ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತವಾಗಿ ಅಳವಡಿಸಿದ ಜಾಹೀರಾತು ಫಲಕಗಳ ತೆರವು ಹಾಗೂ ಅನಧಿಕೃತ ಜಾಹೀರಾತು ಅಳವಡಿಸಿದವರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಹೈಕೋರ್ಟ್‌ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವರದಿ ಸಲ್ಲಿಸಿದೆ.
ಬೆಂಗಳೂರಿನಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ಬಗ್ಗೆ ಆಕ್ಷೇಪಿಸಿ ನಗರದ ಸರಸ್ವತಿಪುರ ನಿವಾಸಿ ಮಾಯಿಗೇಗೌಡ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ ಮತ್ತು ಟಿ.ಜಿ.ಶಿವಶಂಕರೇಗೌಡ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿದೆ.
ನ್ಯಾಯಪೀಠಕ್ಕೆ ಬಿಬಿಎಂಪಿ ವಕೀಲರು ವರದಿ ಸಲ್ಲಿಸಿದರು. ಈ ವರದಿಯನ್ನು ಪರಿಶೀಲಿಸಿ, ಅದರಲ್ಲಿನ ಆಕ್ಷೇಪಣೆಗಳಿದ್ದರೆ, ತಿಳಿಸುವಂತೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಪೀಠ ತಿಳಿಸಿದೆ. ವಿಚಾರಣೆ ಮುಂದೂಡಿದೆ.
2024ರ ಜನವರಿ 19ರಿಂದ ಫೆಬ್ರವರಿ 10ರ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಅಳವಡಿಸಿರುವ ಜಾಹೀರಾತು ಫಲಕಗಳ ತೆರವು ಮಾಡುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಗಿದೆ.
ಈಗ ನಡೆಸಿದ ಸಮೀಕ್ಷೆಯಲ್ಲಿ ನಗರದಲ್ಲಿ 402 ಜಾಹೀರಾತು ಫಲಕ ಗುರುತು ಮಾಡಲಾಗಿದೆ. ಅವುಗಳ ಪೈಕಿ 150 ಅಧಿಕೃತ ಹಾಗೂ 251 ಅನಧಿಕೃತವಾಗಿದೆ. ಇನ್ನು 40 ಜಾಹೀರಾತುಗಳ ಅಳವಡಿಕೆ ಕುರಿತಂತೆ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿಯಿದೆ.
203 ಜಾಹೀರಾತು ಅಳವಡಿಕೆದಾರರ ವಿರುದ್ಧ ನೋಟಿಸ್ ಜಾರಿ ಮಾಡಲಾಗಿದೆ. ಈ ಪೈಕಿ 73 ಅಳವಡಿಕೆದಾರರೇ ಸ್ವಯಂ ಪ್ರೇರಿತವಾಗಿ ಜಾಹೀರಾತು ತೆರುವು ಮಾಡಿದ್ದರೇ, 123 ಜಾಹೀರಾತುಗಳನ್ನು ಬಿಬಿಎಂಪಿ ತೆರವುಗೊಳಿಸಿದೆ. ಇನ್ನು 12 ಜಾಹೀರಾತು ಫಲಕಗಳ ತೆರವುಗೊಳಿಸುವ ಕಾರ್ಯ ಬಾಕಿಯಿದೆ ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ; ರಾಜ್ಯ ಸರ್ಕಾರದ ಸುತ್ತೋಲೆ
ಬಿಬಿಎಂಪಿಯಿಂದ ಅನುಮತಿ ಪಡಿಯದೇ ಅನಧಿಕೃತವಾಗಿ ಜಾಹೀರಾತು ಹೋರ್ಡಿಂಗ್ ಹಾಕಿದವರ ವಿರುದ್ಧ ಎಫ್‌ಐಆರ್ ದಾಖಲಿಸುವ ಮೂಲಕ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
ಇನ್ನು ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ನೋಟಿಸ್ ಜಾರಿಗೊಳಿಸಲಾಗುತ್ತಿದೆ ಎಂದು ಬಿಬಿಎಂಪಿ ವರದಿಯಲ್ಲಿ ತಿಳಿಸಿದೆ.