ಪ್ರಿಯಕರನನ್ನು ವಶೀಕರಣ ಮಾಡಿಕೊಳ್ಳಲು ಹೋಗಿ ಯುವತಿಯೊಬ್ಬಳು ₹8.2 ಲಕ್ಷ ಕಳೆದುಕೊಂಡ ಘಟನೆ ಬೆಂಗಳೂರಿನ ಜಾಲಹಳ್ಳಿಯಲ್ಲಿ ನಡೆದಿದೆ.
ಮೋಸ ಹೋದ ಯುವತಿ ಓರ್ವ ಯುವಕನನ್ನು ಪ್ರೀತಿ ಮಾಡುತ್ತಿದ್ದಳು. ಕಾರಣಾಂತರಗಳಿಂದ ಇಬ್ಬರ ನಡುವೆ ವೈಮನಸ್ಸು ಮೂಡಿ ದೂರ ಆಗಿದ್ದರು. ಬ್ರೇಕ್ ಅಪ್‌ನಿಂದ ನೊಂದಿದ್ದ ಯುವತಿ ತಾನು ಪ್ರೀತಿ ಮಾಡುತ್ತಿದ್ದ ಮಾಜಿ ಪ್ರಿಯಕರನನ್ನು ಮಾಟ ಮಂತ್ರ ಅಥವಾ ವಶೀಕರಣದ ಮೂಲಕ ಮತ್ತೆ ತನ್ನ ಬಳಿ ಸೆಳೆಯಲು ತನ್ನ ಸ್ನೇಹಿತನ ಸಹಾಯದಿಂದ ಆನ್‌ಲೈನ್ ಮೂಲಕ ವಶೀಕರಣ ಮಾಡುವ ಜ್ಯೋತಿಷಿಯೊಬ್ಬರನ್ನು ಸಂಪರ್ಕ ಮಾಡುತ್ತಾಳೆ.
ಮೊದಲಿಗೆ ಆನ್‌ಲೈನ್ ಮುಖಾಂತರ ಭೇಟಿ ಮಾಡಿದ ಜ್ಯೋತಿಷಿ, ‘ನಿನ್ನ ಪ್ರಿಯಕರ ನಿನಗೆ ಸಿಗುತ್ತಾನೆ. ಆದಷ್ಟು ಬೇಗ ಬಂದು ನಿನ್ನನ್ನು ತಲುಪುತ್ತಾನೆ’ ಎಂದು ಯುವತಿಯಲ್ಲಿ ಮೊದಲಿಗೆ ಭರವಸೆ ತುಂಬಿದ್ದಾನೆ.
ಪ್ರಿಯಕರನನ್ನು ವಶೀಕರಣ ಮಾಡಿಕೊಳ್ಳಲು ಹಾಗೂ ಆತನ ಪೋಷಕರ ಮೇಲೆ ಮಾಟಮಂತ್ರದ ಆಚರಣೆಗಳನ್ನು ಮಾಡಲು ಡಿಸೆಂಬರ್ 22 ರಂದು ಮೊದಲ ಹಂತವಾಗಿ ₹2.4 ಲಕ್ಷ ಯುವತಿ ಆನ್‌ಲೈನ್ ಮೂಲಕ ಜ್ಯೋತಿಷಿಗೆ ಪಾವತಿ ಮಾಡಿದ್ದಾಳೆ.
ಬಳಿಕ, ಪದೇ ಪದೆ ಹಣಕಾಸಿನ ಬೇಡಿಕೆ ಇಟ್ಟ ಸ್ವಾಮೀಜಿ, ಕೆಲವು ದಿನಗಳ ನಂತರ, ಹೆಚ್ಚುವರಿ ₹1.7 ಲಕ್ಷ ಪಾವತಿ ಮಾಡುವಂತೆ ಕೇಳುತ್ತಾನೆ. ನಿರಂತರವಾಗಿ ಹಣ ಕೇಳಿದಾಗ ಯುವತಿ ಹಣವಿಲ್ಲ ಎಂದಾಗ ‘ಹಣ ನೀಡದಿದ್ದರೆ ನಿನ್ನ ಮಾಜಿ ಪ್ರಿಯಕರನಿಗೆ ಈ ವಿಷಯ ತಿಳಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಯುವತಿ ಜನವರಿ 10ರಂದು ₹4.1 ಲಕ್ಷ ನೀಡಿದ್ದಾಳೆ. ಹೀಗೆ ಯುವತಿ ಜ್ಯೋತಿಷಿಗೆ ಬರೋಬ್ಬರಿ ₹8.2 ಲಕ್ಷ ನೀಡಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮದ್ಯಪಾನ ಮಾಡಿ ಶಾಲಾ ವಾಹನ ಓಡಿಸಿದ ಚಾಲಕರು; ಡಿಎಲ್ ಅಮಾನತಿಗೆ ಸೂಚನೆ
ಯುವತಿಯ ಈ ವಿಚಾರ ತಿಳಿದ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಜ್ಯೋತಿಷಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.