ಬೆಂಗಳೂರಿನ ಬಸವೇಶ್ವರನಗರದ ಗ್ಯಾರೇಜ್‌ನಲ್ಲಿ ಮಾರ್ಚ್ 9ರಂದು ಸಾಯಂಕಾಲ ಅಗ್ನಿ ಅವಘಡ ಸಂಭವಿಸಿದ್ದು, ಗ್ಯಾರೇಜ್ ಮಾಲೀಕ ಸೇರಿ ನಾಲ್ವರಿಗೆ ಗಾಯವಾಗಿದೆ.
ಗ್ಯಾರೇಜ್ ಮಾಲೀಕ ಜಾರ್ಜ್, ಕೆಲಸಗಾರ ಶಿವು ಇನ್ನು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಗಾಯವಾಗಿದೆ. ಮೇಲ್ನೋಟಕ್ಕೆ ವೆಲ್ಡಿಂಗ್ ಗ್ಯಾಸ್ ಟ್ಯಾಂಕ್ ಸ್ಫೋಟದಿಂದ ಘಟನೆ ಸಂಭವಿಸಿರುವ ಸಾಧ್ಯತೆಯಿದೆ. ಸ್ಫೋಟದಿಂದ 2 ಅಂತಸ್ತಿನ ಮನೆಗೂ ಹಾನಿಯಾಗಿದ್ದು, ಸ್ವಿಫ್ಟ್ ಡಿಸೈರ್ ಕಾರು, ದ್ವಿಚಕ್ರ ವಾಹನ ಸಂಪೂರ್ಣ ಹಾನಿಯಾಗಿದೆ.
ಘಟನೆ ಹಿನ್ನಲೆ, ಗ್ಯಾರೇಜ್ ಪಕ್ಕದ ಮನೆ ಹಾಗೂ ನಿರ್ಮಾಣ ಹಂತದ ಕಟ್ಟಡಕ್ಕೂ ಹಾನಿಯಾಗಿದೆ. ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಂಜೆ ಆರು ಗಂಟೆ ಸುಮಾರಿಗೆ ಅವಘಡ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಗ್ಯಾರೇಜ್ ಸುತ್ತಮುತ್ತ ಇರುವ ಕೆಲ ಮನೆಗಳ ಕಿಟಕಿ ಗಾಜುಗಳು ಸಹ ಜಖಂಗೊಂಡಿವೆ. ಗ್ಯಾರೇಜ್ ಮಾಲೀಕ ಜಾರ್ಜ್, ಕೆಲಸಗಾರ ಶಿವು ಹಾಗೂ ಇಬ್ಬರು ಸಾರ್ವಜನಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನ ಚಿಕಿತ್ಸೆಗಾಗಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡಿರುವ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 4 ಜಲಾಶಯಗಳಲ್ಲಿ 34 ಟಿಎಂಸಿ ನೀರು ಸಂಗ್ರಹವಿದೆ, ಆತಂಕ ಬೇಡ : ಜಲಮಂಡಳಿ ಅಧ್ಯಕ್ಷ
“ವೆಲ್ಡಿಂಗ್ ಮೆಷಿನ್ನಿಂದ ಗ್ಯಾಸ್ ಲೀಕ್ ಆಗಿ ಬೆಂಕಿ ಹತ್ತಿದೆ ಎಂಬ ಮಾಹಿತಿ ಸಿಕ್ಕಿದೆ. ದೊಡ್ಡ ಪ್ರಮಾಣದ ಗಾಯ ಯಾರಿಗೂ ಆಗಿಲ್ಲ. ರೆವೆನ್ಯೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಾರೆ. ಮೊದಲು ಗ್ಯಾರೇಜ್ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಅನಧಿಕೃತವಾಗಿ ಗ್ಯಾಸ್ ವೆಲ್ಡಿಂಗ್ ಮಾಡುತ್ತಿದ್ದರು ಎಂಬ ಮಾಹಿತಿ ಈಗ ಸಿಕ್ಕಿದೆ. ಸುರಕ್ಷತಾ ಕ್ರಮ ಕೈಗೊಂಡಿದ್ದರಾ? ಎಂಬ ಬಗ್ಗೆ ತಿಳಿದುಕೊಳ್ಳಬೇಕು. ತಪ್ಪಿದ್ದರೇ, ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು” ಎಂದು ಘಟನಾ ಸ್ಥಳ ಪರಿಶೀಲನೆ ನಂತರ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಹೇಳಿದರು.