ಸಾಲ ತೀರಿಸುವಂತೆ ಖಾಸಗಿ ಬ್ಯಾಂಕ್‌ನಿಂದ ನಿರಂತರ ಕಿರುಕುಳಕ್ಕೆ ಒಳಗಾದ ದಂಪತಿ ಬೆಂಗಳೂರಿನ ವಿಧಾನಸೌಧದ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಬೆಂಗಳೂರಿನ ಜಗಜೀವನ ರಾಮ್ ನಗರ (ಜೆಜೆ ನಗರ) ಗೋರಿಪಾಳ್ಯದ ಶಾಯಿಸ್ತಾ ದಂಪತಿ ಆತ್ಮಹತ್ಯೆಗೆ ಯತ್ನಿಸಿದವರು.
ದಂಪತಿ ಬೆಂಗಳೂರು ಸಹಕಾರಿ ಬ್ಯಾಂಕ್ನಿಂದ ವ್ಯಾಪಾರಕ್ಕಾಗಿ ₹50 ಲಕ್ಷ ಸಾಲ ಪಡೆದಿದ್ದರು. ಸಾಲ ಪಡೆದ ದಂಪತಿಯಿಂದ ಬ್ಯಾಂಕ್ ಈಗಾಗಲೇ ₹95 ಲಕ್ಷ ಹಣ ಪಾವತಿಸಿಕೊಂಡಿದೆ. ಆದರೂ, ಇನ್ನು ₹1 ಕೋಟಿ 41 ಲಕ್ಷ ಹಣ ಪಾವತಿ ಮಾಡಬೇಕು ಎಂದು ಬ್ಯಾಂಕ್ ಸಿಬ್ಬಂದಿ ಹೇಳಿದ್ದರು.
ಸಾಲ ಪಾವತಿಸದ ಹಿನ್ನೆಲೆ, ಬ್ಯಾಂಕ್ನವರು ಜಮೀನು ಹರಾಜು ಹಾಕಿದ್ದರು. ಇದರಿಂದ ಮನನೊಂದ ಮುಸ್ಲಿಂ ದಂಪತಿ ಬುಧವಾರ 11. 45 ಗಂಟೆಗೆ ವಿಧಾನಸೌಧ ಮೂರನೇ ಗೇಟ್ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ದಂಪತಿಯನ್ನು ತಡೆದು, ಸಂತ್ರಸ್ತ ಕುಟುಂಬವನ್ನು ವಶಕ್ಕೆ ಪಡೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅತ್ತೆ ಮನೆಯಲ್ಲಿ ಕಳ್ಳತನ!
“ಶುಂಠಿ ವ್ಯಾಪಾರಕ್ಕೆ ಮನೆಯನ್ನು ಒತ್ತೆಯಿಟ್ಟು ₹50 ಲಕ್ಷ ಸಾಲ ಪಡೆದಿದ್ದೆವು. ಬ್ಯಾಂಕ್‌ನವರು ಕೇವಲ ₹1.41 ಕೋಟಿಗೆ ಮೂರು ಕೋಟಿ ಮೌಲ್ಯದ ಮನೆಯನ್ನು ಹರಾಜು ಹಾಕಿದ್ದಾರೆ. ಇದರಿಂದ ಸಾಲ ಪಡೆದ ನಮಗೆ ಬ್ಯಾಂಕ್ ಅನ್ಯಾಯ ಮಾಡಿದೆ. ನಮ್ಮ ಕುಟುಂಬ ಬೀದಿಗೆ ಬಿದ್ದಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದೆವು. ಅವರು ನ್ಯಾಯ ಕೊಡಿಸಲಿಲ್ಲ” ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.