ವಿಶೇಷ ಚೇತನ ಯುವತಿಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುರೇಂದ್ರ ಮೂರ್ತಿ ಎಂಬಾತನ ವಿರುದ್ಧ ಯುವತಿ ದೂರು ದಾಖಲಿಸಿದ್ದಾರೆ. ಸುರೇಂದ್ರ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಬಂಧ ಹೊಂದಿದ್ದು, ಮದುವೆಯಾಗದೆ ವಂಚಿಸಿದ್ದಾನೆ. ಅಲ್ಲದೆ, ತನ್ನಿಂದ ಹಣವನ್ನೂ ಪಡೆದಿದ್ದಾನೆ ಎಂದು ದೂರಿನಲ್ಲಿ ಯುವತಿ ಆರೋಪಿಸಿದ್ದಾರೆ.
ಸುರೇಂದ್ರ ಮೂರ್ತಿ ಹಾಗೂ ವಿಶೇಷ ಚೇತನ ಯುವತಿಗೆ ಮೊದಲು ಪರಿಚಯವಾಗಿತ್ತು. ಆ ನಂತರ ಈ ಪರಿಚಯ ಪ್ರೀತಿಗೆ ತಿರುಗಿತ್ತು. ಸುರೇಂದ್ರ ಮೂರ್ತಿ ಬ್ಯುಸಿನೆಸ್ ಮಾಡಬೇಕಿದೆ. ಅದಕ್ಕೆ ಹಣ ಬೇಕೆಂದು ಯುವತಿ ಹತ್ತಿರ ಕೇಳಿದ್ದಾನೆ. ಆತನಿಗಾಗಿ ಯುವತಿ ಸಾಲ ಮಾಡಿ, ತನ್ನ ಹತ್ತಿರವಿದ್ದ ಚಿನ್ನವನ್ನೂ ಅಡವಿಟ್ಟು ಹಣ ನೀಡಿದ್ದಾರೆ. ಆದರೆ, ಹಣವೆಲ್ಲ ಪಡೆದ ಬಳಿಕ ಮದುವೆಯಾಗದೆ ವಂಚಿಸಿದ್ದಾನೆ. ಅಲ್ಲದೆ, ಪ್ರೀತಿಯಲ್ಲಿದ್ದ ವೇಳೆ ದೈಹಿಕ ಸಂಬಂಧವನ್ನೂ ಬೆಳೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಸೇರಿದಂತೆ ರಾಜ್ಯದ 12 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ
ಘಟನೆ ಸಂಬಂಧ, ವಿಶೇಷ ಚೇತನ ಯುವತಿ ಫೆಬ್ರವರಿ ತಿಂಗಳಲ್ಲಿ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಕೃತ್ಯವು ಕೊಡಗೆಹಳ್ಳಿ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಪ್ರಕರಣವನ್ನು ಕೊಡಿಗೆಹಳ್ಳಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.