ವೈದ್ಯರೊಬ್ಬರಿಗೆ ಐಷಾರಾಮಿ ಕಾರು ಕೊಡಿಸುವುದಾಗಿ ನಂಬಿಸಿ, ಮಹಿಳೆಯೊಬ್ಬರು ಬರೋಬ್ಬರಿ ₹6 ಕೋಟಿ ವಂಚನೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಗಿರೀಶ್ ಮೋಸ ಹೋದ ವೈದ್ಯ. ಐಶ್ವರ್ಯ ಗೌಡ ಆರೋಪಿ. ಸದ್ಯ ಈ ಬಗ್ಗೆ ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಗಿರೀಶ್ ಅವರು ವೈದ್ಯರಾಗಿದ್ದು, ಇವರ ಬಳಿ ಆರೋಪಿ ಐಶ್ವರ್ಯ ಗೌಡ ಕಾಸ್ಮೆಟಿಕ್ ಸರ್ಜರಿ ಮಾಡಿಸಲು 2022ರ ಮಾರ್ಚ್‌ನಲ್ಲಿ ಬಂದಿದ್ದಳು. ಆಗ ವೈದ್ಯರಿಗೂ ಆರೋಪಿಗೂ ಪರಿಚಯವಾಗಿದೆ.
ಈ ವೇಳೆ, ಆರೋಪಿ ಐಶ್ವರ್ಯ ತಾನು ರಿಯಲ್ ಎಸ್ಟೇಟ್ ಫೈನಾನ್ಸ್ ನಡೆಸುತ್ತಿದ್ದು, ಸೆಕೆಂಡ್ ಹ್ಯಾಂಡ್ ಕಾರುಗಳ ವ್ಯವಹಾರ ಸಹ ನಡೆಸುತ್ತಿದ್ದೇನೆ ಎಂದು ಪರಿಚಯ ಮಾಡಿಕೊಂಡಿದ್ದಳು.
ಗಿರೀಶ್ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಖರೀದಿ ಮಾಡಲು ಯೋಚಿಸುತ್ತಿದ್ದಾಗ ಮಹಿಳೆಯನ್ನು ಸಂಪರ್ಕ ಮಾಡಿದ್ದಾರೆ. ಆರೋಪಿ ಕಡಿಮೆ ಬೆಲೆಗೆ ಐಷಾರಾಮಿ ಕಾರ್ ಕೊಡಿಸುವುದಾಗಿ ನಂಬಿಸಿ, ವೈದ್ಯರ ಬಳಿಯಿಂದ ಮೊದಲನೆಯದಾಗಿ ₹2 ಕೋಟಿ 75 ಲಕ್ಷ ಹಣವನ್ನು ಆನ್ಲೈನ್ ಮೂಲಕ ಪಾವತಿ ಮಾಡಿಸಿಕೊಂಡಿದ್ದಾಳೆ. ಅಲ್ಲದೇ, ₹3 ಕೋಟಿ 25 ಲಕ್ಷ ನಗದಾಗಿ ಪಡೆದುಕೊಂಡಿದ್ದಾಳೆ.
ಹಣ ಪಡೆದು ತುಂಬಾ ದಿನಗಳಾದರೂ ಕಾರನ್ನು ಕೊಡಿಸದ ಆಕೆಯ ಮೇಲೆ ಅನುಮಾನಗೊಂಡ ಗಿರೀಶ್ “ಕಾರನ್ನು ಕೊಡಿಸದಿದ್ದರೇ, ಹಣ ವಾಪಸ್ ನೀಡಿ” ಎಂದು ಕೇಳಿದ್ದಾರೆ. ಆ ಸಮಯದಲ್ಲಿ ಕೊಡುವುದಾಗಿ ಸಬೂಬು ಹೇಳಿ ಮುಂದೂಡಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮಕ್ಕಳ ನಾಪತ್ತೆ ಪ್ರಕರಣ ಶೇ.34 ರಷ್ಟು ಏರಿಕೆ
ವೈದ್ಯ ಡಿಸೆಂಬರ್‌ನಲ್ಲಿ ಹಣ ತಿರುಗಿಸುವಂತೆ ಕೇಳಿದಾಗ, ಆರೋಪಿ ಐಶ್ವರ್ಯ ವಿಜಯನಗರ ಕ್ಲಬ್ ಹತ್ತಿರ ಬರಲು ತಿಳಿಸಿದ್ದಾಳೆ. ಅದರಂತೆ ಗಿರೀಶ್ ಮತ್ತು ಅವರ ಪತ್ನಿ ಕ್ಲಬ್ ಹತ್ತಿರ ಹೋದಾಗ, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾಳೆ. ಅಲ್ಲದೇ, ಪದೇಪದೆ ಹಣ ಕೇಳಿದರೆ, ಅತ್ಯಾಚಾರದ ದೂರು ಕೊಡುತ್ತೇನೆ ಎಂದು ಹೆದರಿಕೆ ಹಾಕಿದ್ದಾರೆ.
ಇಷ್ಟೇ ಅಲ್ಲದೇ, ಈ ವಿಷಯವನ್ನು ಕೈ ಬಿಡಬೇಕಾದರೆ ₹5 ಲಕ್ಷ ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ವೈದ್ಯರಿಂದ ಪುನಃ ₹2 ಲಕ್ಷ ಹಣ ಸುಲಿಗೆ ಮಾಡಿದ್ದಾರೆ ಎಂದು ವೈದ್ಯರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.