20 ದಿನದ ಹಸುಗೂಸನ್ನು ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ರಮ್ಯಾ ಮತ್ತು ಕೆವಿನ್ ಬಂಧಿತರು. ರಾಜಾಜಿನಗರದಲ್ಲಿ ನಕಲಿ ವೈದ್ಯ ಕೆವಿನ್ ಹಾಗೂ ಹಸುಗೂಸು ಮಾರಾಟ ದಂಧೆಯ ಮಧ್ಯವರ್ತಿ ರಮ್ಯಳನ್ನು ಸಿಸಿಬಿ ಪೊಲೀಸರು ಹೆಬ್ಬಾಳದಲ್ಲಿ ಬಂಧಿಸಿದ್ದಾರೆ.
ಹಸುಗೂಸು ಮಾರಾಟ ದಂಧೆಯ ಮಧ್ಯವರ್ತಿ ರಮ್ಯಳ ಸಂಬಂಧಿಯೊಬ್ಬಳು ಮದುವೆ ಆಗುವುದಕ್ಕೂ ಮುಂಚೆಯೇ ಗರ್ಭಿಣಿಯಾಗಿದ್ದರು. ಯುವತಿ ಮಗುವನ್ನು ತೆಗೆಸಲು ಓಡಾಡುತ್ತಿರುವುದರ ಬಗ್ಗೆ ತಿಳಿದ ರಮ್ಯ, ಸ್ವತಃ ತಾನೇ ಆ ಯುವತಿಯನ್ನು ಒಂಬತ್ತು ತಿಂಗಳ ಕಾಲ ಆರೈಕೆ ಮಾಡಿದ್ದಾಳೆ. ಬಳಿಕ ಯುವತಿಗೆ ಮದುವೆ ಮಾಡಿಸಿ, ಹಣ ಕೂಡ ನೀಡಿದ್ದಾಳೆ.
ನವಜಾತ ಶಿಶುವನ್ನು ತೆಗೆದುಕೊಂಡ ರಮ್ಯ ತನ್ನ ಗ್ಯಾಂಗ್ ಜತೆಗೆ ಸೇರಿಕೊಂಡು ಶಿಶುವನ್ನು ಮಾರಾಟ ಮಾಡಲು ಯತ್ನಿಸಿದ್ದಾಳೆ.
ನವಜಾತ ಶಿಶುವಿನ ಮಾರಾಟದ ಬಗ್ಗೆ ಸುಳಿವು ಪಡೆದ ಸಿಸಿಬಿ ಪೊಲೀಸರು ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿ ತಮಿಳುನಾಡಿನ ಈರೋಡ್ ಮೂಲದ ಮುರುಗೇಶ್ವರಿ(22) ಪರಿಚಯಸ್ಥರಾದ ಕಣ್ಣನ್ ರಾಮಸ್ವಾಮಿ(51), ಹೇಮಲತಾ (27), ಶರಣ್ಯಾ (33) ಎಂಬವರನ್ನು ಆರ್.ಆರ್.ನಗರದ ರಾಜರಾಜೇಶ್ವರಿ ದೇವಸ್ಥಾನದ ಬಳಿ ಬಂಧಿಸಿದ್ದಾರೆ. ಇವರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದಾಗ ರಮ್ಯ ಹೆಸರನ್ನು ಬಾಯಿಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಕ್ರಿಯವಾಗಿದ್ದ ನವಜಾತಶಿಶು ಅಕ್ರಮ ಮಾರಾಟ ಜಾಲವನ್ನು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ಭೇದಿಸಿದೆ. ಇದೀಗ ಈ ಪ್ರಕರಣದಲ್ಲಿ ಒಟ್ಟಾರೆಯಾಗಿ 11 ಆರೋಪಿಗಳನ್ನು ಬಂಧಿಸಲಾಗಿದೆ. ಸದ್ಯ ಈ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು ಅನೇಕ ವಿಚಾರಗಳು ಬಯಲಾಗುತ್ತಿವೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಬಂಧಿತರಾಗಿದ್ದ ನಾಲ್ವರು ಆರೋಪಿಗಳನ್ನ ಜೈಲಿಂದ ಕಸ್ಟಡಿಗೆ ಪಡೆದುಕೊಳ್ಳಲು ಸಿಸಿಬಿ ತಯಾರಿ ನಡೆಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 20 ದಿನದ ಹಸುಗೂಸು ಮಾರಾಟ; ಸಿಸಿಬಿ ಪೊಲೀಸರ ಕಾರ್ಯಾಚರಣೆ
ಇನ್ನೊಬ್ಬ ಬಂಧಿತ ಆರೋಪಿ ನಕಲಿ ವೈದ್ಯ ಕೆವಿನ್ ಎಂಬಿಬಿಎಸ್ ತೇರ್ಗಡೆಯಾಗದೇ, ಕ್ಲಿನಿಕ್ ನಡೆಸುತ್ತಿದ್ದನು ಎಂದು ತಿಳಿದುಬಂದಿದೆ. ಜತೆಗೆ ಹಸುಗೂಸು ಮಾರಾಟಕ್ಕೆ ಡಾಕ್ಯುಮೆಂಟ್ ಮಾಡಿಕೊಡುತ್ತಿದ್ದನು ಎಂದು ತಿಳಿದುಬಂದಿದೆ.
ಏನಿದು ಘಟನೆ?
ಮಕ್ಕಳಾಗದ ದಂಪತಿಗೆ ಲಕ್ಷಗಟ್ಟಲೆ ಹಣ ಪಡೆದು 20 ದಿನದ ಗಂಡು ಮಗುವನ್ನು ಮಾರಾಟ ಮಾಡಲು ಆರೋಪಿಗಳು ಕಳೆದ ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ರೆಡ್ ಕಲರ್ ಶಿಫ್ಟ್ ಕಾರಿನಲ್ಲಿ ಬಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು.