂರು ವಾಹನಗಳೂ ಇವೆ. ದ್ವಿಚಕ್ರ ವಾಹನಕ್ಕೆ ಗರಿಷ್ಠ ದಂಡ ಬಿದ್ದಿದೆ. ಈ ವಾಹನ ಬರೋಬ್ಬರಿ 475 ಬಾರಿ ನಿಯಮ ಉಲ್ಲಂಘನೆ ಮಾಡಿದ್ದು, ₹2.91 ಲಕ್ಷ ದಂಡ ವಿಧಿಸಲಾಗಿದೆ.
ಒಟ್ಟು 3,71,416 ಪ್ರಕರಣಗಳಿಂದ ₹19,54,16,400 ದಂಡ ವಸೂಲಿ ಆಗುವುದು ಬಾಕಿ ಉಳಿದಿದೆ. 50,000ಕ್ಕಿಂತ ಹೆಚ್ಚು ದಂಡ ಪಾವತಿಸಬೇಕಿರುವ 2,858 ವಾಹನಗಳ ವಿರುದ್ಧ 3,61,294 ಪ್ರಕರಣಗಳಿವೆ. ಈ ವಾಹನಗಳ ಪೈಕಿ 2,742 ದ್ವಿಚಕ್ರ ವಾಹನಗಳಾಗಿವೆ. ಉಳಿದಂತೆ, ಕಾರುಗಳು, ವ್ಯಾನ್‌ಗಳು, ಶಾಲಾ ಬಸ್‌ಗಳು ಸೇರಿದಂತೆ 100 ವಾಹನಗಳ ವಿರುದ್ಧ 8,603 ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.
ಎಲ್ಲ ವಾಹನಗಳ ಪೈಕಿ ದ್ವಿಚಕ್ರ ವಾಹನಗಳ ಮೇಲೆ ಹೆಚ್ಚಿನ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಹೆಲ್ಮೆಟ್ ಧರಿಸದೇ ಇರುವುದು, ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದು ಹಾಗೂ ದೋಷಯುಕ್ತ ನಂಬರ್ ಪ್ಲೇಟ್‌ಗಳನ್ನು ಹಾಕಿರುವುದು ಕಂಡುಬಂದಿದೆ.
ಸವಾರರು ಮತ್ತು ಹಿಂಬದಿ ಸವಾರರು ಹೆಲ್ಮೆಟ್ ಧರಿಸದ ಕಾರಣಕ್ಕೆ ಒಟ್ಟು 3,12,727 ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದಿರುವುದು, ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು ಹಾಗೂ ಜೀಬ್ರಾ ಕ್ರಾಸಿಂಗ್‌ನಲ್ಲಿ ವಾಹನ ನಿಲ್ಲಿಸುವುದು ಪ್ರಮುಖ ಉಲ್ಲಂಘನೆಗಳಾಗಿವೆ.
ಟ್ರಾಫಿಕ್ ನಿರ್ವಹಣಾ ಕೇಂದ್ರವು 1,61,861 ಸಂಚಾರ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಬಾಣಸವಾಡಿ ಸಂಚಾರ ಪೊಲೀಸರು ಠಾಣೆಯ ಪೊಲೀಸರು ಅತಿ ಹೆಚ್ಚು ಅಂದರೆ, 13,439 ಪ್ರಕರಣ ದಾಖಲಿಸಿದ್ದಾರೆ. ಬನಶಂಕರಿ, ಪುಲಿಕೇಶಿನಗರ ಮತ್ತು ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆಗಳು ನಂತರದ ಸ್ಥಾನದಲ್ಲಿವೆ.
ನಿಯಮ ಉಲ್ಲಂಘಿಸುವವರಿಂದ ದಂಡ ವಸೂಲಿ ಮಾಡುವ ಪ್ರಕ್ರಿಯೆ ಆರಂಭಿಸಿದ್ದೇವೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್ ಅನುಚೇತ್ ತಿಳಿಸಿದ್ದಾರೆ.
“ನಿಯಮ ಉಲ್ಲಂಘಿಸಿದವರ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಹಣ ನೀಡುವಂತೆ ಕೇಳುತ್ತಿದ್ದಾರೆ. ಇದರ ನಂತರವೂ ಹಣ ಪಾವತಿ ಮಾಡಲು ವಿಫಲವಾದರೆ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗುವುದು. ಅಪರಾಧಿಗಳಿಗೆ ಸಮನ್ಸ್ ನೀಡಲಾಗುತ್ತದೆ. ನಿಯಮ ಉಲ್ಲಂಘಿಸುವವರಿಗೆ ಯಾವುದೇ ರಿಯಾಯಿತಿ ನೀಡಲಾಗುವುದಿಲ್ಲ. 2,859 ಅಪರಾಧಿಗಳ ಪೈಕಿ ಸುಮಾರು 350 ಮಂದಿ ಭಾಗಶಃ ದಂಡವನ್ನು ಪಾವತಿಸಿದ್ದಾರೆ” ಎಂದು ಅವರು ಹೇಳಿದರು.
ಮೊಬಿಲಿಟಿ ತಜ್ಞ ಪ್ರೊ.ಆಶಿಶ್ ವರ್ಮಾ, “ಗಮನಾರ್ಹ ದಂಡದ ಮೊತ್ತವನ್ನು ಹೊಂದಿರುವ ಇವರೆಲ್ಲರೂ ಅಭ್ಯಾಸ ಅಪರಾಧಿಗಳು. ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅವರು ಇನ್ನಷ್ಟು ನಿಯಮ ಉಲ್ಲಂಘನೆ ಮಾಡುವವರೆಗೂ ಕಾಯಬಾರದು. ನಿಯಮ ಉಲ್ಲಂಘಿಸುವವರು ಒಂದು ನಿರ್ದಿಷ್ಟ ಮಿತಿಯನ್ನು ತಲುಪಿದ ಕ್ಷಣದಲ್ಲಿ ಕಾನೂನಿನ ಜಾರಿ ಮತ್ತು ದಂಡದ ಕ್ರಮವು ಸ್ವಯಂಚಾಲಿತವಾಗಿ ಜಾರಿಯಾಗಬೇಕು” ಎಂದು ಮೊಬಿಲಿಟಿ ತಜ್ಞ ಪ್ರೋ.ಆಶಿಶ್ ವರ್ಮಾ ಅಭಿಪ್ರಾಯ ಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾವುದೇ ಆಮೀಷ, ಪ್ರೇರೇಪಣೆಗಳಿಗೆ ಒಳಗಾಗದೆ ಮತ ಚಲಾಯಿಸಿ: ತುಷಾರ್ ಗಿರಿನಾಥ್
ಜನರು ಮಾಡುವ ನಿಯಮ ಉಲ್ಲಂಘನೆಗಳ ಸಂಖ್ಯೆಯನ್ನು ಆಧರಿಸಿ, ದಂಡದ ಮಟ್ಟವನ್ನು ಹೆಚ್ಚಿಸಬೇಕು. ತಮ್ಮ ಬೈಕ್ ಮಾರಿದರೂ ದಂಡದ ಮೊತ್ತ ಸಿಗುವುದಿಲ್ಲ ಎಂದು ನಿಯಮ ಉಲ್ಲಂಘನೆ ಮಾಡುವವರು ಆಗಾಗ ವಾದಿಸುತ್ತಾರೆ. ಆದರೆ, ಅವರು ಪದೇ ಪದೇ ನಿಯಮ ಉಲ್ಲಂಘಿಸಿರುವುದರಿಂದ ಮತ್ತು ಅನೇಕ ಬಾರಿ ಸಿಕ್ಕಿಬಿದ್ದು ಬುಕ್ ಆಗಿರುವುದರಿಂದ ಅವರು ದಂಡ ಪಾವತಿಸಬೇಕಾಗುತ್ತದೆ.
“ಟ್ರಾಫಿಕ್ ನಿಯಮಗಳನ್ನು ಯಾರೂ ಲಘುವಾಗಿ ತೆಗೆದುಕೊಳ್ಳಬಾರದು ಎಂಬ ಸಂದೇಶವು ತುಂಬಾ ಸ್ಪಷ್ಟವಾಗಿರಬೇಕು. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಇಷ್ಟೊಂದು ಉಲ್ಲಂಘನೆಯಾಗುವುದಿಲ್ಲ. ರಸ್ತೆ ಸುರಕ್ಷತೆ ಅಪಾಯಗಳು, ಅಪಘಾತಗಳು ಅಥವಾ ಸಂಚಾರ ದಟ್ಟಣೆಯನ್ನು ಉಂಟುಮಾಡುವವವರು ಸಂಚಾರ ನಿಯಮಗಳನ್ನು ಅನುಸರಿಸದಿದ್ದರೆ ಅವರ ಪರವಾನಗಿಯನ್ನು ಪೊಲೀಸರು ರದ್ದುಗೊಳಿಸಬೇಕು” ಎಂದು ಅವರು ಹೇಳಿದರು.