ಇಬ್ಬರು ಮಕ್ಕಳನ್ನು ಕೊಂದು ಪರಪ್ಪನ ಅಗ್ರಹಾರ ಸೇರಿದ್ದ ತಾಯಿ ಗಂಗಾದೇವಿ ಜೈಲಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮೃತ ಗಂಗಾದೇವಿ ಜಾಲಹಳ್ಳಿ ವಿಲೇಜ್‌ನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದಳು. ಏ.8ರಂದು (ಮಂಗಳವಾರ) ರಾತ್ರಿ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಬಳಿಕ ತಾನೇ ಮರುದಿನ ಬುಧವಾರ ಬೆಳಗ್ಗೆ 112ಕ್ಕೆ ಫೋನ್ ಮಾಡಿ ಪೊಲೀಸರಿಗೆ ವಿಷಯ ತಿಳಿಸಿ, ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ವಿಷಯ ತಿಳಿದ ತಕ್ಷಣ ಜಾಲಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಆಕೆಯನ್ನು ವಶಕ್ಕೆ ಪಡೆದಿದ್ದರು.
ಘಟನೆ ಬಳಿಕ, ಆರೋಪಿಯನ್ನು ಬಂಧಿಸಿದ್ದ ಪೊಲೀಸರು ನಾಯ್ಯಾಲಯದ ಎದುರು ಆಕೆಯನ್ನು ಹಾಜರು ಪಡಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಅದೇ ದಿನ ರಾತ್ರಿ ಗಂಗಾದೇವಿ ಜೈಲಿನ ಶೌಚಾಲಯದಲ್ಲಿ ತಾನು ಧರಿಸಿದ್ದ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ, ಗಂಗಾದೇವಿ ಸಾವನ್ನಪ್ಪಿದ್ದಾಳೆ.
ಮರಣೋತ್ತರ ಪರೀಕ್ಷೆ ಮಾಡಿ ನಂತರ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರಪ್ರದೇಶ ಮೂಲದ ಗಂಗಾದೇವಿ ಗಂಡನ ಜತೆಗೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ವಾಸವಾಗಿದ್ದಳು. ಆಕೆಯ ಪತಿ ಇತ್ತೀಚೆಗೆ ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿದ್ದಾನೆ. ಮಗಳ ಜತೆಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆ ಸ್ವತಃ ಗಂಗಾದೇವಿಯೇ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ಈ ಸುದ್ದಿ ಓದಿದ್ದೀರಾ? ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ!
ಎಪ್ರಿಲ್ 8ರಂದು ರಾತ್ರಿ ತನ್ನ ಮಗಳು ಲಕ್ಷ್ಮೀ (9) ಹಾಗೂ ಮಗ ಗೌತಮ್ (7) ನನ್ನು ತಾನೇ ಕೊಲೆ ಮಾಡಿದ್ದಳು. ಮಹಿಳೆಯನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದರು. ಆರೋಪಿ ಗಂಗಾದೇವಿ ಖಾಸಗಿ ಕಂಪನಿಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಳು.