ಹೆಣ್ಣು ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡುತ್ತಿದ್ದ ನಾಲ್ವರು ವೈದ್ಯರು ಸೇರಿ 9 ಮಂದಿ ಆರೋಪಿಗಳನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ ಮೂಲದ ವೈದ್ಯ ಡಾ.ತುಳಸಿರಾಮ್, ಡಾ.ಚಂದನ್ ಬಲ್ಲಾಳ್, ಡಾ.ಚಂದನ್ ಬಲ್ಲಾಳ್ ಪತ್ನಿ ಮೀನಾ, ಲ್ಯಾಬ್ ಟೆಕ್ನಿಷಿಯನ್ ನಿಸ್ಸಾರ್, ಮೈಸೂರಿನ ಖಾಸಗಿ ಆಸ್ಪತ್ರೆ ರಿಸೆಪ್ಷನಿಸ್ಟ್ ರಿಜ್ಮಾ ಬಂಧಿತರು.
ಆರೋಪಿಗಳು ಸುಮಾರು 2 ವರ್ಷಗಳಿಂದ ನಿರಂತರವಾಗಿ 900 ಹೆಣ್ಣು ಭ್ರೂಣ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಶಿವನಂಜೇಗೌಡ, ವೀರೇಶ್, ನವೀನ್ ಮತ್ತು ನಯನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ವಿಚಾರಣೆಗೆ ಒಳಗೊಳಪಡಿಸಿದಾಗ ವೈದ್ಯರ ಹೆಸರನ್ನು ಬಾಯಿಬಿಟ್ಟಿದ್ದಾರೆ.
ಆರೋಪಿಗಳು ಹೆಣ್ಣು ಮಕ್ಕಳಿಗೆ ಜನ್ಮ ನೀಡುವ ಗರ್ಭಿಣಿಯರನ್ನು ಮಂಡ್ಯದ ಆಲೆಮನೆಯೊಂದರಲ್ಲಿ ಸ್ಕ್ಯಾನ್ ಮಾಡಿಸುತಿದ್ದರು. ಮೈಸೂರಿನ ಉದಯಗಿರಿಯ ಆಸ್ಪತ್ರೆಯೊಂದರಲ್ಲಿ ಭ್ರೂಣ ಹತ್ಯೆಯ ಕೃತ್ಯ ನಡೆಸುತ್ತಿದ್ದರು. ಒಂಬತ್ತು ಆರೋಪಿಗಳು ಸೇರಿ ಸಿಂಡಿಕೇಟ್ ಮಾಡಿಕೊಂಡು ವ್ಯವಸ್ಥಿತವಾಗಿ ಕೃತ್ಯ ಎಸಗುತಿದ್ದರು. ಪ್ರತಿ ತಿಂಗಳು 20 ರಿಂದ 25 ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದರು. ಕಳೆದ ಎರಡು ವರ್ಷಗಳಲ್ಲಿ ಸುಮಾರು 900ಕ್ಕೂ ಹೆಚ್ಚು ಭ್ರೂಣ ಹತ್ಯೆ ಮಾಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಅಸ್ಪೃಶ್ಯತೆ ಆಚರಣೆ ನ್ಯಾಯಾಲಯದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುತ್ತದೆ: ಹೈಕೋರ್ಟ್
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮೈಸೂರಿನ ಉದಯಗಿರಿಯಲ್ಲಿನ ಮಾತಾ ಆಸ್ಪತ್ರೆ ಮತ್ತು ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಫೈಲ್ಸ್ ಡೇ ಕೇರ್ ಸೆಂಟರ್ ಅನ್ನು ಸಹ ಪೊಲೀಸರು ಸೀಜ್ ಮಾಡಿದ್ದು, ಆಯುರ್ವೇದ ಡೇ ಕೇರ್ ಸೆಂಟರ್‌ನಲ್ಲಿಯೇ ಭ್ರೂಣ ಹತ್ಯೆ ನಡೆಯುತಿತ್ತು ಎಂಬುದು ಬಯಲಿಗೆ ಬಂದ ಹಿನ್ನೆಲೆ ಸೀಜ್ ಮಾಡಲಾಗಿದೆ.