ಡಿಸೆಂಬರ್ 1 ರಂದು ಬೆಂಗಳೂರಿನಲ್ಲಿರುವ ಶಾಲೆಗಳಿಗೆ ನಕಲಿ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿತ್ತು. ಇದು ಇಡೀ ರಾಜ್ಯ ರಾಜಧಾನಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಬೆದರಿಕೆ ಸಂದೇಶದಿಂದ ಶಾಲಾ ಮಕ್ಕಳು, ಪೋಷಕರು, ಶಾಲಾ ಆಡಳಿತ ಸಿಬ್ಬಂದಿ ಕೆಲಕಾಲ ಆತಂಕದಲ್ಲಿದ್ದರು. ಇದೀಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿರುವ ಪೊಲೀಸ್ ಠಾಣೆಗಳಲ್ಲಿ 48 ಎಫ್‌ಐಆರ್ ದಾಖಲಾಗಿವೆ.
ಬೆಂಗಳೂರಿನಲ್ಲಿರುವ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಆತಂಕಕ್ಕೊಳಗಾದ ಶಾಲಾ ಆಡಳಿತ ಮಂಡಳಿಗಳು ಶಾಲೆಗಳಿಗೆ ರಜೆ ಘೋಷಿಸಿತ್ತು. ಇದೀಗ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಸೂಚನೆ ಮೇರೆಗೆ ನಗರದ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಗರದ ಪೊಲೀಸ್ ಠಾಣೆಗಳಲ್ಲಿ ದಾಖಲಾದ 48 ಎಫ್‌ಐಆರ್‌ಗಳನ್ನು ಕ್ರೋಡೀಕರಿಸಿ ಪೊಲೀಸ್ ಇಲಾಖೆ ತನಿಖೆ ನಡೆಸಲಿದೆ. ಈ ಪ್ರಕರಣದ ವಿಚಾರಣೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹಾಗೂ ಹೆಚ್ಚುವರಿ ಆಯುಕ್ತ (ಪಶ್ಚಿಮ) ಎನ್. ಸತೀಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈ ತಂಡದಲ್ಲಿ ಸೈಬರ್ ಪೊಲೀಸ್ ಅಧಿಕಾರಿಗಳು ಹಾಗೂ ಸೈಬರ್ ತಜ್ಞರು ಸೇರಿದಂತೆ ದಕ್ಷ ಅಧಿಕಾರಿಗಳನ್ನು ಈ ತನಿಖಾ ತಂಡದಲ್ಲಿ ಇರಲಿದ್ದಾರೆ.
ಶನಿವಾರ ಏನಾಯಿತು?
ಎಂದಿನಂತೆ ಶನಿವಾರವೂ ಶಾಲಾ ಮಕ್ಕಳು ಸಮವಸ್ತ್ರ ಧರಿಸಿ ಶಾಲೆಗೆ ತೆರಳಿದ್ದರು. ಪೋಷಕರು ಮಕ್ಕಳನ್ನು ಶಾಲೆವರೆಗೂ ಬಿಟ್ಟು ಇನ್ನೇನು ಮನೆಗೆ ವಾಪಸ್ ಆಗಬೇಕು ಎನ್ನುವಷ್ಟರಲ್ಲಿ ನಗರದ ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ.
ಇದನ್ನು ಕಂಡು ಭಯಭೀತರಾದ ಶಾಲಾ ಆಡಳಿತ ಮಂಡಳಿಗಳು ಶಾಲೆಗೆ ರಜೆ ಘೋಷಣೆ ಮಾಡಿ, ಪೋಷಕರಿಗೆ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಕರೆ ಮಾಡಿ ತಿಳಿಸಿದ್ದಾರೆ. ಕ್ಷಣಕಾಲ ಏನಾಗುತ್ತಿದೆ ಎಂಬ ಅರಿವು ಇಲ್ಲದ ಮಕ್ಕಳು ಆತಂಕಕ್ಕೊಳಗಾಗಿದ್ದು ಕಂಡುಬಂದಿತು. ಕೆಲಕಾಲ ಶಾಲಾ ಆವರಣದ ಮುಂದೆ ಬಿಗುವಿನ ವಾತಾವರಣ ಕಂಡುಬಂದಿತು.
ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಕೆಲವೊಂದು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆಗಳು ಆಗಾಗ ಬರುತ್ತಿರುತ್ತವೆ. ಆದರೆ, ಶನಿವಾರ ಏಕಕಾಲಕ್ಕೆ ಬೆಂಗಳೂರಿನ 48 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿತ್ತು.
