ಕುಡಿಯೋಕೆ ನೈಂಟಿ ಎಣ್ಣೆ ಕೊಡಿಸಲಿಲ್ಲ ಎಂದು ಹಿರಿಯ ನಾಗರಿಕನ ಮುಖದ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ.
ಸಿಂಗಾರ ವೇಲು ಹಲ್ಲೆಗೊಳಗಾದ ವ್ಯಕ್ತಿ. ಆರೋಪಿ ಧರ್ಮ ತಲೆಮರೆಸಿಕೊಂಡಿದ್ದಾನೆ. ಡಿಸೆಂಬರ್ 29ರ ರಾತ್ರಿ 8:30 ರ ಸುಮಾರಿಗೆ ನಡೆದ ಘಟನೆ ಎಂದು ತಿಳಿದುಬಂದಿದೆ.
ಸಿಂಗಾರ ವೇಲು ಹಿರಿಯ ನಾಗರಿಕರಾಗಿದ್ದು, ಗಿರಿನಗರದ ಮನೆ ಬಳಿ ಕಬಾಬ್ ತಿನ್ನುತ್ತಿದ್ದರು. ಈ ವೇಳೆ, ಅಲ್ಲಿಗೆ ಬಂದ ಆರೋಪಿ ಧರ್ಮ ಕುಡಿಯಲು ನೈಂಟಿ ಕೊಡಿಸುವಂತೆ ಪೀಡಿಸಿದ್ದಾನೆ. ಆದರೆ, ವೇಲು ಎಣ್ಣೆ ಕೊಡಿಸಲು ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡು ಪಕ್ಕದಲ್ಲೇ ಇದ್ದ ಇಟ್ಟಿಗೆ ಕೈಗೆ ತೆಗೆದುಕೊಂಡು ವೇಲು ಎಂಬುವವರಿಗೆ ಕಾಲಲ್ಲಿ ಒದ್ದು, ಮುಖದ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ಇದರ ಪರಿಣಾಮ ವೇಲು ಅವರ ತುಟಿಗೆ ಗಂಭೀರ ಗಾಯವಾಗಿದೆ. ಗಾಯಾಳು ವೇಲು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಹೊಸ ತಲೆಮಾರಿಗೆ ಹಳೆಯ ನೆನಪು 6 | ಮತ್ತೆ ಪುಟಿದೆದ್ದ ಜೆಪಿನಗರ 7ನೇ ಹಂತದ ಪುಟ್ಟೇನಹಳ್ಳಿ ಪ್ರಾಚೀನ ಕೆರೆ
ಘಟನೆಯಲ್ಲಿ ಸಿಂಗಾರ ವೇಲು ಅವರ ತುಟಿ ಹರಿದುಹೋಗಿದ್ದು, ಆಸ್ಪತ್ರೆಗೆ ದಾಖಲಿಸಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಲಾಗಿದೆ. ಹಲ್ಲೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಧರ್ಮನಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.