ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಕೆ ಎಸ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತರ ಮಾಜಿ ಕಾರು ಚಾಲಕ ಕಿರಣ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಬೆಂಗಳೂರಿನ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ಕುಮಾರ್ ಶಹಾಪುರ್ವಾಡ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಿರಣ್ ಸ್ವಭಾವ ಮತ್ತು ಕಚೇರಿಯಲ್ಲಿ ನಡೆಯುತ್ತಿದ್ದ ಅಧಿಕೃತ ಮಾಹಿತಿಯನ್ನು ಬೇರೆಯವರಿಗೆ ನೀಡುತ್ತಿದ್ದ ಹಿನ್ನೆಲೆ ಅಧಿಕಾರಿ ಪ್ರತಿಮಾ ಅವರು ಕಿರಣ್ನನ್ನು ಎರಡು ತಿಂಗಳ ಹಿಂದೆ ಕೆಲಸದಿಂದ ತೆಗೆದಿದ್ದರು. ಕೆಲಸ ಕಳೆದುಕೊಂಡ ಬಳಿಕ ಊರು ಬಿಟ್ಟಿದ್ದ ಕಿರಣ್, 1 ತಿಂಗಳ ಬಳಿಕ ಬೆಂಗಳೂರಿಗೆ ಬಂದು ಪ್ರತಿಮಾರನ್ನು ಕೊಲೆಗೈದಿದ್ದಾನೆ” ಎಂದು ಹೇಳಿದ್ದಾರೆ.
“ಕಿರಣ್ಗೆ ಕೆಲಸ ಹೋದ ಕಾರಣ ಆತನ ಪತ್ನಿ ಅವನನ್ನು ಬಿಟ್ಟು ತವರು ಮನೆಗೆ ಹೋಗಿದ್ದಳು. ಇದರಿಂದ ನೊಂದಿದ್ದ ಕಿರಣ್ ಅಧಿಕಾರಿಯನ್ನು ಕಚೇರಿಯಲ್ಲಿ ಭೇಟಿ ಮಾಡಿ, ಕೆಲಸಕ್ಕೆ ಸೇರಿಸಿಕ್ಕೊಳ್ಳುವಂತೆ ಮನವಿ ಮಾಡಿದ್ದಾನೆ. ಆದರೆ, ಅಧಿಕಾರಿ ಪ್ರತಿಮಾ ಅವರು ಇದಕ್ಕೆ ನಿರಾಕರಿಸಿದ್ದಾರೆ” ಎಂದು ವಿವರಿಸಿದ್ದಾರೆ.
“ಬಳಿಕ ನವೆಂಬರ್ 3ರಂದು ಕಿರಣ್ ಅಧಿಕಾರಿ ಪ್ರತಿಮಾ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಲು ಪ್ರಯತ್ನ ಮಾಡಿದ್ದನು. ಆದರೆ, ಅದು ಸಾಧ್ಯವಾಗಿರಲಿಲ್ಲ. ನಂತರ ನವೆಂಬರ್ 4ರಂದು ಅಧಿಕಾರಿ ಕೆಲಸದಿಂದ ಮರಳಿ ಮನೆಗೆ ಬರುವಾಗ ಅವರ ಹಿಂದೆಯೇ ಹೋಗಿ ಅವರ ಮನೆಯಲ್ಲಿದ್ದ ಆಯುಧ ಮತ್ತು ಅವರ ವೇಲ್ ಬಳಸಿ ಕೊಲೆ ಮಾಡಿದ್ದಾನೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿಯ ಕೊಲೆ ಪ್ರಕರಣ; ಓರ್ವ ಪೊಲೀಸ್ ವಶಕ್ಕೆ
“ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಮಲೆಮಹದೇಶ್ವರ ಬೆಟ್ಟದಲ್ಲಿ ಬಂಧಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೇ, ಅಧಿಕಾರಿಯ ಕೆಲಸದ ಆಯಾಮದಿಂದಲೂ ತನಿಖೆ ಮಾಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.