ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದ ಜೈನ್ ಹೆರಿಟೇಜ್ ಶಾಲೆಗೆ ಮೇ 14ರಂದು ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ.
ದುಷ್ಕರ್ಮಿಗಳು ಮಧ್ಯರಾತ್ರಿ 12.20ರ ಸುಮಾರಿಗೆ ಬಾಂಬ್ ಮೇಲ್ ಕಳಿಸಿದ್ದು, ಬೆಳಗ್ಗೆ 7.30ಕ್ಕೆ ಶಾಲೆ ಸಿಬ್ಬಂದಿ ಇ-ಮೇಲ್ ಪರಿಶೀಲಿಸಿದಾಗ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು.
ಈ ಬಗ್ಗೆ ಶಾಲಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದ್ದಾರೆ. ಈ ಬಳಿಕ, ಹುಸಿ ಬಾಂಬ್ ಇ-ಮೇಲ್ ಎಂದು ಧೃಢವಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ನಗರದ ಹಲವು ಖಾಸಗಿ ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಇದರ ಬೆನ್ನಲ್ಲೇ ಇದೀಗ, ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಈ ಹಿಂದೆ ಕೂಡ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ಗಳು ಬಂದಿದ್ದವು. ಈ ಬಾಂಬ್ ಬೆದರಿಕೆ ಪ್ರಕರಣಗಳನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಪತ್ತು ನಿರ್ವಹಣೆಗಾಗಿ ತಂಡಗಳ ನಿಯೋಜನೆ: ತುಷಾರ್ ಗಿರಿ ನಾಥ್
ಇತ್ತೀಚೆಗೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಕೆಲವು ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಬಾಂಬ್ ಬೆದರಿಕೆ ಬಂದಿತ್ತು.