ಮನೆ ಮಾಲೀಕರ ಮನವೊಲಿಸಿ ಅವರಿಂದ ಆಸ್ತಿ ದಾಖಲೆಗಳನ್ನು ಪಡೆದು ನಕಲಿ ದಾಖಲೆಗಳನ್ನು ಸೃಷ್ಠಿಸಿ ವಂಚನೆ ಮಾಡುತ್ತಿದ್ದ ಮಧ್ಯವರ್ತಿಗಳಿಗೆ ಸಹಕಾರ ಹಾಗೂ ಸರಿಯಾಗಿ ದಾಖಲೆಗಳನ್ನು ಪರಿಶೀಲಿಸದೆ, ನಕಲಿ ಭೂ ದಾಖಲೆಗಳನ್ನು ಹೊಂದಿದ್ದವರಿಗೆ ಸಾಲ ನೀಡಿದ್ದ ನಾಲ್ವರು ಬ್ಯಾಂಕ್ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಸೇಂಟ್ ಮಾರ್ಕ್ಸ್ ರಸ್ತೆಯ ಬ್ಯಾಂಕ್‌ವೊಂದರ ಎಜಿಎಂ ಮುರಳೀ ಧರ್, ಮಹಾಲಕ್ಷ್ಮಿ ಲೇಔಟ್‌ನ ಬ್ಯಾಂಕ್‌ವೊಂದರ ವ್ಯವಸ್ಥಾಪಕ ರಾಕೇಶ್, ಹೊಸಕೋಟೆಯಲ್ಲಿರುವ ಬ್ಯಾಂಕ್‌ನ ಮಲ್ಲಿಕಾರ್ಜುನ್, ಜಯನಗರ ಬ್ಯಾಂಕ್‌ವೊಂದರ ಶಶಿಕಾಂತ್ ಬಂಧಿತರು.
ಇದೀಗ, ಮನೆ ಮಾರಾಟ ಮಾಡಲು ಮನೆಯ ಮಾಲೀಕರು ಬ್ರೋಕರ್‌ಗಳಿಗೆ ಜಮೀನಿನ ದಾಖಲೆಗಳನ್ನು ನೀಡುತ್ತಾರೆ. ಆ ದಾಖಲೆಗಳನ್ನು ಪಡೆದ ಮಧ್ಯವರ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ಪಡೆದುಕೊಳ್ಳುತ್ತಾರೆ. ಸಾಲ ನೀಡಬೇಕಾದಾಗ ಸಾಲ ಪಡೆದುಕೊಳ್ಳಲು ನೀಡಿರುವ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಬೇಕು. ಆದರೆ, ಇಲ್ಲಿ ದಾಖಲೆಗಳ ಪರಿಶೀಲನೆ ಮಾಡಿಲ್ಲ. ಜತೆಗೆ, ಲೋನ್ ಅಪ್ರೋವ್ ಆಗಿರುವ ಸ್ವತ್ತಿನಲ್ಲಿ ಇಸಿ ಪಡೆದುಕೊಂಡಿಲ್ಲ. ಹೀಗೆ, ನಕಲಿ ದಾಖಲೆ ಸೃಷ್ಟಿ ಮಾಡಿದವರಿಗೆ ಸುಮಾರು ನಾಲ್ಕೂವರೆ ಕೋಟಿ ಸಾಲ ಇದೇ ರೀತಿಯಾಗಿ ಅಪ್ರೂವ್ ಮಾಡಿದ್ದರು ಎಂಬ ಆರೋಪದ ಮೇಲೆ ಬ್ಯಾಂಕ್ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರ ಪೈಕಿ ಮರುಳೀಧರ್, ರಾಕೇಶ್ ದಾಖಲೆ ಪರಿಶೀಲನೆ ನಡೆಸದೇ ಸಾಲ ಮಂಜೂರು ಮಾಡುತ್ತಿದ್ದರು. ಮಲ್ಲಿಕಾರ್ಜುನ್, ಶಶಿಕಾಂತ್ ಅವರು ಮಧ್ಯವರ್ತಿಗಳಿಗೆ ನಕಲಿ ಖಾತೆಗಳನ್ನು ಮಾಡಿಕೊಡುತ್ತಿದ್ದರು. ಇವರು ನಾನಾ ಬ್ಯಾಂಕ್‌ಗಳಲ್ಲಿ ವ್ಯವಸ್ಥಾಪಕರಾಗಿ, ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದೆಹಲಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ₹26 ಕೋಟಿ ಮೌಲ್ಯದ ಕೊಕೇನ್ ವಶ
ಈ ಹಿಂದೆ ಪುಟ್ಟೇನಹಳ್ಳಿ ಮತ್ತು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಆರಂಭಿಸಿದ ಸಿಸಿಬಿ ಪೊಲೀಸರು ಐದು ಏಜೆಂಟ್‌ಗಳನ್ನು ಬಂಧಿಸಿದ್ದರು. ಅವರ ವಿಚಾರಣೆ ವೇಳೆ ನೀಡಿದ ಮಾಹಿತಿ ಆಧರಿಸಿ ತನಿಖೆ ಮುಂದುವರೆಸಿದ ಪೊಲೀಸರು ಈ ಪ್ರಕರಣದಲ್ಲಿ ಮತ್ತೆ ನಾಲ್ಕು ಬ್ಯಾಂಕ್ ಅಧಿಕಾರಗಳನ್ನು ಬಂಧಿಸಿದ್ದಾರೆ.