ರಾಜ್ಯ ರಾಜಧಾನಿ ಬೆಂಗಳೂರಿನ ‘ನಮ್ಮ ಮೆಟ್ರೊ’ ರೈಲು ನೇರಳೆ ಮಾರ್ಗದ ಇಂದಿರಾನಗರ ನಿಲ್ದಾಣದಲ್ಲಿ ಕೆಳಗೆ ಬಿದ್ದ ಮೊಬೈಲ್ ಅನ್ನು ತೆಗೆದುಕೊಳ್ಳಲು ಮಹಿಳೆಯೊಬ್ಬರು ರೈಲು ಟ್ರ್ಯಾಕ್ ಮೇಲೆ ಜಿಗಿದ ಘಟನೆ ನಡೆದಿದೆ.
ಹೌದು, ಹೊಸ ವರ್ಷದ ದಿನದಂದು ಸಾಯಂಕಾಲ 6:40ರ ಸುಮಾರಿಗೆ ಈ ಘಟನೆ ನಡೆದಿದೆ. ಮಹಿಳೆ ಪ್ಲಾಟ್‌ಫಾರಂನಿಂದ ರೈಲು ಟ್ರ್ಯಾಕ್‌ಗೆ ಜಿಗಿಯುತ್ತಿದ್ದಂತೆ ಬಿಎಂಆರ್‌ಸಿಎಲ್ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಹಿನ್ನೆಲೆ, 15 ನಿಮಿಷ ಮೆಟ್ರೋ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು.
ಏನಿದು ಘಟನೆ?
ಇಂದಿರಾನಗರ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 1ರಲ್ಲಿ ರೈಲಿಗಾಗಿ ಮಹಿಳೆಯೊಬ್ಬರು ಕಾಯುತ್ತಿದ್ದರು. ವರ್ಷದ ಮೊದಲ ದಿನ ಸಂಜೆ 6.20 ಸುಮಾರಿಗೆ ಮಹಿಳೆಯೊಬ್ಬರು ಫೋನ್‌ನಲ್ಲಿ ಮಾತನಾಡುತ್ತಾ ಪ್ಲಾಟ್‌ಫಾರಂನಲ್ಲಿ ತೆರಳುತ್ತಿದ್ದಾಗ ಮೊಬೈಲ್ ಜಾರಿ ಹಳಿ ಮೇಲೆ ಬಿದ್ದಿದೆ. ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ ಬಗ್ಗೆ ಅರಿವಿಲ್ಲದ ಮಹಿಳೆ ಹಳಿಗೆ ಇಳಿದಿದ್ದಾರೆ.
ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದಾರೆ. ಸಹ ಪ್ರಯಾಣಿಕರು ಹಾಗೂ ಮೆಟ್ರೋ ಸಿಬ್ಬಂದಿ ಮಹಿಳೆಯನ್ನು ಮೇಲಕ್ಕೆ ಎತ್ತಿ ರಕ್ಷಿಸಿದ್ದಾರೆ. ಇದರ ಪರಿಣಾಮವಾಗಿ ಪೀಕ್ ಅವರ್ ನಲ್ಲಿ 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಳ್ಳಲು ಕಾರಣವಾಯಿತು.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಈ ಬಗ್ಗೆ ಮಾತನಾಡಿ, “ಇದೊಂದು ವಿಚಿತ್ರ ಘಟನೆ. 750 ವೋಲ್ಟ್ ವಿದ್ಯುತ್ ಹರಿಯುವ ಹಳಿಗಳಲ್ಲಿ ಮೆಟ್ರೋ ರೈಲು ಸಂಚರಿಸುತ್ತದೆ. ಮಹಿಳೆ ಕೆಳಗೆ ಜಿಗಿಯುವುದನ್ನು ಗಮನಿಸಿದ ನಮ್ಮ ಸಿಬ್ಬಂದಿಯ ಸಮಯ ಪ್ರಜ್ಞೆ ಮೆರೆದು ವಿದ್ಯುತ್ ಸರಬರಾಜು ಕಡಿತಗೊಳಿಸಿದ್ದಾರೆ. ಅವರ ಚುರುಕಾದ ಕ್ರಮವೇ ಆಕೆಯ ಜೀವ ಉಳಿಸಿದೆ. ಇದು ಅತ್ಯಂತ ಅಪಾಯಕಾರಿಯಾದ ಕಾರಣ ಟ್ರ್ಯಾಕ್‌ಗಳ ಬಳಿ ಎಲ್ಲೂ ಯಾರನ್ನೂ ಅನುಮತಿಸಲಾಗುವುದಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹೊಸ ವರ್ಷ ಆಚರಣೆ ವೇಳೆ ಸುರಕ್ಷತೆಗೆ ಬೆಸ್ಕಾಂ ಮನವಿ
ಫೆಬ್ರುವರಿಯಲ್ಲಿ ಇಂತಹ ಘಟನೆ ನಡೆದಿತ್ತು!
ಕಳೆದ ವರ್ಷ ಫೆಬ್ರುವರಿಯಲ್ಲಿ ಇಬ್ಬರು ವ್ಯಕ್ತಿಗಳು ಮೆಟ್ರೋ ರೈಲು ಹಳಿಗಳನ್ನು ದಾಟಲು ಯತ್ನಿಸಿದ್ದರು. ಅವರನ್ನು ಭದ್ರತಾ ಸಿಬ್ಬಂದಿ ರಕ್ಷಿಸಿದ್ದರು.
ನಾಗಸಂದ್ರ ಕಡೆಗೆ ಹೋಗಬೇಕಿದ್ದ ಪ್ರಯಾಣಿಕರಿಬ್ಬರು ಕುವೆಂಪು ರಸ್ತೆ ಮೆಟ್ರೊ ನಿಲ್ದಾಣದಲ್ಲಿ ಮೆಜೆಸ್ಟಿಕ್ ಕಡೆಗೆ ಹೋಗುವ ಪ್ಲಾಟ್‌ಫಾರಂಗೆ ಹೋಗಿದ್ದರು. ಎದುರಿನ ಪ್ಲಾಟ್‌ಫಾರಂಗೆ ಹೋಗಬೇಕಿತ್ತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದರು. ಇದನ್ನು ಕೇಳಿದ ತರಕಾರಿ ಬ್ಯಾಗ್ ಹಿಡಿದಿದ್ದ ಇಬ್ಬರು ಎದುರಿನ ಪ್ಲಾಟ್‌ಫಾರಂಗೆ ತೆರಳಲು ರೈಲು ಟ್ರ್ಯಾಕ್ ಮೇಲೆ ತೆರಳಲು ಇಳಿದರು.
ಸ್ಥಳದಲ್ಲಿದ್ದ ಸಹ ಪ್ರಯಾಣಿಕರು ಮತ್ತು ಭದ್ರತಾ ಸಿಬ್ಬಂದಿ ಕೂಗಿ ಅವರನ್ನು ಮುಂದೆ ಹೋಗದಂತೆ ಎಚ್ಚರಿಸಿ ವಾಪಸ್ ಕರೆದರು. ಬಳಿಕ ಅವರನ್ನು ಮೇಲಕ್ಕೆ ಹತ್ತಿಸಿದ ಘಟನೆ ನಡೆದಿತ್ತು.