ಈ ಮೊದಲು ಇಮೇಲ್ ಮೂಲಕ ಬೆದರಿಕೆ ಸಂದೇಶ 15 ಶಾಲೆಗಳಿಗೆ ಬಂದಿತ್ತು. ಬಳಿಕ, ನಗರದಲ್ಲಿರುವ ಉಳಿದ ಆಡಳಿತ ಮಂಡಳಿಗಳು ತಮ್ಮ ತಮ್ಮ ಶಾಲೆಯ ಇಮೇಲ್ ಪರಿಶೀಲನೆ ಮಾಡಿದಾಗ ಅವರಿಗೂ ಬೆದರಿಕೆ ಸಂದೇಶ ಬಂದಿರುವುದು ಗೊತ್ತಾಗಿದೆ. ಬರೋಬ್ಬರಿ 48 ಶಾಲೆಗಳಿಗೆ ಬೆದರಿಕೆ ಸಂದೇಶಗಳು ಬಂದಿದ್ದವು.
ಬನ್ನೇರುಘಟ್ಟದ 7 ಶಾಲೆ, ಹೆಬ್ಬಗೋಡಿ 4, ಸರ್ಜಾಪುರ 5, ಜಿಗಣಿ 2 ಶಾಲೆಗಳಿಗೆ ಬೆದರಿಕೆ ಸಂದೇಶಗಳು ಬಂದಿದ್ದವು.
ಬೆಂಗಳೂರಿನ ದಕ್ಷಿಣ ವಲಯ-1ರಲ್ಲಿ 15 ಶಾಲೆಗಳಿಗೆ, ದಕ್ಷಿಣ ವಲಯ 2ರಲ್ಲಿ 3, ವಲಯ 3ರಲ್ಲಿ 10 ಹಾಗೂ ವಲಯ 4ರಲ್ಲಿ 4 ಶಾಲೆಗಳಿಗೆ ಬೆದರಿಕೆ ಸಂದೇಶಗಳು ಬಂದಿದ್ದವು. ಉತ್ತರ ವಲಯಗಳಲ್ಲಿ ಒಟ್ಟು 7 ಶಾಲೆಗಳಿಗೆ ಹಾಗೂ ಆನೇಕಲ್ ತಾಲೂಕಿನ 5 ಶಾಲೆಗಳಿಗೂ ಇಂತಹದ್ದೇ ಇಮೇಲ್ ಸಂದೇಶ ಬಂದಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ 44ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ: ಪೊಲೀಸರ ದೌಡು, ಆತಂಕದಲ್ಲಿ ಪೋಷಕರು
ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ತಕ್ಷಣವೇ ಬಾಂಬ್ ನಿಷ್ಕ್ರಿಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಆರಂಭಿಸಿದ್ದರು. ಮಕ್ಕಳನ್ನು ಶಾಲೆಯಿಂದ ಮನೆಗೆ ಕಳುಹಿಸಲಾಗಿತ್ತು.
“ಇದೊಂದು ಹುಸಿ ಬಾಂಬ್ ಕರೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ಪೋಷಕರು ಭಯಪಡಬೇಕಿಲ್ಲ” ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದರು.
ಬಾಂಬ್ ಬೆದರಿಕೆ ಹಾಕಲು ಆರೋಪಿಗಳು ವರ್ಚ್ಯುಯಲ್ ಪ್ರವೇಟ್ ನೆಟ್ವರ್ಕ್ (ವಿಪಿಎನ್) ಬಳಸಿ ಇ–ಮೇಲ್ ಮೂಲಕ ಸಂದೇಶ ಕಳುಹಿಸಿದ್ದಾರೆ. ಈ ಕೃತ್ಯ ನಡೆಸಲೆಂದೇ ಆರೋಪಿಗಳು ನಕಲಿ ಐಡಿ ರಚಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ವಿಪಿಎನ್ ಬಳಸಿ ಇಮೇಲ್ ಮೂಲಕ ಸಂದೇಶ ರವಾನೆಯಾಗಿದೆ. ಯಾವ ಪ್ರದೇಶದಿಂದ ಹಾಗೂ ಯಾವ ಕಂಪ್ಯೂಟರ್ ಹಾಗೂ ನೆಟ್‌ವರ್ಕ್‌ಗಳಿಂದ ಇಮೇಲ್ ರವಾನಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸಿರ್ಟಸ್ ಎಂಬ ಕಂಪನಿಗೆ ಅಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.