ಹೊಚ್ಚ ಹೊಸ ಕಾರಿನ ಮೇಲೆ ದೊಡ್ಡ ಒಣಗಿದ ಮರ ಬಿದ್ದು, ಕಾರು ಸಂಪೂರ್ಣವಾಗಿ ಜಖಂ ಆದ ಘಟನೆ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ನಡೆದಿದೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ನಗರದ ಹೃದಯ ಭಾಗದ ಲ್ಯಾವೆಲ್ಲೆ ರಸ್ತೆಯಲ್ಲಿ ಮೇ 2ರಂದು ಬೆಳಗ್ಗೆ 9.15ರ ಸುಮಾರಿಗೆ ಹಳೆಯ ದೊಡ್ಡದಾದ ಒಣಗಿದ ಮರವೊಂದು ನೆಲಕ್ಕುರುಳಿದೆ.
ಬೌರಿಂಗ್ ಇನ್‌ಸ್ಟಿಟ್ಯೂಟ್ ಹಿಂಭಾಗದಲ್ಲಿರುವ ದಕ್ಷಿಣ್ ಹೋಂಡಾ ಕಾರ್ ಡೀಲರ್‌ಶಿಪ್ ಎದುರು ಹೊಸದಾಗಿ ನೋಂದಾಯಿಸಲಾದ ಹೋಂಡಾ ಎಲಿವೇಟ್ ಎಸ್‌ಯುವಿ ಕಾರು ನಿಲ್ಲಿಸಲಾಗಿತ್ತು. ಒಣಗಿದ ಮರವು ಈ ಹೊಚ್ಚ ಹೊಸ ಕಾರಿನ ಮೇಲೆ ಬಿದ್ದಿದೆ. ಅದರ ಛಾವಣಿ ಮತ್ತು ವಿಂಡ್‌ಶೀಲ್ಡ್ ಹಾನಿಗೊಳಗಾಗಿದೆ. ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.
ಸ್ಥಳಕ್ಕೆ ಕಬ್ಬನ್ ಪಾರ್ಕ್ ಸಂಚಾರ ಪೊಲೀಸರು ದೌಡಾಯಿಸಿ ಅವಶೇಷಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
“ಬೌರಿಂಗ್ ಇನ್ಸ್ಟಿಟ್ಯೂಟ್ ಕಾಂಪೌಂಡ್ ಗೋಡೆಯಿಂದ ಚಾಚಿಕೊಂಡಿರುವ ಮರವು ಹಲವಾರು ವರ್ಷಗಳಿಂದ ಒಣಗಿದೆ. ಅಲ್ಲದೇ, ಬಿಸಿಲಿನ ತಾಪಕ್ಕೆ ಮರ ಬಿದ್ದಿರುವ ಸಾಧ್ಯತೆ ಇದೆ” ಎಂದು ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.
ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ಸಂಚಾರ ಪೊಲೀಸರು ಪ್ರಯಾಣಿಕರು ಪರ್ಯಾಯ ಮಾರ್ಗದಲ್ಲಿ ತೆರಳುವಂತೆ ಸವಾರರಿಗೆ ಸಲಹೆ ಸೂಚನೆ ನೀಡಿ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೋರ್‌ವೆಲ್ ಕೊರೆಯುತ್ತಿರುವ ಜಲಮಂಡಳಿ; ಧೂಳಿನಲ್ಲಿ ಮುಳುಗಿದ ಬೆಂಗಳೂರು
ಮರಗಳು ಬಿದ್ದು ಸಾವು-ನೋವುಗಳಿಗೆ ಕಾರಣವಾಗುವ ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿವೆ. ಏಪ್ರಿಲ್ 5 ರಂದು ಶಾಂತಿನಗರದ ನಂಜಪ್ಪ ರಸ್ತೆಯಲ್ಲಿ ದೊಡ್ಡ ಮರವೊಂದು ಉರುಳಿ ಬಿದ್ದ ಪರಿಣಾಮ ಚಂಚಲ್ ಚೌಧರಿ ಎಂಬುವವರು ಗಾಯಗೊಂಡಿದ್ದರು.
ಕಳೆದ ವರ್ಷ ಜುಲೈನಲ್ಲಿ 18 ವರ್ಷದ ರಾಜಶೇಖರ್ ಕೆ ವಿ ಎಂಬ ವಿದ್ಯಾರ್ಥಿಯು ಚಂದ್ರಿಕಾ ಹೋಟೆಲ್ ಜಂಕ್ಷನ್‌ನಲ್ಲಿ ಬೃಹತ್ ಮರವೊಂದು ಬಿದ್ದು ಅವರಿಗೆ ಗಂಭೀರ ಗಾಯಗಳಾಗಿದ್ದವು. ಈ ಘಟನೆ ನಡೆದು ಸುಮಾರು ಒಂದು ವರ್ಷ ಕಳೆದಿದೆ. ಆದರೆ, ರಾಜಶೇಖರ್ ಅವರು ಇನ್ನೂ ನಡೆಯಲು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ.
