ವಿಮಾನ ನಿಲ್ದಾಣದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕಚೇರಿಯನ್ನು ಸ್ಫೋಟ ಮಾಡುವುದಾಗಿ ನಿಲ್ದಾಣದ ಶೌಚಾಲಯದ ಕನ್ನಡಿ ಮೇಲೆ ಬೆದರಿಕೆ ಸಂದೇಶ ಬರೆದ ಘಟನೆ ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಈ ಬಗ್ಗೆ ವಿಚಾರ ತಿಳಿಯುತ್ತಿದ್ದಂತೆ ಶ್ವಾನದಳ ಹಾಗೂ ಸಿಐಎಸ್ಎಫ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆ ಬಳಿಕ, ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತಿಳಿದುಬಂದಿದೆ.
“25 ನಿಮಿಷದಲ್ಲಿ ಕಟ್ಟಡಗಳು ಸ್ಪೋಟವಾಗಲಿವೆ” ಎಂದು ವಿಮಾನ ನಿಲ್ದಾಣದ ಆಲ್ಪಾ 3 ಬಿಲ್ಡಿಂಗ್ನಲ್ಲಿನ ಶೌಚಾಲಯದ ಕನ್ನಡಿ ಮೇಲೆ ಬರೆಯಲಾಗಿತ್ತು.
ನಿಲ್ದಾಣದ ಸಿಬ್ಬಂದಿ ಬೆಳಿಗ್ಗೆ ಶೌಚಾಲಯಕ್ಕೆ ತೆರಳಿದ ವೇಳೆ, ಕನ್ನಡಿಯ ಮೇಲೆ ಬರೆದ ಬರಹವನ್ನು ಕಂಡು ಕೂಡಲೇ ಭದ್ರತಾ ಪಡೆಗೆ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಹಾಲಕ್ಷ್ಮೀ ಯೋಜನೆ | ಕಾಂಗ್ರೆಸ್ ಗೆಲುವಿನ ಭರವಸೆ; ಖಾತೆ ತೆರೆಯಲು ಪೋಸ್ಟ್ ಆಫೀಸ್ ಮುಂದೆ ನಿಂತ ಮಹಿಳೆಯರು
ಕನ್ನಡಿ ಮೇಲೆ ಬರೆದಿದ್ದ ಈ ಬೆದರಿಕೆ ಸಂದೇಶದಿಂದ ನಿಲ್ದಾಣದ ಸಿಬ್ಬಂದಿ ಹಾಗೂ ಭದ್ರತಾ ಪಡೆ ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.
ಈ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಇದೊಂದು ಹುಸಿ ಬಾಂಬ್ ಸಂದೇಶ ಎಂದು ತಿಳಿದುಬಂದಿದೆ. ಇನ್ನು ಸಿಬ್ಬಂದಿಯಿಂದಲೇ ಹುಸಿ ಬೆದರಿಕೆ ಸಂದೇಶ ಬರೆದಿರುವ ಶಂಕೆ ವ್ಯಕ್ತವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.