ರೌಡಿಶೀಟರ್ ಕಾರ್ತಿಕೇಯನ್ (40) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಬಾಣಸವಾಡಿ ವ್ಯಾಪ್ತಿಯ ರಾಮಸ್ವಾಮಿ ಪಾಳ್ಯದಲ್ಲಿ ನಡೆದಿದೆ.
ರಾಮಸ್ವಾಮಿ ಪಾಳ್ಯದ ನಡುರಸ್ತೆಯಲ್ಲಿ ಅಟ್ಟಾಡಿಸಿ ರೌಡಿಶೀಟರ್ ಕಾರ್ತಿಕೇಯನ್ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಕಾರ್ತಿಕೇಯನ್ ಮೃತಪಟ್ಟಿದ್ದಾನೆ.
ಹಳೇ ದ್ವೇಷ ಹಾಗೂ ರಿಯಲ್ಎಸ್ಟೇಟ್ ವ್ಯವಹಾರದಲ್ಲಿ ಜಗಳ ಆಗಿ ಹತ್ಯೆ ನಡೆದಿರೋ ಶಂಕೆ ವ್ಯಕ್ತವಾಗಿದೆ. ಈ ಕುರಿತು ಬಾಣಸವಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾರ್ತಿಕೇಯನ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ದಾಖಲಾಗಿತ್ತು. ಎರಡು ವರ್ಷಗಳ ಹಿಂದೆ ರೌಡಿಶೀಟ್ನಿಂದ ಕೈ ಬಿಡಲಾಗಿತ್ತು. ಈ ಹಿಂದೆ ಬಾಣಸವಾಡಿ ಪೊಲೀಸರಿಂದ ರೌಡಿಶೀಟರ್ ಕಾರ್ತಿಕೇಯನ್ ಗಡಿಪಾರಾಗಿದ್ದನು. ನಂತರ ಮತ್ತೆ ಬೆಂಗಳೂರಿಗೆ ಬಂದು ಬಾಣಸವಾಡಿಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದ ಕಚೇರಿ ತೆರೆದಿದ್ದನು. ಆದರೆ, ಮಂಗಳವಾರ ರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ಸಿಕ್ಕಿದ್ದ ಹೆಣ್ಣು ಭ್ರೂಣದ ತಾಯಿ ಪತ್ತೆ
ಕಾರ್ತಿಕೇಯನ್ ವಿವಾದಿತ ಜಾಗಗಳಿಗೆ ಬೇಲಿ ಹಾಕಿ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದನು. ಈತ ಮೈಕಲ್ ಮಂಜ ಹಾಗೂ ಸಹಚರರ ವಿರೋಧ ಕಟ್ಟಿಕೊಂಡಿದ್ದನು ಎಂದು ತಿಳಿದುಬಂದಿದೆ. ಸ್ನೇಹಿತರ ಬಳಿ ಇರುವ ಲೆಸೆನ್ಸ್ ಇರೋ ಗನ್ ಪಡೆದುಕೊಂಡು ಕೆಲವರಿಗೆ ತೋರಿಸಿ ಬೆದರಿಕೆ ಹಾಕುತ್ತಿದ್ದನು ಎಂಬ ಆರೋಪ ಕಾರ್ತಿಕೇಯನ್ ಮೇಲೆ ಇತ್ತು.
ಘಟನಾ ಸ್ಥಳಕ್ಕೆ ಬಾಣಸವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.