ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನಕ್ಕೊಂದು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ, ಮಕ್ಕಳ ಕದಿಯುವ ಬಿಹಾರ ಗ್ಯಾಂಗ್ ನಗರದಲ್ಲಿ ಸಕ್ರಿಯವಾಗಿದ್ದು, ಮನೆ ಮುಂದೆ ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೆ ತಿಂಡಿ ಕೊಡಿಸುವ ನೆಪದಲ್ಲಿ ಕಳ್ಳತನ ಮಾಡಿ ಬಿಹಾರಕ್ಕೆ ಪರಾರಿಯಾಗುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳಿಲ್ಲದಕ್ಕೆ ಮಕ್ಕಳನ್ನು ಸಾಕಲು ಅಪಹರಿಸಿರುವುದಾಗಿ ಬಂಧಿತ ದಂಪತಿ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ.
ಬಿಹಾರ ಮೂಲದ ಪ್ರಮೀಳಾ ದೇವಿ (33) ಮತ್ತು ಬಲರಾಮ್(40) ಬಂಧಿತರು. ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಂಗಳವಾರ ಬೆಳಗ್ಗೆ 11:30 ಸುಮಾರಿಗೆ ಆರು ವರ್ಷದ ಹೆಣ್ಣು ಮಗು ಮತ್ತು ಎಂಟು ತಿಂಗಳ ಮಗು ಮನೆಯ ಮುಂದೆ ಆಟವಾಡುತ್ತಿದ್ದವು. ಈ ವೇಳೆ, ಬಂಧಿತರು ಆರು ವರ್ಷದ ಮಗುವಿನ ಬಳಿ ವಿಳಾಸ ಕೇಳುವ ನೆಪದಲ್ಲಿ ಮಾತು ಆರಂಭಿಸುತ್ತಾರೆ. ಬಳಿಕ ಮಕ್ಕಳಿಗೆ ತಿಂಡಿ ಕೊಡಿಸುವ ಆಮಿಷವೊಡ್ಡಿ ಮಕ್ಕಳನ್ನು ಕರೆದುಕೊಂಡು ಹೋಗುತ್ತಾರೆ. ಮಹಿಳೆ ಮಕ್ಕಳನ್ನು ಕರೆದುಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬಳಿಕ, ಮಕ್ಕಳನ್ನು ಕಳ್ಳತನ ಮಾಡಿ ಯಶವಂತಪುರ ರೈಲ್ವೇ ಸ್ಟೇಷನ್ನಿಂದ ಬಿಹಾರಕ್ಕೆ ತೆರಳಲು ಸಜ್ಜಾಗಿದ್ದರು. ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಜೋರಾಗಿ ಅಳುತ್ತಿದ್ದವು. ಜತೆಗೆ ದಂಪತಿ ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದರು.
ರೈಲ್ವೆ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಕ್ಕಳನ್ನು ಕಳ್ಳತನ ಮಾಡಿರುವ ಬಗ್ಗೆ ತಿಳಿದುಬಂದಿದೆ.
ಮಕ್ಕಳ ಹುಡುಕಾಟದಲ್ಲಿ ಪೋಷಕರು
ಮಕ್ಕಳನ್ನು ಕಳೆದುಕೊಂಡ ಪೋಷಕರು ತೀವ್ರ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಮಕ್ಕಳು ಸಿಗದಿದ್ದಾಗ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಅಪಹರಣ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಬಳಿಕ, ರೈಲ್ವೆ ಅಧಿಕಾರಿಗಳು ಮಕ್ಕಳನ್ನು ಆರೋಪಿಗಳಿಂದ ರಕ್ಷಿಸಿ ಕೊಡಿಗೇಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಜತೆಗೆ ಆರೋಪಿಗಳನ್ನು ಕೊಡಿಗೇಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚಾಲಕ ರಹಿತ ನಮ್ಮ ಮೆಟ್ರೋ: ಚೀನಾದ 21 ಎಂಜಿನಿಯರ್ಗಳಿಗೆ ಭಾರತದ ವೀಸಾ
ಮಕ್ಕಳನ್ನು ಸಾಕಲು ಅಪಹರಣ
ಬಿಹಾರ ಮೂಲದ ದಂಪತಿ ಬೆಂಗಳೂರಿನಲ್ಲಿ ಟೈಲ್ಸ್ ಕೆಲಸ ಮತ್ತು ಮನೆಗೆಲಸ ಮಾಡಿಕೊಂಡಿದ್ದರು. ಇವರಿಗೆ ಮಕ್ಕಳು ಆಗಿರಲಿಲ್ಲ. ಈ ಹಿನ್ನೆಲೆ, ಮಕ್ಕಳನ್ನು ಕಳ್ಳತನ ಮಾಡಿ ಬಿಹಾರಗೆ ಕರೆದುಕೊಂಡು ಹೋಗಿ ಸಾಕುವ ಉದ್ದೇಶ ಹೊಂದಿದ್ದರು. ಹೀಗಾಗಿ ಮಕ್ಕಳನ್ನು ಅಪಹರಣ ಮಾಡಿದ್ದರು. ಇವರು ಮಕ್ಕಳನ್ನು ಅಪಹರಣ ಮಾಡುವ ಗ್ಯಾಂಗ್ನವರಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸದ್ಯ ಇಬ್ಬರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಮುಂದುವರೆದಿದೆ.