ವಿದ್ಯುತ್ ತಂತಿ ತಗುಲಿ 10 ವರ್ಷದ ಬಾಲಕಿ ಮೃತಪಟ್ಟ ಘಟನೆ ಕಾಡುಗೋಡಿ ವರ್ತೂರಿನ ಪ್ರೆಸ್ಟೀಜ್ ಹೆಬಿಟೇಡ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಮಾನ್ಯ(10) ಮೃತ ಬಾಲಕಿ. ಗುರುವಾರ (ಡಿ.28) ಸಂಜೆ ಸುಮಾರು 7.30ರ ಸುಮಾರಿಗೆ ಈ ಘಟನೆ ನಡೆದಿದೆ.
ಬಾಲಕಿ ಮಾನ್ಯ ಗುರುವಾರ ಅಪಾರ್ಟ್‌ಮೆಂಟ್‌ನ ಸ್ವಿಮಿಂಗ್ ಫೂಲ್ ಬಳಿ ಆಟವಾಡುತ್ತಿದ್ದಳು. ಈ ವೇಳೆ, ಫೂಲ್ ಪಕ್ಕದಲ್ಲಿದ್ದ ವಿದ್ಯುತ್ ದೀಪದ ತಂತಿಯನ್ನು ಬಾಲಕಿ ತುಳಿದ ಪರಿಣಾಮ ಶಾಕ್ ಹೊಡೆದಿದೆ. ಬಾಲಕಿ ಪ್ರಜ್ಞೆ ತಪ್ಪಿ ಸ್ವಿಮಿಂಗ್ ಫೂಲ್ ಒಳಗೆ ಬಿದ್ದಿದ್ದಾಳೆ.
ಇದನ್ನು ಕಂಡ ಅಪಾರ್ಟ್‌ಮೆಂಟ್ ನಿವಾಸಿಗಳು ಬಾಲಕಿಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾರೆ.
ಇನ್ನು ಬಾಲಕಿ ಸಾವಿಗೆ ಅಪಾರ್ಟ್‌ಮೆಂಟ್ ನಿರ್ವಹಣಾ ಸಿಬ್ಬಂದಿ ಬೇಜವಾಬ್ದಾರಿ ಕಾರಣ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಆರೋಪ ಮಾಡಿದ್ದು ರಾತ್ರಿಯಿಡಿ ನಿರ್ವಹಣಾ ಸಿಬ್ಬಂದಿ ವಿರುದ್ಧ 100ಕ್ಕೂ ಹೆಚ್ಚು ಜನರು ಪ್ರತಿಭಟನೆ ನಡೆಸಿದರು.
ವಿದ್ಯುತ್ ಪೂರೈಕೆ, ವಿದ್ಯುತ್ ಕಂಬಗಳ ನಿರ್ವಹಣೆಯನ್ನು ಅಪಾರ್ಟ್‌ಮೆಂಟ್‌ನ ಪಿಪಿಎಮ್‌ಸಿ ವಿಭಾಗ ನೋಡಿಕೊಳ್ಳುತ್ತಿತ್ತು. ಪಿಪಿಎಮ್‌ಸಿ ನಿರ್ಲಕ್ಷ್ಯದಿಂದಲೇ ಮಗು ಸಾವಾಗಿದೆ. ಈ ನಿರ್ಲಕ್ಷ್ಯ ಇದೇ ಮೊದಲಲ್ಲ. ಈ ಹಿಂದೆಯೂ ನಡೆದಿತ್ತು. ಈ ಹಿಂದೆ ಸಹ ನಮಗೆ ವಿದ್ಯುತ್ ಶಾಕ್ ಅನುಭವವಾಗಿದೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರು ನಿರ್ವಹಣಾ ಸಿಬ್ಬಂದಿ ಕ್ರಮಕೈಗೊಂಡಿಲ್ಲ. ನಿರ್ವಹಣಾ ಸಿಬ್ಬಂದಿ ಸರಿಯಾದ ರೀತಿ ಕೆಲಸ ಮಾಡುತ್ತಿಲ್ಲ. ಆದ್ದರಿಂದಲೇ, ಈ ಘಟನೆ ಸಂಭವಿಸಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪ್ರತಿ ವರ್ಷ ‘ಎಫ್‌ಸಿ’ ಕಡ್ಡಾಯ; ಹೈಕೋರ್ಟ್ ಸೂಚನೆ
ಪ್ರಕರಣ ಸಂಬಂಧ ಮೃತ ಬಾಲಕಿ ಮಾನ್ಯ ತಂದೆ ವರ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತಿದ್ದಾರೆ.
ಮಗು ಮೃತಪಟ್ಟ ಹಿನ್ನೆಲೆ ಅತ್ತಿಬೆಲೆಯಿಂದ ವರ್ತೂರು ಬರುವ ಮುಖ್ಯರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ವೇಳೆ, ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.